ಬೆಳ್ತಂಗಡಿ: ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ವತಿಯಿಂದ ಜೂನ್ 1ರಂದು ಲಾಯಿಲ ಸಂಗಮ ಸಭಾಭವನದಲ್ಲಿ ನಡೆದ 2023ನೇ ಸಾಲಿನ ಮುಂಗಾರು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಅವರು ಉಪ್ಪಿನಂಗಡಿ ವಲಯಾರಣ್ಯಾಧಿಕಾರಿಗೆ ನೊಟೀಸ್ ಜಾರಿ ಮಾಡಲು ಸೂಚಿಸಿದ ಘಟನೆ ನಡೆದಿದೆ.
ಮುಂಗಾರು ಪೂರ್ವ ಸಿದ್ಧತಾ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಆರಂಭದಲ್ಲಿ ಮಾತನಾಡಿದ ಶಾಸಕರು ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ತಿಳಿಸುವಂತೆ ತಿಳಿಸಿದರು. ಈ ವೇಳೆ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಸಭೆಗೆ ಗೈರು ಹಾಜರಾಗಿರುವ ವಿಚಾರ ತಿಳಿದ ಶಾಸಕ ಹರೀಶ್ ಪೂಂಜ ಅವರು ಗರಂ ಆದರಲ್ಲದೆ, ನೊಟೀಸ್ ನೀಡಿದ್ದರೂ ಸಭೆಗೆ ಬಾರದ ಅವರಿಗೆ ಕಾಮನ್ ಸೆನ್ಸ್ ಇಲ್ವ..ಅವರಿಗೆ ನೊಟೀಸ್ ಜಾರಿ ಮಾಡಿ ಎಂದು ಸೂಚಿಸಿದರು. ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ತಾ.ಪಂ. ಕಾರ್ಯ ನಿರ್ವಾಹಕಾಧಿಕಾರಿ ಕುಸುಮಾಧರ್ ಮತ್ತು ತಹಶೀಲ್ದಾರ್ ಸುರೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.