


ಬಳಂಜ: ಬಿಸಿಲ ಬೇಗೆಯಿಂದ ನದಿಗಳೆಲ್ಲಾ ನೀರಿಲ್ಲದೆ ಬತ್ತಿ ಹೋಗುತ್ತಿದ್ದು ಕಾಪಿನಡ್ಕ ಫಲ್ಗುಣಿ ನದಿಯೂ ನೀರಿಲ್ಲದೆ ಸೊರಗಿ ಹೋಗಿದೆ.ಇದರ ನಡುವೆ ನದಿಯ ಕೆಲವು ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರು ಇದ್ದು ಸಣ್ಣ ಪುಟ್ಟ ಮೀನುಗಳು ಜೀವ ರಕ್ಷಣೆಗಾಗಿ ಈ ನೀರಿನಲ್ಲಿ ಒದ್ದಾಡುತ್ತಿವೆ.ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಲವು ದುಷ್ಕರ್ಮಿಗಳು ಬಳಂಜ ಗ್ರಾಮದ ಪೆರಾಜೆ ಬಳಿ ಹಾದು ಹೋಗುವ ಫಲ್ಗುಣಿ ನದಿಗೆ ವಿಷ ಮಿಶ್ರಿತ ಆಹಾರವನ್ನು ಹಾಕಿ ಮೀನನ್ನು ಹಿಡಿಯುತ್ತಿದ್ದು ಇದರಿಂದಾಗಿ ಸಾವಿರಾರು ಮೀನುಗಳು ನದಿ ಬದಿಯಲ್ಲಿ ಸತ್ತು ಬಿದ್ದಿವೆ. ಕೆಲವು ಮೀನಗಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಬಿಸಿಯಾದ ನೀರು ಮತ್ತು ಆಮ್ಲಜನಕದ ಕೊರತೆಯಿಂದ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿವೆ.

ಇವತ್ತು ಫಲ್ಗುಣಿ ನದಿ ಕಿನಾರೆಯಲ್ಲಿ ಒಂದು ಸುತ್ತು ಹೊಡೆದಾಗ ಮೀನುಗಳ ಮಾರಣಹೋಮ ಕಣ್ಣಿಗೆ ಬಿತ್ತು.ನೋಡುವಾಗ ಮನಸ್ಸು ಕರಗಿಬಿಡುತ್ತದೆ.ಸರಿಯಾಗಿ ಮಳೆ ಬಾರದೆ ಕುಡಿಯಲು ನೀರು ಸಹ ಸಿಗದಿರುವ ಪರಿಸ್ಥಿತಿಯಲ್ಲಿ ದನ-ಕರುಗಳು, ಪ್ರಾಣಿ-ಪಕ್ಷಿಗಳು ನೀರನ್ನು ಹುಡುಕಿಕೊಂಡು ನದಿ ಕಿನಾರೆಗೆ ಬಂದು ನೀರನ್ನು ಕುಡಿಯುತ್ತವೆ.ಆದ್ದರಿಂದ ನದಿಗೆ ವಿಷ ಹಾಕಿ ಮೀನು ಹಿಡಿಯುವ ಕೆಲಸವನ್ನು ಪ್ರಜ್ಞಾವಂತ ನಾಗರಿಕರು ತಕ್ಷಣ ನಿಲ್ಲಿಸಬೇಕು.
ಮಾನವರ ಅನಾಗರಿಕ ವರ್ತನೆಯಿಂದ ನದಿ ನೀರುಗಳು ಕಲುಷಿತಗೊಂಡು ನದಿ ನೀರಿನ ಫಲವತ್ತತೆಗೆ ಕಾರಣವಾಗಿರುವ ಮೀನುಗಳ ಸಂತತಿ ನಾಶವಾದರೆ ಪ್ರಕೃತಿಯ ನಡುವೆ ವ್ಯತ್ಯಾಸಗಳು ಸಂಭವಿಸುತ್ತದೆ.ಗ್ರಾಮ ಪಂಚಾಯತಿನವರು ಸಹ ಸುತ್ತಮುತ್ತಲಿನ ನದಿಗಳ ಬಗ್ಗೆ ಗಮನಹರಿಸಿ ಮೀನುಗಳ ರಕ್ಷಣೆಯನ್ನು ಮಾಡುವ ಅಗತ್ಯವಿದೆ.