ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆರಂಭೋತ್ಸವವನ್ನು ಉಜಿರೆ ಶ್ರೀ ಧ ಮಂ ಎಜ್ಯುಕೇಶನಲ್ ಸೊಸೈಟಿ(ರಿ.) ಇದರ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಬಿ. ಸೋಮಶೇಖರ ಶೆಟ್ಟಿಯವರು ಉದ್ಘಾಟಿಸಿ ಮಾತನಾಡುತ್ತಾ, ಪ್ರೌಢಶಾಲೆಗೆ ಬರುವಾಗಲೆ ವಿದ್ಯಾರ್ಥಿಗಳಲ್ಲಿ ತನ್ನ ಜೀವನದ ಮುಂದಿನ ಗುರಿಯ ಬಗ್ಗೆ ಸ್ಪಷ್ಟ ನಿಲುವು ಅಗತ್ಯ. ಆ ಗುರಿಯನ್ನು ತಲಪುವಲ್ಲಿ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮತ್ತು ಏಕಾಗ್ರತೆ ಅವಶ್ಯಕ. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳೆಲ್ಲ ಗುಣಮಟ್ಟಕ್ಕೆ ಹೆಸರಾಗಿದೆ. ಇಲ್ಲಿ ಜೀವನ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣಕ್ಕೆ ಆದ್ಯತೆ ಕೊಡಲಾಗುತ್ತದೆ. ಶಿಕ್ಷಣ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಆಡಳಿತ ಮಂಡಳಿಯ ಮಾನವ ಸಂಪನ್ಮೂಲ ಅಧಿಕಾರಿ ಕೃಷ್ಣ ಮಯ್ಯರವರು ಶುಭಹಾರೈಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ ಮತ್ತು ಶಾಲೆಯ ಶಿಕ್ಷಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸ್ವಾಗತಿಸಿ , ಶಿಕ್ಷಕಿ ವಾರಿಜ ಎಸ್ ಗೌಡರವರು ವಂದಿಸಿದರು. ಶಿಕ್ಷಕರಾದ ಸುಮನ್ ಯು ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.