ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಶಾಲೆ ಶಾಲಾ ಪ್ರಾರಂಭೋತ್ಸವ

0

ಪುಂಜಾಲಕಟ್ಟೆ : ಶಾಲಾಭಿವೃದ್ಧಿಗೆ ಈಗಾಗಲೇ ಎರಡು ಕೋಟಿ ರೂ. ಅನುದಾನ ಒದಗಿಸಿದ್ದು, ನಿರಂತರ ಅಭಿವೃದ್ಧಿ ಕಾರ್ಯಗಳೊಂದಿಗೆ ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹೇಳಿದರು.ಅವರು ಮೇ 31ರಂದು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಪುಂಜಾಲಕಟ್ಟೆ ಶಾಲೆಯನ್ನು ಆಯ್ಕೆ ಮಾಡಿದ್ದರಿಂದ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉತ್ತಮ ಶಿಕ್ಷಣ ದೊರಕುವಂತಾಗಿದೆ ಎಂದರು.

ಮಕ್ಕಳು ಉತ್ತಮ ಶಿಕ್ಷಣ ಪಡೆದು ಮನೆಯನ್ನು ಶಾಲೆಯನ್ನು ಸಮಾಜವನ್ನು ಬೆಳಗುವಂತಾಗಲು ಅವರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರ ಕರ್ತವ್ಯವಾಗಿದೆ. ಶಾಲಾಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ ಎಂದರು.ಬೆಳ್ತಂಗಡಿ ಶಿಕ್ಷಣಾಧಿಕಾರಿ ವೀರೂಪಾಕ್ಷ ಅವರು ಮಾತನಾಡಿ, ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಂಜಾಲಕಟ್ಟೆ ಪಬ್ಲಿಕ್ ಸ್ಕೂಲ್ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಪ.ಪೂ ಕಾಲೇಜು ಪ್ರಾಂಶುಪಾಲೆ ಡಾ. ಸರೋಜಿನಿ ಆಚಾರ್ಯ, ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಅರ್ಚಕ ಶ್ರೀಧರ ರಾವ್ ಪೇಜಾವರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಪೂರ್ವ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು, ಮಡಂತ್ಯಾರು ಗ್ರಾ.ಪಂ.ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳನ್ನು ಹೂ ನೀಡಿ,ಆರತಿ ಬೆಳಗಿ ಸ್ವಾಗತಿಸಲಾಯಿತು. ಬ್ಯಾಂಡ್, ಮೆರವಣಿಗೆ ಮೂಲಕ ಮಕ್ಕಳನ್ನು ಕರೆ ತರಲಾಯಿತು. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉದಯ ಕುಮಾರ್ ಜೈನ್ ಅವರು ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಸುರೇಶ್ ಶೆಟ್ಟಿ ವಂದಿಸಿದರು. ಪ್ರೌಢಶಾಲಾ ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here