ಪೂಂಜರ ಪತ್ರಿಕೆಯಲ್ಲಿ ಬಂಗೇರರ ಬಗ್ಗೆ ನಿಷ್ಪಕ್ಷಪಾತವಾಗಿ ವರದಿ ಮಾಡಿದ ಕುಲಾಲ್‌ರಿಗೆ ಅಭಿನಂದನೆಗಳು: ‘ಸುದ್ದಿಯ ಆಪರೇಷನ್’ ನಿಲ್ಲಿಸಿ – ಪತ್ರಿಕೆ ನಡೆಯುವಂತೆ ಅವಕಾಶ ನೀಡಲು ಪೂಂಜರ ತಂಡಕ್ಕೆ ಮನವಿ:

0

37 ವರ್ಷಗಳ ಪತ್ರಿಕೆಯನ್ನು, ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಮ್ಮೆದುರು ಇಡುತ್ತಿದ್ದೇನೆ, ನಮ್ಮ ದಾರಿ ಸರಿಯೇ, ತಪ್ಪೇ ತಿಳಿಸಿ-ಜನಾಭಿಪ್ರಾಯದ ಮೇಲೆ ಪತ್ರಿಕೆ ನಡೆಯಲಿದೆ.

ಕುಲಾಲ್‌ರ ಸಂಪಾದಕತ್ವದ ‘ಸುದ್ದಿ ಉದಯ’ ಪತ್ರಿಕೆ ಉತ್ತಮವಾಗಿ ಬಂದಿದೆ. ಪೂಂಜಾರ ಮಾಲಕತ್ವದ ಪತ್ರಿಕೆಯಲ್ಲಿ ಅವರ ಕಛೇರಿಯಲ್ಲಿ ಕುಳಿತು ಪತ್ರಿಕೆ ಹೊರ ತಂದಿದ್ದರೂ ಬಂಗೇರರ ಭಾಷಣದ ಸುದ್ದಿಯನ್ನು ಕುಲಾಲ್‌ರು ಯಥಾವತ್ತವಾಗಿ ವರದಿ ಮಾಡಿರುವುದು ನಮಗೆ ಅತ್ಯಂತ ಆಶ್ಚರ್ಯ ಮಾತ್ರವಲ್ಲ ಸಂತೋಷ ತಂದಿದೆ. ಎಷ್ಟರ ಮಟ್ಟಿಗೆ ಎಂದರೆ ಸುದ್ದಿ ಪತ್ರಿಕೆಯಲ್ಲೂ ಆ ರೀತಿಯ ಪೂರ್ಣ ವರದಿ ಮಾಡುತ್ತಿರಲಿಲ್ಲ ಎಂದು ಹೇಳಿಕೊಳ್ಳಲು ಬಯಸುತ್ತೇನೆ. ಕುಲಾಲರು ಅದೇ ರೀತಿ ನಿಷ್ಪಕ್ಷಪಾತವಾಗಿ ಪತ್ರಿಕೆ ಹೊರತಂದರೆ ಯಶಸ್ವಿಯಾಗುವುದು ಖಂಡಿತ. ನಮ್ಮ ಸ್ಪರ್ಧೆಯ ಪತ್ರಿಕೆಯಾದರೂ ಅದಕ್ಕೆ ಶುಭಾಶಯಗಳು. ಯಾವುದೇ ಕಾರಣಕ್ಕೆ ಪತ್ರಿಕೆ ನಡೆಸುವಾಗ ತೊಂದರೆಯಾದಾಗ ಅವರ ಬೆನ್ನಿಗೆ ನಿಲ್ಲುತ್ತೇವೆ, ಸಹಾಯ ಮಾಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸುತ್ತೇನೆ.
ಪೂಂಜರು ಬಿಜೆಪಿ ಅಭ್ಯರ್ಥಿಯಾದದ್ದು ಹೇಗೆ? ಕಾರಣವೇನು?:
ಸುದ್ದಿ ಪತ್ರಿಕೆಯ ಆಪರೇಷನ್ ಬಗ್ಗೆ ಕಳೆದ ವಾರ ಬರೆದಿರುವುದರಿಂದ ಅದಕ್ಕೆ ಕಾರಣ ಮತ್ತು ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಜನರ ಮುಂದೆ ಇಡುತ್ತಿದ್ದೇನೆ. ರಕ್ಷಿತ್ ಶಿವರಾಮರು ಕಳೆದ 5 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಕೆಲಸ ಮಾಡಿದಂತೆ, ಹರೀಶ್ ಪೂಂಜರವರು ಕಳೆದ ಚುನಾವಣೆಗಳಿಗಿಂತ ಮೊದಲು 5 ವರ್ಷಗಳ ಕಾಲ ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಕೆಲಸ ಮಾಡಿದ್ದಾರೆ. ಬರೋಡದ ಶಶಿಧರ ಶೆಟ್ಟಿಯವರು ಪೂಂಜರಿಗೆ ಆರ್ಥಿಕ ಬೆಂಬಲ ನೀಡಿದ್ದಾರೆಂದು ಪ್ರಚಾರದಲ್ಲಿತ್ತು. ಶಶಿಧರ ಶೆಟ್ಟರು ಯಾವುದೇ ಬಂಡವಾಳ ಹೂಡಿದರೆ ಅದರ ಲಾಭವನ್ನು ಪಡೆದೇ ಪಡೆಯುತ್ತಾರೆ ಎಂಬ ಅಭಿಪ್ರಾಯವೂ ಇದೆ. ಅದು ಏನೇ ಇರಲಿ. ಯಾರ ಬಂಡವಾಳವೇ ಇರಲಿ, ಪೂಂಜರಂತೂ ಬೆಳ್ತಂಗಡಿಯಲ್ಲಿ ಹೊಸ ಸಂಚಲನವನ್ನು, ಯುವಕರಲ್ಲಿ ಭರವಸೆಯನ್ನು ಉಂಟು ಮಾಡಿದ್ದರು. ಬಿಜೆಪಿಯ ಆಶಾಕಿರಣವಾಗಿ ಮೂಡಿದ್ದರು. ವಸಂತ ಬಂಗೇರರ ದೀರ್ಘ ರಾಜಕೀಯದಲ್ಲಿ ಅವರನ್ನು ವಿರೋಧಿಸಿದವರು ಗೆದ್ದರೂ ಮತ್ತೆ ಅವರೆದುರು ಸೋತಿದ್ದಾರೆ. ಬಿಜೆಪಿಯಿಂದ, ದಳದಿಂದ, ಸ್ವತಂತ್ರವಾಗಿ, ಕಾಂಗ್ರೆಸ್‌ನಿಂದಲೂ ಒಟ್ಟು 5 ಬಾರಿ ಗೆದ್ದು ಬಂದಿದ್ದಾರೆ. ಬಂಗೇರರವರು ಯಾವ ರೀತಿಯಲ್ಲಾದರೂ ಗೆಲ್ಲುತ್ತಾರೆಂಬುವುದು ಜನರ ಅಭಿಪ್ರಾಯವಾಗಿತ್ತು. ಅವರ ನೋಟೂ ಕೊಡಿ, ಓಟೂ ಕೊಡಿ ಎಂಬ ಅಭಿಯಾನಕ್ಕೆ ಜನರು ಬೆಂಬಲ ಕೊಟ್ಟದ್ದನ್ನು ನೋಡಿದ್ದೇನೆ. ಕಿವಿ ಹಿತ್ತಾಳೆ, ಎದುರು ಕೋಪ, ಬಾಯಿ ಹಾಳು ಎಂದಾಗದಿದ್ದರೆ ಭ್ರಷ್ಟಾಚಾರಿಯಲ್ಲದ, ಭ್ರಷ್ಟಾಚಾರದ ಕಡು ವಿರೋಧಿಯೂ ಆಗಿದ್ದ ಬಂಗೇರರವರನ್ನು ಸೋಲಿಸಲು ಯಾರಿಗೂ ಸಾಧ್ಯವಿರಲಿಲ್ಲ ಎಂಬ ಅಭಿಪ್ರಾಯವಿತ್ತು. ಅಂತಹ ಸಮಯದಲ್ಲಿ ಪಾದರಸದಂತೆ ಚುರುಕಾದ, ಆಕರ್ಷಣೀಯ ವ್ಯಕ್ತಿತ್ವದ, ಸದಾ ನಗುಮುಖದ, ಎಲ್ಲೆಂದರಲ್ಲಿಗೆ ಹೋಗುವ, ಸಹಾಯಕ್ಕೆ ಬೀಳುವ, ಹಿಂದುತ್ವದ ಪ್ರತೀಕವಾದ ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಮುಂದಾಳತ್ವ ವಹಿಸಿದ ಪೂಂಜರವರು, ಹಗಲು ರಾತ್ರಿ ಕೆಲಸ ಮಾಡಿ, ಹಣ ಸಂಗ್ರಹಿಸಿ ಡೊನೇಶನ್ (ಬರೋಡದ ಶಶಿಧರ್ ಶೆಟ್ಟರ ಕೊಡುಗೆ) ನೀಡಿ ಜನಪ್ರಿಯತೆಯನ್ನು ಗಳಿಸಿದ್ದರು. ಹಿರಿಯರ ಕಾಲು ಹಿಡಿದು, ಕಿರಿಯರೊಂದಿಗೆ ಸೆಲ್ಫಿ ತೆಗೆದು ಜನರೊಂದಿಗೆ ಬೆರೆತಿದ್ದರು. ನಮ್ಮ ಸಿಬ್ಬಂದಿಗಳಲ್ಲಿಯೂ ಅನೇಕರು ಅವರ ಅಭಿಮಾನಿಗಳಾಗಿ ಪರಿವರ್ತನೆಗೊಂಡಿದ್ದರು. ಸುದ್ದಿಯ ಮೆನೇಜರ್ ಮಂಜುನಾಥ ರೈ ತನ್ನ ಮಹಡಿಯ ಉದ್ಘಾಟನೆಗೆ ನನ್ನನ್ನು ಕರೆಯದಿದ್ದರೂ, ಪೂಂಜರನ್ನು ಕರೆದಿದ್ದರು. ಪೂಂಜರಿಗೆ ಬಿಜೆಪಿಯಲ್ಲಿ ಸೀಟು ಸಿಕ್ಕಿದರೆ ಗೆಲುವು ಖಂಡಿತ ಎಂಬ ಅಭಿಪ್ರಾಯ ವ್ಯಾಪಕವಾಗಿ ಹರಡಿತ್ತು. ಅವರಿಗೆ ಸೀಟೂ ದೊರಕಿತ್ತು. ಗೆಲುವನ್ನೂ ಸಾಧಿಸಿದರು.
ಪೂಂಜರ ಗೆಲುವು ಖಚಿತವಾದರೂ, ಸುದ್ದಿಯನ್ನು ನಿಯಂತ್ರಿಸುವ ಪ್ರಯತ್ನ ಯಾಕೆ? :
ಈ ಅವಧಿಯಲ್ಲಿ ಬೆಳ್ತಂಗಡಿಗೆ ಪೂಂಜರನ್ನು ಪರಿಚಯಿಸಿದ್ದು ಸುದ್ದಿ,

ಅವರನ್ನು ಹೊತ್ತದ್ದೂ ಸುದ್ದಿ ಎಂದು ಹೇಳುವವರು ಇದ್ದಾರೆ. ಅದಕ್ಕೆ ನಾನು ಅಂದಿನ ಸಮಯಕ್ಕೆ ಅದು ಸರಿಯೇ ಇದೆ. ಯಾಕೆಂದರೆ ಅವರು ಕೆಲಸ ಮಾತ್ರ ಮಾಡುತ್ತಿದ್ದುದಲ್ಲ. ಜನರ ಪ್ರೀತಿಯನ್ನು ಗಳಿಸಿದ್ದರು. ಆದ್ದರಿಂದ ವರದಿ ಬಂದಿತ್ತು. ಈಗಲೂ ಅವರು ಮಾಡುತ್ತಿರುವ ಕೆಲಸಗಳು ಸುದ್ದಿಯಲ್ಲಿ ಬರುತ್ತಿದೆ ಎಂದು ಹೇಳಿದ್ದೇನೆ. ಪೂಂಜರು ಗೆದ್ದು ಬಂದ ಮೇಲೆ ಬಿರುಗಾಳಿ ಮತ್ತು ಸುಂಟರಗಾಳಿಯಂತೆ ಪಂಚಾಯತ್ ಪಂಚಾಯತ್‌ಗಳಲ್ಲಿ ತಿರುಗಿ ಕಾಂಗ್ರೆಸನ್ನು ಧೂಳೀಪಟ ಮಾಡಿ ಬಿಜೆಪಿಮಯ ಮಾಡಿದ್ದರು. ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡರು. ಸಾವಿರಾರು ಕೋಟಿ ಅನುಧಾನ ತಂದು ರಸ್ತೆಗಳನ್ನು, ಕಟ್ಟಡಗಳನ್ನು ಮಾಡಿದ್ದರು. ಅಷ್ಟೆಲ್ಲಾ ಆದಾಗ ಭ್ರಷ್ಟಾಚಾರ ಆಗಿದೆ ಎಂಬ ಕೂಗು ಕೇಳಿ ಬಂದರೂ ಊರಿಗೆ ಹಣ ಬಂದಿದೆಯಲ್ಲ, ಅಭಿವೃದ್ಧಿಯಾಗಿದೆ, ಭ್ರಷ್ಟಾಚಾರವೂ ಆಗಿರಬಹುದು ಆಗಲಿ ಬಿಡಿ ಎಂದು ಹೇಳುವವರೂ ಇದ್ದರು. ಆದರೆ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ಕೊಟ್ಟು ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಆಪಾದನೆಯೂ ಸಣ್ಣದಾಗಿ ಅವರ ಮೇಲಿದೆ. ಇಲ್ಲಿ ಪೂಂಜರನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಠಿಯಾಯಿತು. ಪ್ರಧಾನಿ ಮೋದಿಯವರಿಗೆ ಪ್ರಸಾದ ನೀಡಿ ಬಂದ ಮೇಲೆ ಪಕ್ಷದಲ್ಲಾಗಲಿ, ಸರಕಾರದಲ್ಲಾಗಲಿ ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇರಲಿಲ್ಲ. ಅಧಿಕಾರ, ಹಣದ ಬಲ, ಜನರ ಬೆಂಬಲ ದೊರಕಿದರೆ ಗೆಲ್ಲುವುದು ಖಂಡಿತ ಎಂದಾದಾಗ, ಪೂಂಜರು ಅಷ್ಟೆಲ್ಲಾ ಇದ್ದರೂ ಸಹಜವಾಗಿ ಊರಲ್ಲಿ ಉಂಟಾಗುವ ವಿರೋಧವನ್ನು, ತಮ್ಮವರಿಂದ ಆಗುವ ತಪ್ಪುಗಳನ್ನು ಸಹಿಸಲು ಮರೆತರು. ವಿರೋಧಿಗಳನ್ನು ಹತ್ತಿಕ್ಕಲು ಪ್ರಾರಂಭಿಸಿದರು. ಬಳ್ಳಾರಿ ಗಣಿಗಳ ಗರಡಿಯಲ್ಲಿ ಪಳಗಿದವರು ಎಂಬ ಮಾತು ಕೇಳಿ ಬಂತು. ಹೀಗಿದ್ದರೂ ಪೂಂಜರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಲಿಲ್ಲ. ಅವರ ಅಭಿವೃದ್ಧಿ ಕೆಲಸಗಳೂ ನಿಲ್ಲಲಿಲ್ಲ. ಅವರ ಗೆಲುವು ಖಚಿತವಾಗಿತ್ತು. ಹೀಗಿರುವಾಗ ಅವರಿಗೆ ಸಹಜವಾಗಿ ಪ್ರಚಾರದಿಂದ ತನ್ನ ಗೆಲುವಿಗೆ ಕಾರಣವಾಗಿದ್ದ ಸುದ್ದಿ ಬಿಡುಗಡೆಯನ್ನು ನಿಯಂತ್ರಿಸುವ ಯೋಚನೆ ಬಂದಿರಬೇಕು. ಆ ಮೂಲಕ ತನ್ನ ವಿರೋಧಿಗಳನ್ನು ಹತ್ತಿಕ್ಕಬಹುದು ಎಂಬ ರಾಜಕೀಯದ ಸಹಜ ಯೋಜನೆ ಹುಟ್ಟಿರಬಹುದು.
ನಮ್ಮಅಹಂಕಾರ, ಆತ್ಮ ವಿಶ್ವಾಸವನ್ನು ಪೂಂಜರು ನಾಶ ಮಾಡಿದರು: ನಮ್ಮನ್ನು ಕರೆದು ಬಂಗೇರರ ಜಾಹೀರಾತನ್ನು, ವರದಿಯನ್ನು ಹಾಕಬಾರದು. ರಾಜ್ಯದ ಯಾವುದೇ ಪತ್ರಿಕೆಯವರು ನನ್ನ ವಿರುದ್ಧದ ನ್ಯೂಸ್ ಹಾಕುವುದಿಲ್ಲ. ನೀವೂ ಉದ್ಯಮವಾಗಿ ಪತ್ರಿಕೆ ನಡೆಸಿ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಹೇಳಿದ್ದರು. ಅದನ್ನು ನಾವು ಒಪ್ಪದೆ ಎಲ್ಲರ ವರದಿಯನ್ನು ಹಾಕುತ್ತೇವೆ. ನಿಮಗೆ ಬೇಕಿದ್ದರೆ ನಿಮ್ಮದೇ ಪತ್ರಿಕೆಯನ್ನು ನಡೆಸಿ ಎಂದು ಹೇಳಿದ್ದನ್ನು ಈ ಹಿಂದೆಯೂ ಬರೆದಿದ್ದೆ. ಪತ್ರಿಕೆ ಮಾಡಿ ಎಂದು ಹೇಳಿದ್ದನ್ನು ನಾನು ಮರೆತಿದ್ದೆ. ಆದರೆ ಅವರು ಮರೆಯಲಿಲ್ಲ. ಬೆಳ್ತಂಗಡಿಯಲ್ಲಿ ಪೂಂಜರ ಪತ್ರಿಕೆ ಬರುತ್ತದೆ ಎಂದು ಯಾರೋ ಹೇಳಿದಾಗ ಟಾಟಾ, ಬಿರ್ಲಾರೇ ಇಲ್ಲಿ ಬಂದು ಪತ್ರಿಕೆ ಮಾಡಿದರೂ ಸುದ್ದಿಯ ಪ್ರಾಮಾಣಿಕ ವರದಿಗಾರರ ಬೆಂಬಲ ಇರುವವರೆಗೆ ಯಾರಿಗೆ ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂಬ ನಂಬಿಕೆಯಿಂದ, ಅಹಂಕಾರದಿಂದ ಹೇಳಿದ್ದೆ. ಸುದ್ದಿಬಿಡುಗಡೆಯ ವರದಿಗಾರರನ್ನು ಸೆಳೆದು ಪತ್ರಿಕೆ ಮಾಡುತ್ತಾರೆ ಎಂದು ಹೇಳಿದಾಗ ಸುದ್ದಿ ವರದಿಗಾರರನ್ನು (ವರದಿಗಾಗಿ ಹೋದಾಗ ಕೊಟ್ಟ ಹಣವನ್ನು ಹಿಂತಿರುಗಿಸುತ್ತಿದ್ದ) ಯಾವುದೇ ಆಮಿಷ ಒಡ್ಡಿ ಸೆಳೆಯಲು ಸಾಧ್ಯವಿಲ್ಲ. ಪೂಂಜರ ಏಕಮುಖ ಪತ್ರಿಕೆಯಲ್ಲಂತು ಅವರು ಕೆಲಸ ಮಾಡಲು ಖಂಡಿತ ಒಪ್ಪಲಿಕ್ಕಿಲ್ಲ ಎಂದು ಅಭಿಮಾನ ಮತ್ತು ಆತ್ಮವಿಶ್ವಾಸದಿಂದ ಹೇಳಿದ್ದೆ. ಆದರೆ ಹರೀಶ್ ಪೂಂಜರವರು ನಮ್ಮ ಅಹಂಕಾರವನ್ನು, ಆತ್ಮವಿಶ್ವಾಸವನ್ನು ನಾಶ ಮಾಡಿದ್ದಾರೆ. ಅವರು ಆ ವಿಷಯದಲ್ಲಿ ಗೆದ್ದಿದ್ದಾರೆ ಎಂದು ತಲೆ ಬಾಗಿಸಿ ಹೇಳಲು ಬಯಸುತ್ತೇನೆ.
ತುಕಾರಾಮನ ಮೂಲಕ ಆಪರೇಷನ್ ಸುದ್ದಿ ಪ್ರಾರಂಭವಾದದ್ದು ಹೇಗೆ?: ಪೂಂಜರು ಆ ಗೆಲುವನ್ನು ಹೇಗೆ ಸಾಧಿಸಿದರು. ನಾವು ಹೇಗೆ ಸೋತೆವು ಮತ್ತು ಯಾವ್ಯಾವ ತೊಂದರೆಗಳನ್ನು ಹೇಗೆ ಎದುರಿಸುತ್ತಿzವೆ ಎಂದು ಸಂಕ್ಷಿಪ್ತವಾಗಿ ತಿಳಿಸಲು ಬಯಸುತ್ತೇನೆ. ಕಳೆದ 7-8 ವರ್ಷಗಳಲ್ಲಿ ಹರೀಶ್ ಪೂಂಜರವರ ಬಗ್ಗೆ ಸುದ್ದಿಯಲ್ಲಿ ಬಂದ ವರದಿಗಳನ್ನು ನಾವು ಪ್ರದರ್ಶನಕ್ಕೆ ಇಡಲಿದ್ದೇವೆ. ಶಾಸಕರಾಗುವ ಮೊದಲು ಅವರ ಎಷ್ಟೋ ವರದಿಗಳು ಬಂದಿವೆ. ಶಾಸಕರಾದ ನಂತರವಂತು ಮುಖ ಪುಟದಲ್ಲಿ ಅವರ ಫೊಟೊ ವರದಿಯಲ್ಲದೆ, 10ರಿಂದ 20 ಸುದ್ದಿಗಳು ಪ್ರತೀ ವಾರ ಬಂದಿದೆ. ಅವರು ಅಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದದ್ದು ಅದಕ್ಕೆ ಕಾರಣವಾಗಿತ್ತು. ಅವರ ವಿರೋಧಿಗಳ ಸುದ್ದಿ ತಿಂಗಳಿಗೊಮ್ಮೆ, ಅಪರೂಪಕ್ಕೆ ಬರುತ್ತಿತ್ತು. ಆದರೂ ಪೂಂಜರು ತಮ್ಮ ಆಪರೇಷನ್‌ಗೆ ನಮ್ಮ ಆತ್ಮೀಯನಾಗಿದ್ದ, ಪತ್ರಿಕಾ ಬಳಗದಲ್ಲಿ ಅತ್ಯಂತ ವಿಶ್ವಾಸಪೂರ್ವ ಕೆಲಸ ಮಾಡುತ್ತಿದ್ದ, ಎಲ್ಲರಿಗೂ ಸೇವೆ ನೀಡುವ ಮೂಲಕ ಜನಪ್ರಿಯನಾಗಿದ್ದ ತುಕರಾಮನನ್ನು ಹಿಡಿದರು. ಅವನು ಡಿಸೆಂಬರ್‌ನಲ್ಲಿ ಕೆಲಸ ಬಿಟ್ಟಾಗ ಎಕ್ಸ್‌ಪೋರ್ಟ್ ಬಿಸಿನೆಸ್‌ಗಾಗಿ ಎಂದು ಹೇಳಿದ್ದ. ಅವನ ಮನೆಗೆ ಹೋಗಿ ಮಾತನಾಡಿಸಿದಾಗಲೂ ಅವನು ನನ್ನ ಕಾಲಿಗೆ ನಮಸ್ಕರಿಸಿದ್ದ. ಅವನ ತಂದೆ ತಾಯಿಯೂ ನಮಸ್ಕರಿಸಲು ಬಾಗಿದಾಗ ನಾನು ಅವಕಾಶ ಕೊಟ್ಟಿರಲಿಲ್ಲ. ಆಗ ಅವನು ಯಾವುದೇ ಪತ್ರಿಕೆ ಮಾಡುತ್ತಿಲ್ಲ. ಸುದ್ದಿಗೆ ವರದಿ ಕೊಡುತ್ತಿದ್ದೇನೆ, ಜಾಹೀರಾತು ಕೊಡುತ್ತಿದ್ದೇನೆ ಎಂದು ಹೇಳಿದ್ದ. ಆ ನಂತರ ಅವನ ಬಗ್ಗೆ ಯಾರು ಏನೇ ಹೇಳಿದರೂ ನನಗೆ ಯಾವುದೇ ಸಂಶಯ ಇರಲಿಲ್ಲ. ಹೀಗಿರುವಾಗ ಯಾರಾದರು ಪೂಂಜರ ಪತ್ರಿಕೆ ಬರುತ್ತದೆ ಎಂದಾಗ ನಾನು ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದೆ. ಆದರೆ ತುಕಾರಾಮ ಹರೀಶ್ ಪೂಂಜರ ನೇತೃತ್ವದಲ್ಲಿ ಸುದ್ದಿಯ ಸಿಬ್ಬಂದಿಗಳನ್ನು ಸೆಳೆಯುವ (ಆಪರೇಷನ್) ಕೆಲಸದಲ್ಲಿ ತೊಡಗಿಸಿಕೊಂಡಿರುವ ಅರಿವು ನಮಗೆ ಆಗಲೇ ಇಲ್ಲ. ಫೆಬ್ರವರಿಯಲ್ಲಿ ಅನಾರೋಗ್ಯದ ಕಾರಣಕ್ಕೆಂದು ರಜೆಯಲ್ಲಿ ಹೋದ ಕುಲಾಲರು ಮಾರ್ಚ್‌ನಲ್ಲಿ ಬಾರದಿದ್ದಾಗ ಆತಂಕ ಉಂಟಾಯಿತು. ಆದರೂ ಅವರು ಪೂಂಜರ ಅಡಿಯಲ್ಲಿ ಕೆಲಸ ಮಾಡಲಿಕ್ಕಿಲ್ಲ ಎಂಬ ನಂಬಿಕೆ ನನ್ನಲ್ಲಿತ್ತು. ಮಾರ್ಚ್ 11ಕ್ಕೆ ಪತ್ರಿಕೆ ಬಿಡುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದಾಗ ನನಗೆ ನಂಬಲೇ ಸಾಧ್ಯವಾಗಲಿಲ್ಲ. ಸುದ್ದಿಯಿಂದ 8 ಜನ ಹೋಗುತ್ತಾರೆ, ಸುದ್ದಿಯ ಎಲ್ಲರೂ ಬಿಟ್ಟು ಆ ಪತ್ರಿಕೆಗೆ ಹೋಗುತ್ತಾರೆ ಎಂಬ ವದಂತಿಗಳು ಬರಲಾರಂಭಿಸಿತ್ತು. ಬರೋಡದ ಶಶಿಧರ ಶೆಟ್ಟರು ಅದನ್ನು ಕೇಳಿದ್ದರು. ಮಾರ್ಚ್ 13ರಂದು ಪ್ರಶಸ್ತಿ ಸ್ವೀಕರಿಸಿದ ದಿನ ನನಗೆ ಸಂತೋಷ ಮತ್ತು ತಿಮ್ಮಪ್ಪರು ಬರುವುದಿಲ್ಲ ಎಂದು ಹೇಳಿದ್ದಾರೆಂಬ ಸಂದೇಶ ಬಂತು. ನನಗೆ ನಿಂತ ನೆಲವೇ ಕುಸಿದಂತೆ ಆಯಿತು.
ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಇಲ್ಲದಿರಲು ಕಾರಣವೇನು?:
ಅಲ್ಲಿಂದ ಇಂದಿನವರೆಗೂ ಅದರ ಪ್ರಭಾವದಿಂದ ಪೂರ್ಣ ಹೊರ ಬರಲು ಸಾಧ್ಯವಾಗುತ್ತಿಲ್ಲ. ನನ್ನ ಆತ್ಮಿಯರೇ ವಿಶ್ವಾಸಾರ್ಹರೇ ಹೀಗೆ ಮಾಡಿದರೆ ಹೇಗೆ? ಎಂಬ ಚಿಂತೆ ಒಂದು ಕಡೆ ಇದ್ದರೆ ಅದಕ್ಕಿಂತ ದೊಡ್ಡ ಅಘಾತ ನೀಡಿದ್ದು- ಅವರುಗಳು ಸರಿಯಾದ ಸಂಬಳ ಸಿಗದೆ ಇದ್ದುದರಿಂದ ಹೋಗಿದ್ದಾರೆ ಎಂಬ ಪ್ರಚಾರ, ಅಪಪ್ರಚಾರ. ಇದು ಸುದ್ದಿ ಪತ್ರಿಕೆಯನ್ನು ಮುಚ್ಚುವುದು ಮಾತ್ರವಲ್ಲ 37 ವರ್ಷಗಳ ಪತ್ರಿಕೆಯ ಆಶಯವನ್ನು, ಸಾಧನೆಗಳನ್ನು, ಆದರ್ಶಗಳನ್ನು, ಹೋರಾಟಗಳನ್ನು, ಆಂದೋಲನಗಳ ಉದ್ದೇಶವನ್ನು ಎಲ್ಲವನ್ನೂ ನಾಶ ಮಾಡುವ ಪ್ರಯತ್ನ ಎಂಬ ಅರಿವಾಯಿತು. ‘ಸುದ್ದಿ ಉದಯ’ ಪತ್ರಿಕೆಯ ಉದ್ಘಾಟನೆಗೆ, ನನ್ನಲ್ಲಿ ಕೆಲಸ ಮಾಡಿದವರ ಹೆಸರಿನಲ್ಲಿಯೇ ಆಮಂತ್ರಣ ಇರುವಾಗ ಸಹಜವಾಗಿ ನನ್ನ ಹೆಸರು ಅತಿಥಿಯಾಗಿ ಆಮಂತ್ರಣ ಪತ್ರಿಕೆಯಲ್ಲಿ ಇರಬೇಕಿತ್ತು. ಆದರೆ ನನ್ನ ಹೆಸರು ಕೊನೇಯ ಪಟ್ಟಿಯಲ್ಲಿಯೂ ಇಲ್ಲದಿರುವುದನ್ನು ನೋಡಿದಾಗ ಸುದ್ದಿ ಉದಯದ ಉದ್ಘಾಟನೆಯ ಸಮಾರಂಭ- ಸುದ್ದಿಗೆ ಮರಣಶಾಸನ ಅಥವಾ ಮರಣ ದಂಡನೆ ನೀಡುವ ಕಾರ್ಯಕ್ರಮವನ್ನಾಗಿ ಮಾಡುವ ಪ್ರಯತ್ನ ನಡೆಯಲಿದೆ ಎಂಬ ಅರಿವು ನನಗಾಯಿತು.
ಸುದ್ದಿಯಲ್ಲಿ ಸರಿಯಾದ ಸಂಬಳ ಸಿಗಲಿಲ್ಲ ಎಂದು ಸಿಬ್ಬಂದಿಗಳು ಹೊರಗೆ ಹೋಗಿ ಪತ್ರಿಕೆ ಮಾಡಿದ್ದಾರೆ. ಅದು ಪೂಂಜರದ್ದಲ್ಲ. ಅವರ ಬೆಂಬಲ ಮಾತ್ರ ಎಂದು ಪ್ರಚಾರವಾದರೆ ನಾನು ಏನೂ ಮಾಡುವಂತೆ ಇರಲಿಲ್ಲ. 37 ವರ್ಷದ ನನ್ನ ಪತ್ರಿಕೆ ಮತ್ತು ನನ್ನ ಆಶಯ ನಾಶವಾಗುತ್ತಿತ್ತು. ಅದನ್ನು ಎದುರಿಸದೆ ಇದ್ದರೆ ನಾನಾಗಲಿ, ನನ್ನ ಬಳಗದವರಾಗಲಿ ಪತ್ರಿಕೆ ಮಾಡುವುದು ಬಿಡಿ ಬೆಳ್ತಂಗಡಿಗೆ ಕಾಲಿಡದಂತೆ ಮಾಡುವ ಪ್ರಯತ್ನವಿದು ಎಂದು ಅರ್ಥ ಮಾಡಿಕೊಂಡೆ. ಅದನ್ನು ಎದುರಿಸಲಿಕ್ಕೆ ಬೇಕಾದ ಪೂಂಜರ ಪತ್ರಿಕೆ ಎಂಬ ಸಂಪಾದಕೀಯವನ್ನು ಬರೆದು ಅದರಲ್ಲಿ ನಮ್ಮ ಸಿಬ್ಬಂದಿಗಳಿಗೆ ದೊರಕುವ ಸಂಪಾದನೆಯನ್ನು, ಅವರ ಮನೆಗೆ ಹೋದಾಗ ಅವರ ಮನೆಯವರು ಸ್ವಾಗತಿಸಿದ್ದನ್ನು, ನಮ್ಮನ್ನು ಒತ್ತಡದ ಕಾರಣಕ್ಕಾಗಿ ಹೋಗಿದ್ದಾರೆ ಎಂಬ ಭಾವನೆ ಸಂತೋಷ್ ಕೋಟ್ಯಾನ್, ಮತ್ತಿತರರ ಮನೆಯಲ್ಲಿ ಉಂಟಾದುದನ್ನು ಫೊಟೋ ಸಮೇತ ವಿವರವಾಗಿ ಬರೆದೆ.
ಪೂಂಜರು ನನ್ನ ಹೆಸರನ್ನು ಸುದ್ದಿ ಪತ್ರಿಕೆಯನ್ನು ಗುರುತಿಸದೆ ಇರಲು ಕಾರಣವೇನು?: ಪೂಂಜರ ಸಭೆಯಲ್ಲಿ ಅವರ ಎದುರೇ ಕುಳಿತುಕೊಂಡು ಸವಾಲುಗಳನ್ನು, ಅಪಾಯವನ್ನು ಎದುರಿಸಲು ನಿರ್ಧರಿಸಿದೆ. ಭಸ್ಮಾಸುರರಾಗಬೇಡಿ ಎಂದು ಬರೆದ ಸಂಪಾದಕೀಯದ ಪತ್ರಿಕೆಯನ್ನು ಹಿಡಿದುಕೊಂಡು ನಮ್ಮ ಬಳಗದೊಂದಿಗೆ ಹೋಗಿ ಅವರ ಎದುರೇ ಕುಳಿತುಕೊಂಡು ಅವರನ್ನೇ ಕಣ್ಣಿಗೆ ಕಣ್ಣು ಇಟ್ಟು ನೋಡಿದೆ. ಈ ನಡುವೆ ನನ್ನ ಸಿಬ್ಬಂದಿಯಾಗಿದ್ದ ‘ಸುದ್ದಿ ಉದಯ’ದ ಸಂತೋಷ್ ನನ್ನನ್ನು ಸ್ವಾಗತಿಸಿ, ಕಾಲಿಗೆ ನಮಸ್ಕರಿಸಿ ಗುರುತಿಸಿದ್ದರು. ಕುಲಾಲರು ಕಾಲಿಗೆ ನಮಸ್ಕರಿಸಿ, ಹೂ ಗುಚ್ಛ ನೀಡಿ ಗೌರವಿಸಿದರು. ತುಕರಾಮರ ತಂದೆ ಬಂದು ಆತ್ಮೀಯವಾಗಿ ಮಾತನಾಡಿಸಿದರು. ಅತಿಥಿಗಳಲ್ಲಿ ಕೆಲವರು ನನ್ನನ್ನು, ಪತ್ರಿಕೆಯನ್ನು ಗುರುತಿಸಿ ಮಾತನಾಡಿದರು. ಸಂಪಾದಕೀಯದಲ್ಲಿ ನಾನು ಬರೆದ ಯಾವುದೇ ವಿಷಯಗಳ ಬಗ್ಗೆ ಅವರ‍್ಯಾರೂ ಅಸಮಾಧಾನ ತೋರಿಸಲಿಲ್ಲ. ಅದರಿಂದಾಗಿ ನಮ್ಮನ್ನು ಬಿಟ್ಟು ಹೋಗಿ ಹೊಸ ಪತ್ರಿಕೆ ಮಾಡುತ್ತಿರುವ ಸುದ್ದಿ ಬಳಗಕ್ಕೆ ನನ್ನಲ್ಲಿ ಪ್ರೀತಿ, ವಿಶ್ವಾಸವಿದೆ ಎಂಬುದನ್ನು ನನಗೆ ಮಾತ್ರವಲ್ಲ ಅಲ್ಲಿ ನೆರೆದಿದ್ದ ಎಲ್ಲರಿಗೂ ತೋರಿಸಿಕೊಟ್ಟರು. ಆದರೆ 10 ವರ್ಷಗಳ ಕಾಲ ಸದಾ ಸುದ್ದಿಯ ನ್ಯೂಸ್‌ನಲ್ಲಿ ಇರುತ್ತಿದ್ದ ಪೂಂಜರು ‘ಸುದ್ದಿ ಉದಯ’ ಪತ್ರಿಕೆ ಸಕಾರಾತ್ಮಕ ಪತ್ರಿಕೆಯಾಗಿ ಕೆಲಸ ಮಾಡುತ್ತಿದೆ. ನಕಾರಾತ್ಮಕ ಸುದ್ದಿಗಳಿಗೆ ಅವಕಾಶವಿಲ್ಲ ಎಂದು ಹೇಳಿ ಆ ಪತ್ರಿಕೆಗೆ ಬೆಂಬಲ ನೀಡುವಂತೆ ಕರೆ ಕೊಟ್ಟರೂ, ಮಾತನಾಡುವಾಗ ಸುದ್ದಿಯನ್ನಾಗಲಿ ನನ್ನನ್ನಾಗಲಿ ಗುರುತಿಸಲಿಲ್ಲ. ಆದರೆ ನಾನು ಬರೆದ ಸಂಪಾದಕೀಯದಲ್ಲಿನ ವಿಷಯಗಳನ್ನು ಅಲ್ಲಗಳೆಯಲಿಲ್ಲ. ಆ ಮೂಲಕ ಆ ಪತ್ರಿಕೆ ಅವರದ್ದೇ ಎಂಬುವುದನ್ನು ಮಾತ್ರ ಸಾಬೀತು ಮಾಡಿದರು. ಪೂಂಜರವರು ಯಾವ ರೀತಿಯಲ್ಲಿ ನಮ್ಮನ್ನು ನಾಶ ಮಾಡಲು ಪತ್ರಿಕೆಯ ಉದ್ಘಾಟನಾ ಸಮಾರಂಭವನ್ನು ಉಪಯೋಗಿಸುತ್ತಾರೆ. ಏನೆಲ್ಲಾ ಹೇಳಬಹುದು ಎಂಬುದನ್ನು ಅವರು ಸಭೆಯಲ್ಲಿ ಹೇಳುವುದಕ್ಕೆ ಮೊದಲೇ ನನ್ನ ಬಳಗದ ಕೆಲವರಲ್ಲಿ ಹೇಳಿದ್ದೆ. ನಾನು ಸಂಪಾದಕೀಯ ಬರೆಯದೇ ಇದ್ದು, ಅವರ ಸಭೆಗೆ ಹೋಗದೇ ಇದ್ದಿದ್ದರೆ ಸುದ್ದಿಯ ಸಿಬ್ಬಂದಿಗಳು ಸಂಬಳವಿಲ್ಲದೆ ಹೊರಗೆ ಬಂದಿದ್ದಾರೆ, ಅವರಿಗೆ ಸುದ್ದಿಯಿಂದ ಅನ್ಯಾಯವಾಗಿದೆ ಆದುದರಿಂದ ಅವರಿಗೆ ಬೆಂಬಲ ಕೊಡುವುದು ನನ್ನ ಕರ್ತವ್ಯ ಎಂದು ಬೆಂಬಲ ನೀಡಿದ್ದೇನೆ ಎಂದು ಹೇಳುವುದಲ್ಲದೆ, ಜನರೂ ಅವರಿಗೆ ಬೆಂಬಲ ಕೊಡಬೇಕೆಂದು ಘೋಷಣೆ ಮಾಡಿ ಚಪ್ಪಾಳೆ ಗಿಟ್ಟಿಸುವ ಉದ್ದೇಶ ಅವರದ್ದಾಗಿತ್ತು. ಆದರೆ ಅವರ ಸ್ಕ್ರಿಪ್ಟ್‌ನಲ್ಲಿ ಸುದ್ದಿಯ ಸಿಬ್ಬಂದಿಗಳ ಸಂಬಳವಿಲ್ಲದೆ ಹೊರಗೆ ಬಂದಿದ್ದಾರೆ ಎಂಬ ವಾಕ್ಯವನ್ನು ಅನಿವಾರ್ಯವಾಗಿ ಕೈ ಬಿಟ್ಟು ಉಳಿದದ್ದನ್ನೆಲ್ಲವನ್ನೂ ಹೇಳಿದ್ದಾರೆ.
ಪತ್ರಿಕೆಯ ಮೇಲೆ ಪೂಂಜರ ಬೆಂಬಲಿಗರಿಗೆ ಅಸಮಾಧಾನ ಯಾಕೆ?: ನಾವು ಇಷ್ಟೆಲ್ಲಾ ಮಾಡಿದರೂ ಸುದ್ದಿ ಪತ್ರಿಕೆಯ ಬಳಗವನ್ನು ಸೆಳೆದು ಸುದ್ದಿ ಪತ್ರಿಕೆಯಲ್ಲಿ ಕೆಲಸ ಮಾಡಲು ಯಾರೂ ಸಿಬ್ಬಂದಿಗಳು ಇರದಂತೆ ಮಾಡಿ, ಪತ್ರಿಕಾ ಕಛೇರಿಯನ್ನು ಮುಚ್ಚಿಸುವ ಪ್ರಯತ್ನವನ್ನು ಪೂಂಜರ ಬಳಗದವರು ಮುಂದುವರಿಸಿದ್ದಾರೆ. ಈ ಹಿಂದೆ ಅವರು ನಡೆಸಿದ ಒತ್ತಡದ ಕಾರ್ಯಾಚರಣೆಯನ್ನು ಕಳೆದ ವಾರದ ಸಂಪಾದಕೀಯದಲ್ಲಿ ವಿವರವಾಗಿ ನೀಡಿದ್ದರೂ ಸುದ್ದಿಯ ಮ್ಯಾನೇಜರ್ ಮಂಜುನಾಥರನ್ನು ಹೊರತು ಪಡಿಸಿ ಎಲ್ಲರನ್ನು ಕರೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿಗಳ ಆಮಿಷ ಒಡ್ಡುತ್ತಿದ್ದಾರೆ, ಒತ್ತಡ ತರುತ್ತಿದ್ದಾರೆ. ಬರೋಡದ ಶಶಿಧರ ಶೆಟ್ಟರ ತಮ್ಮನ ಬಗ್ಗೆ ವಸಂತ ಬಂಗೇರ ಹೇಳಿದ ಮಾತುಗಳು ಸುದ್ದಿಯಲ್ಲಿ ಪ್ರಕಟಗೊಂಡದ್ದಕ್ಕೆ ಅವರು, ರಾಜೇಶ್ ಪೈಯ ಸಂಬಂಧಿಕರ ಮೇಲೆ ತಹಶೀಲ್ದಾರ್ ದಾಳಿಯನ್ನು ಬರೆಯಬೇಡಿ ಎಂದು ರಾಜೇಶ್ ಪೈ ಹೇಳಿದ್ದರೂ ಅದನ್ನು ಸುದ್ದಿಯಲ್ಲಿ ಪ್ರಕಟಿಸಿದ್ದಕ್ಕೆ ಅವರುಗಳು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅದೇ ರಾಜೇಶ್ ಪೈಯವರಿಗೆ ಶಾಸಕ ಪೂಂಜರ ಬೆಂಬಲ ಇದ್ದರೂ ತಹಶೀಲ್ದಾರರಿಗೆ ಕೇಸು ಮಾಡದಂತೆ ಅವರ ಸಂಬಂಧಿಕರು 1.75 ಲಕ್ಷ ನೀಡಿದ ಬಗ್ಗೆ ಯಾವುದೇ ಬೇಸರವಿಲ್ಲ. ಯಾಕೆ? ಅದನ್ನು ಶಾಸಕರ ಮುಖಾಂತರ ಹಿಂದಕ್ಕೆ ಪಡೆಯಬಹುದಿತ್ತಲ್ಲವೇ? ರಾಜೇಶ್ ಪೈ ಹೊಸ ಪತ್ರಿಕೆಗೆ ಬೆಂಬಲ ಇದ್ದಾರೆ ಎಂದು ಬರೆಯುವಾಗ ಬದುಕು ಕಟ್ಟೋಣ ತಂಡದ ರಾಜೇಶ್ ಎಂದು ಬರೆದಿದ್ದಕ್ಕೆ ಮೋಹನ್‌ರವರು ಅಸಮಧಾನಗೊಂಡಿದ್ದಾರೆ. ಯಾಕೆ? ಅದರಲ್ಲಿ ಏನು ತಪ್ಪಿದೆ?. ಅಸಮಾಧಾನಗೊಳ್ಳುವುದು ಅವರ ಹಕ್ಕೇ ಆಗಿರಬಹುದು. ಆದರೆ ಸುದ್ದಿ ಪತ್ರಿಕೆ ಈ ಹಿಂದೆ ಮೋಹನ್‌ರನ್ನು ಪುತ್ತೂರಿನಲ್ಲಿ ಚಾನೆಲ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಗುರುತಿಸಿದ್ದರೂ ಅವರ ಸುದ್ದಿಗಳು, ಜಾಹೀರಾತುಗಳು ಸುದ್ದಿ ಪತ್ರಿಕೆಯಲ್ಲಿ ಬಂದಿದ್ದರೂ, ಮೋಹನ್‌ರಿಗೆ ‘ಸುದ್ದಿ ಉದಯ’ ಪತ್ರಿಕೆಯ ಉದ್ಘಾಟನಾ ಸಮಾರಂಭದಲ್ಲಿ ನನ್ನ ಸಂಪಾದಕೀಯವನ್ನು ಟೀಕಿಸುವಾಗಲೂ ಎದುರು ಕುಳಿತಿದ್ದ ನಾನು ಮತ್ತು ಸುದ್ದಿ ಪತ್ರಿಕೆ ಹಾಗೂ ಅದರಲ್ಲಿರುವ ಯಾವುದೇ ಒಳ್ಳೆಯ ಕೆಲಸಗಳು ಕಾಣಲೇ ಇಲ್ಲ ಯಾಕೆ? ಪೂಂಜರನ್ನು ಖುಷಿ ಪಡಿಸಲು ಹಾಗೆ ಮಾಡಿದ್ದಾರೆಯೇ? ಹೀಗೆ ಸುದ್ದಿಗೆ ಪೂಂಜರ ಹಲವಾರು ಬೆಂಬಲಿಗರು ಹಿಂದಿನಿಂದ ವಿರೋಧ ಮಾಡುತ್ತಿದ್ದಾರೆ. ನಮ್ಮ ಸಿಬ್ಬಂದಿಗಳನ್ನು ಕೆಲಸ ಬಿಟ್ಟು ಬರುವಂತೆ ಕರೆದಿದ್ದಾರೆ. ಎಲ್ಲಾ ಕಡೆಗಳಿಂದಲೂ ಒತ್ತಡ, ಆಮಿಷಗಳು ಬರುತ್ತಿವೆ.
ಮನೆ ಕಟ್ಟಿ ಕೊಡುವುದು ಅಂದರೆ ಇನ್ನೊಂದು ಮನೆಯನ್ನು ಮುರಿಯುವುದೇ?: ಬದುಕು ಕಟ್ಟೋಣ ತಂಡದ ಮೋಹನ್ ಮತ್ತು ರಾಜೇಶ್ ಪೈಯವರಲ್ಲಿ ನನ್ನ ವಿನಂತಿ ಇಷ್ಟೇ, ಒಂದು ಮನೆ ಕಟ್ಟಿ ಕೊಡುವಾಗ ಇನ್ನೊಂದು ಮನೆಯ ಕಂಬವನ್ನು ಮುರಿದು ಆ ಮನೆಯನ್ನು ಕಟ್ಟುವುದಿಲ್ಲವಲ್ಲ. ಹೊಸ ಪತ್ರಿಕೆ ಮಾಡುವುದಿದ್ದರೆ ಮಾಡಲಿ, ಸುದ್ದಿಗೆ ಪರ್ಯಾಯ ಪತ್ರಿಕೆ ಮಾಡಲಿ, ಚಾನೆಲ್ ಮಾಡಲಿ, ಆದರೆ ಸುದ್ದಿಯ ಕಚೇರಿ ಮುಚ್ಚಿಸುವ ಕೆಲಸ ಯಾಕೆ? ಕೆಲಸಗಾರರನ್ನು ಉಳಿಸಿಕೊಳ್ಳುವುದು ಆಡಳಿತದ ಜವಾಬ್ದಾರಿ ಹೌದು, ಆದರೆ ಲಕ್ಷಾಂತರ ರೂಪಾಯಿ ಆಮಿಷವೊಡ್ಡಿ, ಸಿಬ್ಬಂದಿಗಳ ಮೇಲೆ ಒತ್ತಡ ತರುವವರು ಇರುವಾಗ ಅವರನ್ನು ಉಳಿಸಿಕೊಳ್ಳಲು ಸಾಧ್ಯವೇ? ಉದಾ: ದ್ವೇಷದಿಂದ ನಿಮ್ಮ ಸಂಸ್ಥೆಯನ್ನು ನಿಲ್ಲಿಸಬೇಕೆಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಲು ಶಕ್ತಿ ಇರುವವರು ಬಯಸಿದರೆ, (ತಮಾಷೆಗಾಗಿ ಬರೋಡದ ಶಶಿಧರ ಶೆಟ್ಟಿಯಂತಹ ಉದ್ಯಮಿಗಳನ್ನೇ ತೆಗೆದುಕೊಳ್ಳುವ) ನಿಮ್ಮಲ್ಲಿರುವ ಎಲ್ಲಾ ಸಿಬ್ಬಂದಿಗಳನ್ನು ಹೊರಗೆ ಕೊಂಡೊಯ್ದು ಅವರಿಗೆ ನಿಮ್ಮ ಎದುರು ಸ್ಪರ್ಧಿಸಲು ಉದ್ಯಮ ಮಾಡಿಕೊಟ್ಟರೆ, ನಿಮ್ಮಲ್ಲಿಗೆ ಬರುವ ಪ್ರತಿಯೊಬ್ಬನನ್ನು ಕರೆದು ನಿಮಗೆ ಜನ ಸಿಗದಂತೆ ಮಾಡುವುದಿದ್ದರೆ, ಅದರೊಂದಿಗೆ ನೀವು ಸರಿಯಾಗಿ ಕೆಲಸಗಾರರನ್ನು ನೋಡಿಕೊಳ್ಳುವುದಿಲ್ಲ ಎಂದು ವ್ಯಾಪಕ ಪ್ರಚಾರ ಮಾಡಿದರೆ ಅದನ್ನು ಎದುರಿಸಲು ನಿಮಗೆ ಸಾಧ್ಯವಿದೆಯೇ? ಇದ್ದರೆ ಅದು ಏನೆಂದು ತಿಳಿಸಿ. ಅದನ್ನು ನಾನು ಅನುಸರಿಸುತ್ತೇನೆ.
ಯಾರಿಗೂ ತಲೆ ಬಾಗದ ಜನರ ಪತ್ರಿಕೆ ನಡೆಸುತ್ತೇವೆ: ಪೂಂಜರವರೇ ನಿಮ್ಮದು ರಾಜಕೀಯ, ನಮ್ಮದು ಪತ್ರಿಕೆ. ನಾನು ನಿಮ್ಮ ಸ್ಪರ್ಧಿಯಲ್ಲ, ಯಾರನ್ನೂ ಗೆಲ್ಲಿಸುವುದು, ಸೋಲಿಸುವುದು ನಮ್ಮ ಉದ್ದೇಶವಲ್ಲ. ಬಂಗೇರರು ಶಾಸಕರಾಗಿದ್ದಾಗ ನಿಮ್ಮ ನ್ಯೂಸ್ ಹಾಕಬಾರದೆಂದು ಯಾವುದೇ ಒತ್ತಡವನ್ನು ತರಲಿಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ. ಪತ್ರಿಕೆಯನ್ನು ಇಂದು ನೀವು ನಿಯಂತ್ರಿಸಿದರೆ ನಿಮ್ಮ ವಿರೋಧಿಗಳು ಅಧಿಕಾರಕ್ಕೆ ಬಂದಾಗ ಆ ಪತ್ರಿಕೆಗಳು ಅವರ ಪರ ನಿಲ್ಲುತ್ತಾರೆ. ನಿಮ್ಮನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆ ಎಲ್ಲರ ವರದಿ ಹಾಕಬೇಕೆಂದು ಬಯಸಬೇಕಾದ್ದು ತಮ್ಮಂತಹ ನಾಯಕರ ಕರ್ತವ್ಯ. ನಿಮ್ಮಲ್ಲಿ ಬಹಳ ಒಳ್ಳೆಯತನವಿದೆ. ನಾಯಕತ್ವವಿದೆ, ಜನ ಮೆಚ್ಚುವ ಕೆಲಸಗಳನ್ನೂ ಮಾಡಬಲ್ಲಿರಿ. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸಿಕೊಡುವುದು ಪತ್ರಿಕೆಗಳ ಕರ್ತವ್ಯ ಎಂದೇ ತಿಳಿಯಿರಿ. ಅದನ್ನು ತಿದ್ದಿಕೊಂಡು ಮುಂದುವರಿಯಿರಿ. ಸುದ್ದಿ ಪತ್ರಿಕೆ ಎಂದೂ ನಿಮ್ಮ ವಿರೋಧಿಯಾಗಿ ಅಥವಾ ಬಂಗೇರ ವಿರೋಧಿಯಾಗಿ ಅಥವಾ ಯಾರ ಪರವಾಗಿಯೂ ಕೆಲಸ ಮಾಡಿಲ್ಲ. ಇನ್ನೂ ಮಾಡುವುದಿಲ್ಲ. ನಿಮ್ಮಿಂದ ಎಷ್ಟೇ ತೊಂದರೆಗಳಾಗಿದ್ದರೂ ವಿಷಯಕ್ಕೆ ಬರುವಾಗ ನಿಷ್ಪಕ್ಷಪಾತವಾಗಿ ವರದಿ ಮಾಡುತ್ತೇವೆ. ಬರೋಡದ ಶಶಿಧರ ಶೆಟ್ಟಿಯವರದ್ದಾಗಲೀ, ಸಂಧ್ಯಾ ಟ್ರೇಡರ‍್ಸ್‌ನ ರಾಜೇಶ್ ಪೈಯದ್ದಾಗಲೀ, ಲಕ್ಷ್ಮೀ ಇಂಡಸ್ಟ್ರೀಸ್‌ನ ಮೋಹನ್ ಕುಮಾರರದ್ದಾಗಲೀ, ನಿಮ್ಮ ಸ್ಪರ್ಧಿ ರಕ್ಷಿತ್ ಶಿವರಾಮರದ್ದಾಗಲೀ, ಯಾರದ್ದೇ ತಪ್ಪುಗಳು ಬಂದರೂ ಅವರಿಗೆ ತಲೆ ಭಾಗಿಸದೆ, ನಿಮಗೂ ತಲೆ ಬಾಗದೆ ಪತ್ರಿಕೆಯನ್ನು ಜನರ ಪರವಾಗಿ ನಡೆಸಿಕೊಂಡು ಬರಲಿದ್ದೇವೆ. ಸುದ್ದಿ ಪತ್ರಿಕೆ ಜನಾಭಿಪ್ರಾಯವನ್ನು ನಂಬಿ ಕೆಲಸ ಮಾಡುತ್ತದೆ. ಹೊರತು ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ತಿಳಿಸುತ್ತಾ ನಿಮ್ಮ ಬಳಗಕ್ಕೆ ನಮಗೆ ತೊಂದರೆ ನೀಡದಂತೆ ಆದೇಶ ನೀಡಬೇಕೆಂದು ಬಯಸುತ್ತೇನೆ. ಅದರೊಂದಿಗೆ ನಿಮ್ಮ ಪತ್ರಿಕೆಯ ಸಂಪಾದಕರಾದ ಕುಲಾಲ್‌ರವರು ಈ ಸಲದ ಪತ್ರಿಕೆಯಲ್ಲಿ ನಿಷ್ಪಕ್ಷಪಾತವಾಗಿ ವರದಿ ಮಾಡಿ ಬಂಗೇರರ ವರದಿಯನ್ನು ಹಾಕಿ ಅಭಿನಂದನೀಯವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಲು ಇಚ್ಚಿಸುತ್ತೇನೆ. ನಮ್ಮ ಪತ್ರಿಕೆ ನಿಂತರೂ, ನಿಲ್ಲದಿದ್ದರೂ ಅವರ ಕೆಲಸಕ್ಕೆ ಮೆಚ್ಚುಗೆಯನ್ನು ಸೂಚಿಸಿ, ಅವರಿಗೆ ತೊಂದರೆ ಕೊಡದೆ ರಕ್ಷಣೆ ನೀಡಬೇಕೆಂದು ನಿಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ.
ಓದುಗರಲ್ಲಿ ವಿನಂತಿ : ನಿಮ್ಮ ಬೆಂಬಲವಿದ್ದರೆ ಪತ್ರಿಕೆ ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳುತ್ತಾ, ನಿಮ್ಮ ಬೆಂಬಲವಿರುವವರೆಗೆ ಪತ್ರಿಕೆ ನಡೆಯಲಿದೆ. ಅದನ್ನು ಕಳೆದುಕೊಂಡ ದಿವಸ ಪತ್ರಿಕೆಯನ್ನು ನಿಲ್ಲಿಸಲಿದ್ದೇವೆ ಎಂದು ತಿಳಿಸಲು ಇಚ್ಚಿಸುತ್ತೇನೆ.
-ಸಂ

LEAVE A REPLY

Please enter your comment!
Please enter your name here