ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟುವಿನಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮೇ 31 ರಂದು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಶ್ರೀ ಸೋಮಶೇಖರ್ , ಧರ್ಮಸ್ಥಳ ದೇವಸ್ಥಾನದ ಮಣೆಗಾರರದ ಶ್ರೀ ವಸಂತ್ ಭಟ್, ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ಹೆಚ್ ಆರ್ ವಿಭಾಗದ ಮೆನೇಜರ್ ಆದ ಶ್ರೀ ಕೃಷ್ಣಮಯ್ಯ , ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶೀನಪ್ಪ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ಗಫರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಗೆ ಆಡಳಿತ ಮಂಡಳಿ ಒದಗಿಸಿ ಕೊಟ್ಟ ಬಸ್ಸನ್ನು ಉದ್ಘಾಟನೆ ಮಾಡಲಾಯಿತು. ಶಾಲಾ ಪ್ರಾರಂಭೋತ್ಸವ ಮತ್ತು ಶಾಲಾ ವಾಹನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಸೋಮಶೇಖರ್ ರವರು ಆಡಳಿತ ಮಂಡಳಿಯ ಆಶಯದಂತೆ ಉತ್ತಮ ಗುಣಮಟ್ಟದ ಶಿಕ್ಷಣ, ಸಕಲ ಭೌತಿಕ ವ್ಯವಸ್ಥೆಯ ಜೊತೆಗೆ, ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಎಲ್ಲಾ ಅವಕಾಶಗಳು ಕನ್ನಡ ಮಾಧ್ಯಮಕ್ಕೂ ದೊರೆಯುವಂತೆ ಮಾಡಿರುವುದು ಶ್ಲಾಘನೀಯ. ಇದರ ಸದುಪಯೋಗವನ್ನು ಹೆತ್ತವರು, ವಿದ್ಯಾರ್ಥಿಗಳು ಅರಿತು ಶಾಲೆಯ ಸರ್ವತೋಮುಖ ಪ್ರಗತಿಗೆ ಸಹಕರಿಸುವಂತೆ ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಮಾತನಾಡಿದ ಕೃಷ್ಣ ಮಯ್ಯ ಉತ್ತಮ ವಾತಾವರಣದಿಂದ ಕೂಡಿದ ಈ ಶಾಲೆ ಕಲಿಕೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಶೀನಪ್ಪ ಗೌಡ ಮಾತನಾಡಿ ಈ ಶೈಕ್ಷಣಿಕ ವರ್ಷ ದಲ್ಲಿ ಶಾಲೆಯ ದಾಖಲಾತಿ ಹೆಚ್ಚಾಗಿದೆ ಪೋಷಕರ ಸಹಕಾರ ಇದೆ ರೀತಿ ಮುಂದಕ್ಕೂ ಶಾಲೆಯ ಮೇಲೆ ಇರಲಿ ಎಂದು ತಿಳಿಸಿದರು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಶ್ರೀ ವಸಂತ್ ಭಟ್ ರವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನನ್ನ ಸಹಕಾರ ಯಾವಾಗಲು ಇದೆ ಎಂದು ತಿಳಿಸಿದರು. ಈ ವರ್ಷ ಮಕ್ಕಳ ದಾಖಲಾತಿ ಹೆಚ್ಚಾಗಿರುವುದು ಬಹಳ ಸಂತೋಷವಾಗಿದೆ. ಶಿಕ್ಷಕರ ಪ್ರಯತ್ನವನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ನಿಶಾಂತ್ ಕುಮಾರ್ ಸ್ವಾಗತಿಸಿ, ಶ್ರೀ ಪವನ್ ಕುಮಾರ್ ಧನ್ಯವಾದಗೈದರು. ಕಾರ್ಯಕ್ರಮವನ್ನು ಪುಷ್ಪಲತಾ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಆಗಮಿಸಿದ್ದರು.ಹೊಸದಾಗಿ ಸೇರ್ಪಡೆಯದ ಮಕ್ಕಳನ್ನು ಚೆಂಡೆ ಮೆರವಣಿ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು.