


ಬೆಳ್ತಂಗಡಿ: ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ ಇಲ್ಲಿಯ ಅಂತಿಮ ಸೆಮಿಸ್ಟರ್‌ನ ತೋಟಗಾರಿಕಾ ವಿಭಾಗದ ವಿದ್ಯಾರ್ಥಿನಿ ಅಂಚಿತಾ ಡಿ ಜೈನ್ ಇವರು ೨೦೨೨.೨೩ರ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಡೆದಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ಆಯ್ಕೆಯಾಗಿದ್ದಾರೆ. ಇವರು ಕೇಂದ್ರ ಹಾಗೂ ರಾಜ್ಯ ಸರಕಾರದ ಕೃಷಿ ಉನ್ನತ ಶಿಕ್ಷಣ ಯೋಜನೆಯಿಂದ ಪ್ರೋತ್ಸಾಹಧನವನ್ನು ಪಡೆದಿರುತ್ತಾರೆ. ಮೂರು ತಿಂಗಳು ಕಾಲ ಜರ್ಮನಿಯ ಟ್ಯೂಬಿಂಗನ್ನಲ್ಲಿರುವ ಎಬರ್ಹಾರ್ಡ ಕಾರ್ಲ್ಸ ಮಹಾವಿಶ್ವವಿದ್ಯಾಲಯದಲ್ಲಿ ಉಚಿತ ತರಬೇತಿ ಹಾಗೂ ಇಂಟರ್ನ್ಶಿಪ್‌ಗಾಗಿ ತೆರಳಿದ್ದು ಸರಕಾರವೇ ಇದರ ಸಂಪೂರ್ಣ ವೆಚ್ಚವನ್ನು ಭರಿಸಿರುತ್ತದೆ.
ಇವರು ರಾಷ್ಟ್ರೀಯ ಸೇವಾ ಯೋಜನೆ ಘಟಕ ಮೂಡಿಗೆರೆಯ ಪ್ರತಿನಿಧಿಯಾಗಿ ಕಾಲೇಜು ಹಂತದಲ್ಲಿ ಆಯ್ಕೆಗೊಂಡ ಬಳಿಕ ಶಿವಮೊಗ್ಗ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಿ ೩೨ ವಿದ್ಯಾರ್ಥಿಗಳಲ್ಲಿ ಓರ್ವಳಾಗಿ ಆಯ್ಕೆಗೊಂಡು, ಮುಂದಕ್ಕೆ ತಮಿಳುನಾಡಿನ ತಿರುಚಿರಾಪಳ್ಳಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆದ ೧೦ ದಿನಗಳ ದಕ್ಷಿಣ ವಲಯ ಪೂರ್ವ ಗಣರಾಜ್ಯೋತ್ಸವದ ಶಿಬಿರದಲ್ಲಿ ಭಾಗವಹಿಸಿದ್ದು, ಇದರಲ್ಲಿ ಒಟ್ಟು ೭ ವಿದ್ಯಾರ್ಥಿಗಳ ಆಯ್ಕೆಯಾದವರಲ್ಲಿ ಈಕೆ ರಾಜ್ಯದಲ್ಲಿ ಮೊದಲ ಸ್ಥಾನಿಯಾಗಿ ಆಯ್ಕೆಗೊಂಡು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡಿನಲ್ಲಿ ಭಾಗವಹಿಸಿ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಪ್ರಧಾನಿಮಂತ್ರಿಯವರಿಂದ ಪ್ರಶಂಶಾಪತ್ರ ಪಡೆದಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುತ್ತಾರೆ.
ಅಂತರ್‌ಶಾಲಾ ಮಟ್ಟದಲ್ಲಿ ನಡೆದ ಪ್ರಬಂಧ, ಭಾಷಣ, ಚಿತ್ರಕಲೆ ಇತ್ಯಾದಿ ಸ್ಪರ್ಧೆಗಳಲ್ಲಿ ಹಾಗೂ ಕ್ರೀಡಾ ವಿಭಾಗದಲ್ಲೂ ಬಹುಮಾನ ಗಳಿಸಿರುತ್ತಾರೆ. ಇವರು ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಸೆಕೆಂಡರಿ ವಿಭಾಗದ ಸಹಶಿಕ್ಷಕ ಧರಣೇಂದ್ರ ಕೆ ಹಾಗೂ ಅನುಪಮ ದಂಪತಿಯ ಪುತ್ರಿಯಾಗಿರುತ್ತಾರೆ.