ಉಜಿರೆ: ಭಾರತದ ದೇಶೀಯ ಜ್ಞಾನ- ಸಾಂಪ್ರದಾಯಿಕ ಜ್ಞಾನದ ದಾಖಲೀಕರಣವಾಗಿ, ಅದು ಒಪ್ಪಿತಗೊಂಡು ಸದುದ್ದೇಶಕ್ಕೆ ಸರಿಯಾದ ರೀತಿಯಲ್ಲಿ ಬಳಸಲ್ಪಡಬೇಕಿದೆ. ದೇಶೀಯ ತಾಂತ್ರಿಕ ಜ್ಞಾನ ಕೂಡ ದಾಖಲೀಕರಣಗೊಂಡು ದೇಶದ ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಸಂಯೋಜಿಸಲ್ಪಡುವ ಅಗತ್ಯವಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಮೂಲಕ ಸಾಧಿತವಾಗುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಮಾ.30ರಂದು ಅವರು ‘ಇಂಡೀಜಿನಸ್ ಪ್ರಾಕ್ಟೀಸಸ್ ಇನ್ ಹೈಯರ್ ಎಜುಕೇಶನ್ ಇನ್ ಇಂಡಿಯಾ: ಸ್ಟೆಪ್ಸ್ ಅಹೆಡ್’ ರಾಷ್ಟ್ರೀಯ ಸೆಮಿನಾರ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗವು ನವದೆಹಲಿಯ ರಾಷ್ಟ್ರೀಯ ಸಮಾಜ ವಿಜ್ಞಾನ ಪರಿಷದ್ ಸಹಯೋಗ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಸೋಶಲ್ ಸೈನ್ಸ್ ರಿಸರ್ಚ್ (ಐಸಿಎಸ್ಎಸ್ಆರ್) ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.
“ಮಾತೃಭೂಮಿ, ಮಾತೃಸಂಸ್ಥೆ, ಮಾತೃಭಾಷೆ, ಗೋಮಾತೆ ಇವುಗಳನ್ನು ಗೌರವಿಸುವ ಬಗ್ಗೆ ಹಾಗೂ ಭಾರತೀಯ ಸಂಸ್ಕೃತಿ, ಆಚರಣೆ, ಮೂಲನಂಬಿಕೆ, ನೈತಿಕ ಮೌಲ್ಯ ಇತ್ಯಾದಿ ವಿಚಾರಗಳು ಉನ್ನತ ಶಿಕ್ಷಣದಲ್ಲಿ ಅಳವಡಿಸಲ್ಪಡಲಿವೆ. ಪಠ್ಯವಿಷಯಗಳು ಮಾತೃಭಾಷೆಯಲ್ಲಿ ಮುದ್ರಿಸಲ್ಪಡಲಿವೆ. ಆದರೆ ಕಂಪ್ಯೂಟರ್ ಸೈನ್ಸ್, ಮೆಡಿಸಿನ್, ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಇದು ಸವಾಲು. ಆದರೆ ನಾವು ಒಬ್ಬ ಕಲಿಕಾರ್ಥಿಗೆ ಇಂಗ್ಲಿಷ್ ಮಾಧ್ಯಮದಲ್ಲಿಯೇ ಕಲಿಯುವಂತೆ ಕಡ್ಡಾಯಗೊಳಿಸುವಂತಿಲ್ಲ. ಹಾಗಾಗಿ ಸೌಲಭ್ಯಗಳನ್ನು ಸೃಜಿಸಬೇಕಿದೆ” ಎಂದರು.