ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭ: ವಿಜಯಮಾಲೆ ಯಾರ ಕೊರಳಿಗೆ ಎಂಬ ಕುತೂಹಲ – ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಡುವೆ ಪೈಪೋಟಿ:

0

ಬೆಳ್ತಂಗಡಿ: ಮೇ 10ರಂದು ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮೂಲ್ಕಿ ಮೂಡಬಿದ್ರೆ ಕ್ಷೇತ್ರಗಳ ಮತ ಎಣಿಕೆ ಮೇ 13ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ. ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡಿದೆ. ದ.ಕ. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಮತ ಎಣಿಕೆ ನಡೆಯುತ್ತಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆದು ನಂತರ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಆರಂಭಗೊಂಡಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗೇಶ್ ಎಚ್.ಟಿ. ಮತ್ತು ಉಪಚುನಾವಣಾಧಿಕಾರಿ ಸುರೇಶ್ ಕುಮಾರ್ ಸಮ್ಮುಖದಲ್ಲಿ ಬೆಳ್ತಂಗಡಿ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಸಾವಿರಾರು ಮಂದಿ ಮಂಗಳೂರಿಗೆ ತೆರಳಿದ್ದಾರೆ. ಮತ ಎಣಿಕೆ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.81.46 ಮತ ಚಲಾವಣೆ ನಡೆದಿದ್ದು ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂದು ಕಾದು ನೋಡಬೇಕಿದೆ.

ಬೆಳ್ತಂಗಡಿಯ 241 ಬೂತ್ ಗಳಲ್ಲಿ ಒಟ್ಟು 22,8871 ಮತದಾರಿದ್ದು ಅದರಲ್ಲಿ 18,6506 ಮಂದಿ ಮತ‌ ಚಲಾಯಿಸಿದ್ದಾರೆ. 92,751 ಮಂದಿ ಪುರುಷರು ಹಾಗೂ 93,755 ಮಂದಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದು ಶೇ 81.46 ಮತದಾನ ನಡೆದಿದೆ. ಮತ ಎಣಿಕೆ ಆರಂಭ ಆಗುತ್ತಿದ್ದಂತೆಯೇ ಕುತೂಹಲ ಹೆಚ್ಚಾಗತೊಡಗಿದೆ.

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಲಿದ್ದಾರೆಯೇ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅದೃಷ್ಟ ಪರೀಕ್ಷೆಯಲ್ಲಿ ವಿಜಯ ಸಾಧಿಸಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗತೊಡಗಿದೆ.ಮಧ್ಯಾಹ್ನದ ಮೊದಲು ಫಲಿತಾಂಶ ಪ್ರಕಟಗೊಂಡು ಎಲ್ಲಾ ಕುತೂಹಲಗಳಿಗೆ ಉತ್ತರ ದೊರಕಲಿದೆ.

LEAVE A REPLY

Please enter your comment!
Please enter your name here