ಧರ್ಮಸ್ಥಳದ ಸಿಬ್ಬಂದಿ, ಎಸ್.ಕೆ.ಡಿ.ಆರ್.ಡಿ.ಪಿ, ಶೌರ್ಯ ತಂಡದಿಂದ ನೇತ್ರಾವತಿ ಸ್ವಚ್ಚತಾ ಕಾರ್ಯ: ಲೋಡ್ ಗಟ್ಟಲೆ ಕಸ ಸಂಗ್ರಹ

0

ಧರ್ಮಸ್ಥಳ: ಮಳೆಗಾಲ ಆರಂಭಕ್ಕೂ ಮೊದಲು ನೇತ್ರಾವತಿ ನದಿಯ ಸ್ವಚ್ಚತಾ ಕಾರ್ಯಕ್ಕೆ ಧರ್ಮಸ್ಥಳ ದೇವಳದ ಸಿಬ್ಬಂದಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಎಸ್ ಕೆ ಡಿ ಆರ್ ಡಿ ಪಿ ಉದ್ಯೋಗಿಗಳು, ರಂಗಶಿವ ಕಲಾ ತಂಡದ ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಬೆಳಗ್ಗೆ 6.30ರಿಂದ ಸ್ವಚ್ಛತಾ ಕಾರ್ಯ ಆರಂಭ- ಲೋಡ್, ಲೋಡ್ ಕಸ ಸಂಗ್ರಹ ಮಾಡಿ ವಿಲೇವಾರಿ:
ಬೆಳಗ್ಗೆ 6.30ರಿಂದ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಶೌರ್ಯ ತಂಡದವರು ಆರು ತಂಡಗಳಾಗಿ ವಿಂಗಡಿಸಲಾಗಿತ್ತು. ಬೆಳಗ್ಗಿನಿಂದ ಆರಂಭವಾಗಿರುವ ಕಸ ವಿಲೇವಾರಿ ಮಾಡುವ ಕಾರ್ಯದಲ್ಲಿ ಈಗಾಗಲೇ ಮೂರು ಲೋಡ್ ಕಸ ಸಂಗ್ರಹವಾಗಿದೆ.
ಸೀರೆಗಳ ರಾಶಿ, ಅಂಡರ್ ವೇರ್, ಪ್ಲಾಸ್ಟಿಕ್, ಬಾಟಲಿ, ತೆಂಗಿನಕಾಯಿ, ಹೀಗೆ ಬೇರೆ ರೂಪದ ಕಸಗಳು ತುಂಬಿದ್ದವು. ಮರಳಿನಡಿ ಹುದುಗಿ ಹೋಗಿರುವ ಬಟ್ಟೆಬರೆಗಳನ್ನು ತೆಗೆಯಲು ಹರಸಾಹಸ ಪಡಬೇಕಾಯಿತು.

ನೇತ್ರಾವತಿಯ ರಸ್ತೆಯ ಬದಿಯಲ್ಲಿರುವ ಕಸ, ಸ್ನಾನಘಟ್ಟದ ಪರಿಸರ, ನೇತ್ರಾವತಿಯ ಸುದೆಗಂಡಿಯ ಪರಿಸರ, ಸೇತುವೆಯ ಕೆಲಭಾಗದಲ್ಲಿರುವ ಪರಿಸರವನ್ನು ಸ್ವಚ್ಚ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಕೆ ಡಿ ಆರ್ ಡಿ ಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್ ಹೆಚ್ ಮಂಜುನಾಥ್ ರವರು ಮಾತನಾಡಿ” ಡಾ.ಹೇಮಾವತಿ ಹೆಗ್ಗಡೆಯವರ ಆಶಯದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದೇವೆ. ತ್ಯಾಜ್ಯಗಳು ನಮ್ಮ ಭೂಮಂಡಲವನ್ನು ಅಲ್ಲಾಡಿಸುತ್ತಿದೆ. ನೇತ್ರಾವತಿ ಸ್ವಚ್ಛ ಮಾಡುತ್ತಾ ತ್ಯಾಜ್ಯ ಕಡಿಮೆ ಮಾಡುವತ್ತ ಜನರು ಚಿಂತನೆ ಮಾಡುವ ಹಾಗೇ ಮಾಡಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಬಟ್ಟೆ ಬ್ಯಾಗ್ ಗಳನ್ನು ಬಳಕೆ ಮಾಡಬಹುದು,ಅದರ ಬದಲು ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ವಾಹನದಲ್ಲಿ ತೆರಳುವಾಗ ಕಸ ಬಿಸಾಡುತ್ತಾ ಸಾಗುವುದು ಕಡಿಮೆ ಮಾಡಬೇಕು.ಕಸವಿಲೇವಾರಿ ಯೋಜನೆಯಿದೆ, ಹಾಗಿದ್ದರೂ ನಾವು ಕಸ ವಿಲೇವಾರಿ ಸರಿಯಾಗಿ ಮಾಡಲಾಗುತ್ತಿಲ್ಲ.ನೇತ್ರಾವತಿ ನದಿಯ ಸುತ್ತಮುತ್ತ ಜಾಗೃತಿ ದಳ ನಿರ್ಮಾಣ ಆಗಬೇಕಿದೆ. ಯಾತ್ರಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಅದರ ದ್ಯೋತಕವಾಗಿ ಈ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತಿನಂತೆ ಭೂಮಿ ತಾಯಿ ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಮಾತನ್ನು ಪಾಲನೆ ಮಾಡೋಣ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರೂ ಶೆಟ್ಟಿ, ಉಡುಪಿ ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ,‌ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರು ವಿವೆಕ್ ವಿನ್ಸೆಂಟ್ ಪಾಯಸ್, ಬೀಡಿನ ರಾಜೇಂದ್ರ ದಾಸ್, ದೇವಳ ವಿಭಾಗದ ಮಲ್ಲಿನಾಥ್, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯೋಜನೆ,ಶೌರ್ಯ,ದೇವಳ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here