ಬೆಳ್ತಂಗಡಿ: ಕಳೆದ ವಾರದ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಅನುದಾನ ತರಿಸಿಕೊಟ್ಟಿರುವ ವರದಿಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜರವರ ಅಭಿಮಾನಿ ಆಕ್ಷೇಪಿಸಿರುವ ಆಡಿಯೋ ವ್ಯಾಪಕ ವೈರಲ್ ಆಗಿರುವುದರಿಂದ ಇದಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯ ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಶಾಂತಿಗರ ಸ್ಪಷ್ಟನೆ ನೀಡಿದ್ದಾರೆ.
ರಕ್ಷಿತ್ ಶಿವರಾಂ ಅವರು ನೀಡಿದ್ದ ಬಯೊಡೆಟಾವನ್ನು ಆಧರಿಸಿ ಸುದ್ದಿ ಬಿಡುಗಡೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿಯಲ್ಲಿ ಶಿಶಿಲದ ಹೇವಾಜೆ ಶಾಲೆಗೆ ಎರಡು ಲಕ್ಷ ರೂ ಅನುದಾನ ತರಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಶಿಶಿಲದ ವ್ಯಕ್ತಿಯೋರ್ವರು ಪತ್ರಿಕಾ ಕಛೇರಿಗೆ ದೂರವಾಣಿ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದು ರಕ್ಷಿತ್ ಶಿವರಾಂ ಅನುದಾನ ದೊರಕಿಸಿಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಈ ಆಡಿಯೋ ವ್ಯಾಪಕ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಸುದ್ದಿ ಬಿಡುಗಡೆ ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಅವರು ಸ್ಪಷ್ಟನೆ ನೀಡಿದ್ದು ರಕ್ಷಿತ್ ಶಿವರಾಂ ನೀಡಿದ್ದ ಮಾಹಿತಿಯ ಆಧಾರದಲ್ಲಿ ವರದಿ ಪ್ರಕಟಿಸಲಾಗಿದೆಯೇ ಹೊರತು ಇದರಲ್ಲಿ ಪತ್ರಿಕಾ ಬಳಗದ ಯಾವುದೇ ತಪ್ಪು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಸುದ್ದಿ ಬಿಡುಗಡೆಯ ಯಾವುದೇ ವರದಿಗೆ ಸಂಬಂಧಿಸಿ ಪತ್ರಿಕಾ ಸಂಪಾದಕರಾಗಿ ನಿಯೋಜಿಸಲ್ಪಟ್ಟಿರುವ ಸಂತೋಷ್ ಕುಮಾರ್ ಶಾಂತಿನಗರ(9980580399) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಬಳಗ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ರಕ್ಷಿತ್ ಶಿವರಾಂ ಅವರಿಂದ ಸ್ಪಷ್ಟನೆ ಬಯಸಿ ಪತ್ರಿಕಾ ಸಂಪಾದಕ ಸಂತೋಷ್ ಕುಮಾರ್ ಕಳುಹಿಸಿರುವ ಸಂದೇಶ ಈ ಕೆಳಗಿನಂತಿದೆ.
ಗೌರವಾನ್ವಿತ ರಕ್ಷಿತ್ ಶಿವರಾಂ ಅವರಿಗೆ,
ಕಳೆದ ವಾರ ಬೆಳ್ತಂಗಡಿ ಸುದ್ದಿ ಬಿಡುಗಡೆಯಲ್ಲಿ ಪ್ರಕಟವಾದ ತಮ್ಮ ಪರಿಚಯದ ವರದಿಯಲ್ಲಿ ಉಲ್ಲೇಖವಾದ ಅನುದಾನದ ವಿಚಾರಕ್ಕೆ ಸಂಬಂಧಿಸಿ ವಿರೋಧ ವ್ಯಕ್ತವಾಗಿದೆ. ನೀವು ಶಿಶಿಲ ಹೇವಾಜೆ ಶಾಲೆಗೆ ಎರಡು ಲಕ್ಷ ರೂ ಅನುದಾನ ದೊರಕಿಸಿಕೊಟ್ಟಿಲ್ಲ ಎಂದು ಅಲ್ಲಿನವರು ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ತಮ್ಮ ಸ್ಪಷ್ಟನೆ ಬೇಕಿದೆ. ನಾವು ನಿಮ್ಮ ಮತ್ತು ಪೂಂಜರವರಿಂದ ಬಯೊಡೆಟಾ ತರಿಸಿ ಪ್ರಕಟಿಸಿದ್ದೇವೆ. ನಿಮ್ಮಿಂದ ತಪ್ಪಾಗಿ ಮಾಹಿತಿ ಬಂದಿದ್ದಲ್ಲಿ ಅಥವಾ ಅದು ಸರಿ ಇದ್ದಲ್ಲಿ ತಿಳಿಸಿ. ನಿಮ್ಮ ಹೇಳಿಕೆಯನ್ನು ಯಥಾವತ್ತಾಗಿ ಪ್ರಕಟಿಸಲಿದ್ದೇವೆ. ಇದನ್ನು ತಮ್ಮ ಬಳಗದವರ ಗಮನಕ್ಕೂ ತರಲಾಗುವುದು.
ಹರೀಶ್ ಪೂಂಜರ ಅಭಿಮಾನಿಗಳ ಇತರ ವಿಚಾರಕ್ಕೆ ನಿಮ್ಮ ಪ್ರತಿಕ್ರಿಯೆ ಬೇಡ. ಅದನ್ನು ಪತ್ರಿಕಾ ಸಂಪಾದಕರು ಪೂಂಜರ ಜತೆಗೆ ನೇರ ಸಂವಾದ ಏರ್ಪಡಿಸಿ ಅಥವಾ ಅವರ ಅಭಿಮಾನಿಗಳೊಂದಿಗೆ ಮಾತನಾಡಿ ತಕ್ಕ ಉತ್ತರ ನೀಡಿ ಅಸಮಾಧಾನವನ್ನು ಸರಿಪಡಿಸಲಿದ್ದಾರೆ.
ನಾವು ನಿಮ್ಮ ಮತ್ತು ಪೂಂಜರವರಿಂದ ಬಯೊಡೆಟಾ ತರಿಸಿ ಪ್ರಕಟಿಸಿದ್ದೇವೆ. ನಿಮ್ಮಿಂದ ತಪ್ಪಾಗಿ ಮಾಹಿತಿ ಬಂದಿದ್ದಲ್ಲಿ ಅಥವಾ ಅದು ಸರಿ ಇದ್ದಲ್ಲಿ ತಿಳಿಸಿ. ನಿಮ್ಮ ಹೇಳಿಕೆಯನ್ನು ಯಥಾವತ್ತಾಗಿ ಪ್ರಕಟಿಸಲಿದ್ದೇವೆ. ನಮ್ಮಲ್ಲಿ ತಪ್ಪಾಗಿ ವರದಿಯಾಗಿದ್ದಲ್ಲಿ ಅದನ್ನು ತಪ್ಪಾಗಿದೆ ಎಂದು ಪ್ರಕಟಿಸಿ ತಪ್ಪು ಮಾಹಿತಿಗಾಗಿ ವಿಷಾಧ ವ್ಯಕ್ತಪಡಿಸಲಿದ್ದೇವೆ. ಅದನ್ನು ಪತ್ರಿಕೆಯಲ್ಲಿಯೂ ಪ್ರಕಟಿಸಲಿದ್ದೇವೆ. ತಮ್ಮ ಬಳಗದವರ ಗಮನಕ್ಕೂ ಈ ವಿಚಾರ ತರಲಾಗುವುದು. ಪ್ರಸಾರಗೊಳ್ಳುತ್ತಿರುವ ಆ ಆಡಿಯೋವನ್ನು ತಮ್ಮ ಅವಗಾಹನೆಗಾಗಿ ಕಳುಹಿಸಿದ್ದೇವೆ. ಅದರಲ್ಲಿ ನಾವು ರಕ್ಷಿತ್ ಶಿವರಾಂ ಪರ ಇದ್ದೇವೆ, ಪೂಂಜರ ವಿರುದ್ಧ ಬರೆಯುತ್ತಿದ್ದೇವೆ ಎಂಬ ಅಭಿಪ್ರಾಯ ಹರಡುವುದರಿಂದ ಅದನ್ನು ಸರಿ ಪಡಿಸಲಿಕ್ಕಾಗಿ ನಾವು ರಕ್ಷಿತ್ ಶಿವರಾಂ ಮತ್ತು ಪೂಂಜರ ಪರವೂ ಅಲ್ಲ, ವಿರೋಧವೂ ಅಲ್ಲ ಎಂಬುದನ್ನು ನಿಮ್ಮ ಹಾಗೂ ಪೂಂಜರ ಬಳಗಕ್ಕೆ ಖಡಾಖಂಡಿತವಾಗಿ ತಿಳಿಸಲು ಇಚ್ಛಿಸುತ್ತೇವೆ. ಇಂತಹ ಯಾವುದೇ ವಿಚಾರ ಇದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಿ. ನಾನು ಈಗಾಗಲೇ ಪತ್ರಿಕೆಯ ಸಂಪಾದಕನಾಗಿ ನಿಯೋಜಿಸಲ್ಪಟ್ಟಿದ್ದು ನನ್ನ ಅಭಿಪ್ರಾಯವನ್ನು ಪರಿಗಣಿಸಬೇಕಾಗಿ ವಿನಂತಿ. ಬೆಳ್ತಂಗಡಿ ಸುದ್ದಿ ಬಿಡುಗಡೆಯ ಸಂಪಾದಕನಾಗಿ ನಿಯೋಜಿಸಲ್ಪಟ್ಟಿರುವ ಸಂತೋಷ್ ಕುಮಾರ್ ಶಾಂತಿನಗರ ಎಂಬ ನನ್ನನ್ನು 9980580399 ನಂಬರಿನಲ್ಲಿ ಸಂಪರ್ಕಿಸಬಹುದಾಗಿದೆ.