ಉಜಿರೆ: ತುಳುನಾಡಿನಲ್ಲಿ ಬಾಳಿ ಬದುಕಿದ ಹಿರಿಯರು ಪ್ರಕೃತಿಯಲ್ಲಿ ದೊರೆಯುವ ಮರಗಿಡ, ಬಳ್ಳಿ, ಗೆಡ್ಡೆ ಮುಂತಾದವುಗಳನ್ನು ಆಹಾರವಾಗಿ, ಔಷಧಿಯಾಗಿ ಬಳಸಿಕೊಂಡು ಆಟಿ ತಿಂಗಳ ಕಷ್ಟದ ದಿನಗಳಲ್ಲಿ ರೋಗರುಜಿನಗಳು ಬಾಧಿಸದಂತೆ ಬದುಕಿದ್ದರು. ಇಲ್ಲಿನ ಎಲ್ಲಾ ಹಬ್ಬಗಳಿಗೂ ಕೃಷಿಯು ಮೂಲವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಹಲವಾರು ಆಚರಣೆಗಳು ಬೆಳೆದು ಬಂದಿದೆ.ಆಟಿ ತಿಂಗಳಿನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯದೇ ಪ್ರಕೃತಿಯನ್ನು ಆರಾಧಿಸುವ ವಿಶಿಷ್ಟ ಪದ್ಧತಿಯು ಕಂಡು ಬರುತ್ತದೆ ಎಂದು ಶ್ರೀ ಧ. ಮಂ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ದಿವಾಕರ ಕೊಕ್ಕಡ ಹೇಳಿದರು.
ಅವರು ಶ್ರೀ ಧ. ಮಂ. ಬಿ.ಎಡ್. ಕಾಲೇಜಿನಲ್ಲಿ ಹಮ್ಮಿಕೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನಮ್ಮ ಆಚರಣೆ, ಸಂಸ್ಕೃತಿ, ಸಂಸ್ಕಾರಗಳು, ನಂಬಿಕೆಗಳು ಇಂದಿನ ಜನಾಂಗದಲ್ಲಿ ಕಣ್ಮರೆಯಾಗುತ್ತಿದೆ.ಹಿಂದಿನ ಕಾಲದ ಕಷ್ಟ ಕಾರ್ಪಣ್ಯ ಸವಾಲು ನಮ್ಮನ್ನು ಗಟ್ಟಿಗೊಳಿಸಿದೆ.ಹಾಗಾಗಿ ಅವೆಲ್ಲವೂಗಳ ಅರಿವು ನಮ್ಮಲ್ಲಿರಬೇಕೆಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಉಜಿರೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ ಸೋಮಶೇಖರ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿಗಳಾದ ಯಶವಂತ್, ರಂಗ ನಿರ್ದೇಶಕರು, ಎಸ್.ಡಿ.ಎಂ. ಕಾಲೇಜು, ಉಜಿರೆ ಮಾತನಾಡಿ ಆಟಿ ತಿಂಗಳ ಆಚರಣೆಗಳ ಕುರಿತು ಮಾಹಿತಿ ನೀಡಿ ಆಟಿ ಕಳಂಜನ ‘ಪಾಡ್ದಾನ’ಗಳ ಹಿಂದಿರುವ ಸಂದೇಶವನ್ನು ತಿಳಿಸಿದರು.ಎಸ್.ಡಿ.ಎಂ. ಡಿ.ಎಡ್. ಕಾಲೇಜಿನ ಪ್ರಾಂಶುಪಾಲ ಸ್ವಾಮಿ ಕೆ ಎ ತುಳು ಭಾಷೆಯ ಅಂದವನ್ನು ಕುರಿತು ಮಾತನಾಡಿದರು.ಅಧ್ಯಕ್ಷೀಯ ಮಾತುಗಳನ್ನಾಡಿದ ಬಿ.ಎಡ್.ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಅವರು ತುಳುನಾಡಿನ ಜನರು ಪ್ರಕೃತಿಯನ್ನು ಆರಾಧಿಸಿಕೊಂಡು ಬಂದಿದ್ದು, ಇಲ್ಲಿನ ಸಂಸ್ಕೃತಿಯು ಶ್ರೇಷ್ಠತೆಯನ್ನು ಹೊಂದಿದೆ.ಆದುದರಿಂದ ಸಂಸ್ಕೃತಿಯ ಕುರಿತು ಗುರುಹಿರಿಯರು ಆಡುವ ಮಾತುಗಳನ್ನು ಇಂದಿನ ಯುವಜನತೆ ಆಲಿಸಿ ಪಾಲಿಸಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಹಿಂಗಾರ ಹೂವನ್ನು ಅರಳಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಿ, ತುಳುನಾಡಿನ ವಿಶೇಷತೆಯ ಕುರಿತು ನೃತ್ಯ ಹಾಗೂ ವೀಡಿಯೋ ಪ್ರದರ್ಶನ ಮಾಡಲಾಯಿತು.ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಸಾರ್ಥಕ್ ಆಟಿ ತಿಂಗಳ ವಿಶೇಷತೆಯನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.ತುಳುನಾಡಿನ ತಿನಿಸುಗಳನ್ನು ಸವಿಯುವುದರೊಂದಿಗೆ ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಬಳಿಕ ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ದಿವ್ಯಶ್ರೀ ಮತ್ತು ತೀರ್ಥಕುಮಾರಿ ಕಾರ್ಯಕ್ರಮ ನಿರೂಪಿಸಿ, ಪ್ರಶಿಕ್ಷಣಾರ್ಥಿ ಪಂಚಮಿ ಸ್ವಾಗತಿಸಿ, ಶೋಭಿತಾ ಧನ್ಯವಾದವಿತ್ತರು.