ಉಜಿರೆ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಬಿ.ಎ.ಕುಮಾರ್ ಹೆಗ್ಡೆಯವರಿಗೆ ಪದೋನ್ನತಿ

0

ಉಜಿರೆ:ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಕಳೆದ 35 ವರುಷಗಳಿಂದ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕುಮಾರ್ ಹೆಗ್ಡೆ ಬಿ ಎ ಅವರು ಕಾಲೇಜಿನ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿದ್ದಾರೆ. ಡಾ. ಎ ಜಯಕುಮಾರ್ ಶೆಟ್ಟಿ ನಿವೃತ್ತಿಯಾಗಿದ್ದರಿಂದ ತೆರವಾಗಿರುವ ಪ್ರಾಂಶುಪಾಲರ ಹುದ್ದೆಯನ್ನು ಪ್ರಸ್ತುತ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರೂ, ವಿಜ್ಞಾನ ನಿಕಾಯದ ಡೀನ್ ಆಗಿರುವ ಡಾ. ಬಿ ಎ ಕುಮಾರ್ ಹೆಗ್ಡೆ ಅಲಂಕರಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ರ್ಯಾಂಕ್ ನೊಂದಿಗೆ ಎಂಎಸ್ಸಿ ಪದವಿ ಪಡೆದುಕೊಂಡರು. ಬಳಿಕ ಎಂಫಿಲ್, ಪಿಜಿಡಿ ಹೆಚ್ ಆರ್ ಎಂ, ಪಿ ಹೆಚ್ ಡಿ ಯನ್ನು ಪಡೆದಿದ್ದಾರೆ.
ಡಾ. ಬಿ.ಎ ಕುಮಾರ್ ಹೆಗ್ಡೆಯವರು ಕಳೆದ 35 ವರ್ಷಗಳಿಂದ ಉಜಿರೆಯ ಎಸ್ ಡಿ ಎಮ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಾಲೇಜಿನ ಎನ್ಎಸ್ಎಸ್ ಅಧಿಕಾರಿಯಾಗಿ ಶ್ರೇಷ್ಠ ಯೋಜನಾಧಿಕಾರಿ ರಾಜ್ಯ ಪ್ರಶಸ್ತಿ ಹಾಗೂ ಇಂದಿರಾಗಾಂಧಿ ಎನ್ಎಸ್ಎಸ್ ರಾಷ್ಟ್ರಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದ್ದಾಗಿದೆ.
ಕಾಲೇಜಿನ ವಾರ್ಷಿಕ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಐದು ವರ್ಷಗಳ ಕಾಲ ಜವಾಬ್ದಾರಿ ನಿರ್ವಹಿಸಿ ವಿಶ್ವವಿದ್ಯಾನಿಲಯ ಮಟ್ಟದ ಶ್ರೇಷ್ಠ ವಾರ್ಷಿಕ ಸಂಚಿಕೆ ಪ್ರಶಸ್ತಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಪಡಿಸಿದ್ದಾರೆ.
ವ್ಯಕ್ತಿತ್ವ ವಿಕಸನ ಸಂಘಟನೆ ಜೆಸಿಐ ಸಂಸ್ಥೆಯ ಪದಾಧಿಕಾರಿಯಾಗಿ, ತರಬೇತುದಾರನಾಗಿ ನೂರಾರು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳನ್ನ ನಡೆಸಿ ಕೊಟ್ಟಿದ್ದಾರೆ.ಕಾರ್ಯಕ್ರಮ ನಿರೂಪಕರಾಗಿ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ ಸಮೂಹ ಇದರ ಅಧ್ಯಕ್ಷರಾಗಿರುವ ಇವರು ಸಂಪನ್ಮೂಲ ವ್ಯಕ್ತಿಯಾಗಿ ಸಂಸ್ಕೃತಿ, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಪರಿಸರ- ಈ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಅನೇಕ ತಜ್ಞ ಉಪನ್ಯಾಸಗಳನ್ನು ನೀಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ ಅಮುಕ್ಟ್ ಇದರ ಉಪಾಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here