ಬೆಳ್ತಂಗಡಿ: ಲಾಯಿಲ ನಿವಾಸಿ, ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದ ತಾಜ್ ಬಾವುಂಞಿ(57) ಅವರು ಮಂಗಳೂರಿನಿಂದ ವಾಪಾಸಾಗುತ್ತಿದ್ದ ವೇಳೆ ಸರಕಾರಿ ಬಸ್ಸಿನಲ್ಲೇ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಜೂ.26 ರಂದು ಸಂಜೆ ವೇಳೆ ನಡೆದಿದೆ.
ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಜನಾನುರಾಗಿಯಾಗಿ ಕಳೆದ ನಲ್ವತ್ತು ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಿದ್ದರು.
ಇಂದು ಅಗತ್ಯ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಅವರು ಸರಕಾರಿ ಬಸ್ಸಿನಲ್ಲಿ ವಾಪಾಸಾಗುತ್ತಿದ್ದರು. ಬಸ್ಸು ಪಡೀಲ್ ತಲುಪುತ್ತಿದ್ದಂತೆ ನಿರ್ವಾಹಕ ಟಿಕೇಟ್ ನೀಡುವುದಕ್ಕಾಗಿ ಕರೆದರೂ ಅವರು ಪ್ರತಿಕ್ರಿಯಿಸಿರಲಿಲ್ಲ. ಸಂದೇಹದಿಂದ ಅಲ್ಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಸ್ಸು ಕೊಂಡೊಯ್ದು ವೈದ್ಯರು ಬಂದು ಪರಿಶೀಲಿಸಿದಾಗ ಅವರು ಮರಣವನ್ನಪ್ಪಿರುವುದು ಖಚಿತಗೊಂಡಿತು.
ಮೃತರು ಲಾಯಿಲ ಮಸೀದಿಯ ಕಾರ್ಯವ್ಯಾಪ್ತಿಗೆ ಬರುವ ನೂರುಲ್ ಹುದಾ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಟ್ರಸ್ಟ್ ವ್ಯಾಪ್ತಿಗೊಳಪಡುವ ಲಾಯಿಲ ಮಸ್ಜಿದ್‌ನ ವಾಣಿಜ್ಯ ಸಂಕೀರ್ಣದಲ್ಲಿ ಹಾರ್ಡ್‌ವೇರ್ ಮಳಿಗೆ ಹೊಂದಿರುವ ಅಶೋಕ ಶೆಟ್ಟಿ ಅವರ ಪತ್ನಿ ಅದೇ ಬಸ್ಸಿನಲ್ಲಿ ಮಂಗಳೂರಿನಿಂದ ಕೆಲಸ ಮುಗಿಸಿ ವಾಪಾಸಾಗುತ್ತಿದ್ದವರು ಈ ವಿಚಾರ ಅವರ ಪತಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಬಳಿಕ ಮಸೀದಿ ಕಮಿಟಿಯವರಿಗೆ ಅವರು ವಿಚಾರ ಮುಟ್ಟಿಸಿ ಮನೆಯವರು ಹಾಗೂ ಸಮಿತಿಯವರು ತಕ್ಷಣ ಮಂಗಳೂರಿಗೆ ಧಾವಿಸಿ ಅಗತ್ಯ ಕಾನೂನು ಪ್ರಕ್ರೀಯೆ ಮುಗಿಸಿ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಲಾಯಿಲದ ಮನೆಗೆ ತಂದಿದ್ದಾರೆ.
ಮೃತರು ಪತ್ನಿ, ಪದವೀಧರರಾಗಿರುವ ಮೂವರು ಹೆಣ್ಣುಮಕ್ಕಳು ಹಾಗೂ ಬಂಧುವರ್ಗದವರನ್ನು ಆಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಮಂಗಳವಾರ ಬೆಳಿಗ್ಗೆ 10.00 ಕ್ಕೆ ನಡೆಯಲಿದೆಯೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸರಕಾರಿ ಬಸ್ಸಿನಲ್ಲೇ ಹೃದಯಾಘಾತವಾಗಿ ಲಾಯಿಲದ ಇಲೆಕ್ಟ್ರೀಷಿಯನ್ ತಾಜ್ ಬಾವುಂಞಿ ನಿಧನ
p>