ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಉಜಿರೆ ಹೆದ್ದಾರಿ ಬಳಿಯ ಚರಂಡಿ ದುರಸ್ತಿ

0

ಉಜಿರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ-ಬೆಳ್ತಂಗಡಿ ರಸ್ತೆಯ ಉಜಿರೆಯ ಎಚ್.ಪಿ .ಪೆಟ್ರೋಲ್ ಬಂಕ್ ಬಳಿಯಿಂದ ಬೆನಕ ಆಸ್ಪತ್ರೆ ತನಕದ ರಸ್ತೆ ಚರಂಡಿಯ ದುರಸ್ತಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಮಾಡಲಾಗಿದೆ.ಜೂ.13 ರಂದು ಮಧ್ಯಾಹ್ನ ಭಾರಿ ಮಳೆ ಸುರಿದ ಪರಿಣಾಮ ಇಲ್ಲಿನ ಸುಮಾರು 500 ಮೀ.ದೂರದ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ರಸ್ತೆ ತಡೆಯುಂಟಾಗಿ ಸುಮಾರು ಒಂದು ತಾಸು ಕಾಲ ವಾಹನ ಸವಾರರು, ಪಾದಚಾರಿಗಳು ಭಾರಿ ಸಂಕಷ್ಟ ಅನುಭವಿಸುವಂತಾಯಿತು.ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ ಮುಂಭಾಗದವರೆಗೂ ಮಳೆ ನೀರು ನುಗ್ಗಿ ರಸ್ತೆಯುದ್ದಕ್ಕೂ ಒಂದೂವರೆ ಅಡಿಗಿಂತ ಅಧಿಕ ಎತ್ತರಕ್ಕೆ ನೀರು ಹರಿದಿತ್ತು.ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಚರಂಡಿ ದುರಸ್ತಿಕಾಮಗಾರಿ ಆರಂಭ:
ಇಲ್ಲಿನ ಚರಂಡಿ ದುರಸ್ತಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಆರಂಭಿಸಿದ್ದು ಚರಂಡಿಗಳಲ್ಲಿ ಬೆಳೆದಿರುವ ಭಾರಿ ಗಾತ್ರದ ಗಿಡಗಂಟಿ, ಹೂಳು,ತ್ಯಾಜ್ಯ ಇತ್ಯಾದಿಗಳ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ಚರಂಡಿಗಳಲ್ಲಿ ತುಂಬಿದ್ದ ಹೂಳು, ತ್ಯಾಜ್ಯ ತೆರೆವುಗೊಳಿಸಿ, ಬ್ಲಾಕ್ ಆಗಿದ್ದ ಮೋರಿಗಳನ್ನು ಬಿಡಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ಸಮರ್ಪಕವಾಗಿ ನಡೆದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರಲಾರದು  ಎಂಬ ಆಶಾಭಾವನೆ ವ್ಯಕ್ತವಾಗಿದೆ.

ತ್ಯಾಜ್ಯದ ರಾಶಿ:
ಜೆಸಿಬಿ ಮೂಲಕ ಚರಂಡಿ ದುರಸ್ತಿ ಆರಂಭಿಸುತ್ತಿದ್ದಂತೆ ಮೋರಿಗಳು ಬ್ಲಾಕ್ ಆಗಲು ಕಾರಣವಾಗಿದ್ದ ತ್ಯಾಜ್ಯದ ರಾಶಿ ಯೇ ಬಹಳಷ್ಟಿದೆ .  ಪ್ಲಾಸ್ಟಿಕ್, ಬಾಟಲಿ,ಗೋಣಿ ಕಟ್ಟು ಗಳಲ್ಲಿ ತಂದು ಹಾಕಿದ್ದ ಹಾಗೂ ಮಳೆ ನೀರಿನಲ್ಲಿ ಬಂದು ಸಿಲುಕಿದ ತ್ಯಾಜ್ಯ ರಾಶಿ ಬೃಹತ್ ಪ್ರಮಾಣದಲ್ಲಿ  ಕಂಡು ಬಂದಿದೆ. ಚರಂಡಿ, ಮೋರಿಗಳಲ್ಲಿ ತುಂಬಿದ ತ್ಯಾಜ್ಯ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿರುವುದು ಸ್ಪಷ್ಟಗೊಂಡಿದೆ.
ಸದಾ ವಾಹನಗಳ ತಿರುಗಾಟ ಇರುವ ಜನನಿಬಿಡ  ಹೆದ್ದಾರಿಯಲ್ಲಿ  ಬೃಹತ್ ಪ್ರಮಾಣದ  ತ್ಯಾಜ್ಯರಾಶಿ  ಕಂಡು ಬಂದಿರುವುದು  ಆಶ್ಚರ್ಯ ಉಂಟುಮಾಡಿದೆ.  ಇದನ್ನು ಯಾರು ಎಲ್ಲಿಂದ  ಇಲ್ಲಿ ಗೆ ತಂದು ಹಾಕಿರಬಹುದು ಅಥವಾ ಇದು ಎಲ್ಲಿಂದ ಈ ರೀತಿ ಹರಿದು ಬಂದಿದೆ ಎಂಬುದು ಬಿಡಿಸಲಾರದ ಒಗಟಾಗಿದೆ. ಚರಂಡಿಗಳಲ್ಲಿ  ಹಳೆಯ ಫೋನ್ ಕೇಬಲ್ ಗಳು ಸಿಲುಕಿಕೊಂಡಿದ್ದು ಅದರಿಂದ ತ್ಯಾಜ್ಯಗಳು ಕೂಡ ಮಳೆ ನೀರು ಹರಿಯಲು ಅಡ್ಡಿ ಉಂಟು ಮಾಡಿದೆ.
ಸ್ವಚ್ಛತೆ ಬಗ್ಗೆ ವಿಶೇಷ ಗಮನ ನೀಡುತ್ತಿರುವ ಉಜಿರೆ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ವಾಹನದ ಮೂಲಕ ಕಸ ಸಂಗ್ರಹಿಸುತ್ತದೆ.ಜತೆಗೆ ಸಾಕಷ್ಟು ಸ್ವಚ್ಛತೆ ಬಗೆಗೆ ಅರಿವು ನೀಡುವ ಕಾರ್ಯಕ್ರಮಗಳನ್ನೂ  ನಡೆಸುತ್ತದೆ.ಆದರೂ ಈ ಪ್ರದೇಶದಲ್ಲಿ ಕಂಡುಬಂದಿರುವ ತ್ಯಾಜ್ಯದ ರಾಶಿ ಪಂಚಾಯಿತಿ ಅಧಿಕಾರಿಗಳಿಗೆ ಬಗೆಹರಿಸಲಾಗದ ಸಮಸ್ಯೆಯಾಗಿದೆ.

LEAVE A REPLY

Please enter your comment!
Please enter your name here