- ಬಂಗೇರರ ಮತ್ತು ನಿಮ್ಮ ಅವಧಿಯ ಕಾಮಗಾರಿಗಳನ್ನು ಪರಿಶೀಲಿಸಿರಿ.
- ಕಳಪೆ ಕಾಮಗಾರಿಗಳನ್ನು ಬೆಳಕಿಗೆ ತನ್ನಿ ಕಳಪೆಗೆ ಕಾರಣರಾದವರ ಫೋಟೋ, ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಿ
- ಇಲ್ಲದಿದ್ದರೆ ಈಗಿನ ಕಾಮಗಾರಿ ಒಂದು ವರ್ಷ ಬಾಳಿಕೆ ಬರಲಾರದು


ಬ್ರಿಟೀಷರ ಕಾಲದ ರಸ್ತೆಗಳು ಇಂದಿಗೂ ಕೆಲವು ಹಾಳಾಗದೆ ಉಳಿದಿವೆ. ನಮಲ್ಲಿಯೂ ಹಳೇಯ ಕಾಲದ ರಸ್ತೆಗಳಿವೆ. ಕೇರಳದಲ್ಲಿಯೂ ನಮ್ಮಲ್ಲಿ ಇದ್ದಂತೆ ಮಳೆ ಇದೆ. ಆದರೆ ರಸ್ತೆಗಳು ಇಲ್ಲಿಗಿಂತ ಹೆಚ್ಚು ಸಮಯ ಬಾಳಿಕೆ ಬರುತ್ತಿವೆ, ಚೆನ್ನಾಗಿವೆ. ಆಧುನಿಕ ತಂತ್ರಜ್ಞಾನ ಬಂದಿರುವುದರಿಂದ ನಮ್ಮ ರಸ್ತೆಗಳ ಬಾಳಿಕೆ ಜಾಸ್ತಿಯಾಗಬೇಕಿತ್ತು. ಆದರೆ ಆ ತಂತ್ರಜ್ಞಾನ ಕಳಪೆ ಕಾಮಗಾರಿಯನ್ನು ಮಾಡಿ ಒಳ್ಳೆಯ ಕಾಮಗಾರಿಯೆಂದು ತೋರಿಸಿ ಕೆಲವರು ಹಣ ದೋಚುವುದಕ್ಕೆ, ಬಿಲ್ಲು ಮಾಡುವುದಕ್ಕೆ ಸೀಮಿತವಾಗಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಪರಿಹಾರ ಒಂದೇ ಆಗಿದೆ. ಯಾವುದೇ ಪಕ್ಷ, ಯಾವುದೇ ವ್ಯಕ್ತಿ ಆಡಳಿತಕ್ಕೆ ಬರಲಿ. ಶಾಸಕರು, ಜನಪ್ರತಿನಿಧಿ, ಕಾಂಟ್ರಾಕ್ಟರ್, ಇಂಜಿನಿಯರ್ ಯಾರೇ ಆಗಿರಲಿ ಊರಿನವರು ತಮ್ಮ ತಮ್ಮ ಊರಿನಲ್ಲಿ ರಸ್ತೆಗಳಾದಾಗ ರಾಜಕೀಯ ಬಿಟ್ಟು ಮತದಾರ ರಾಜರುಗಳಾಗಿ ತಮ್ಮ ತಮ್ಮ ರಸ್ತೆಗಳ ಕಡೆ ಕೇರಳದಲ್ಲಿ ಆದಂತೆ ಗಮನ ಕೊಡಬೇಕು. ಉತ್ತಮ ಕೆಲಸವಾಗಿದ್ದರೆ ಬೆಂಬಲಿಸಿ, ಪ್ರೋತ್ಸಾಹಿಸಬೇಕು. ರಸ್ತೆ ಕಾಮಗಾರಿ ಕಳಪೆಯಾಗಿದ್ದರೆ ಜನತೆ ಪಕ್ಷ, ವ್ಯಕ್ತಿ ಎಂದು ನೋಡದೆ ಅದನ್ನು ಗುರುತಿಸಿ ವಿರೋಧಿಸಬೇಕು.
ಅಂದು ರಸ್ತೆ ಕಾಮಗಾರಿಗೆ ಕಾರಣರಾದವರಿಗೆ ಬ್ಯಾನರ್, ಫೋಟೋ ಹಾಕಿ ಅಭಿನಂದನೆ ಸಲ್ಲಿಸಿದ್ದು ಸರಿಯೇ ಇದೆ. ಆದರೆ ಅದು ಕಳಪೆ ಕಾಮಗಾರಿಯಾದರೆ ಅಂದಿನ ಆ ಫೋಟೋ, ಬ್ಯಾನರ್‌ಗಳನ್ನು ರಸ್ತೆಯಲ್ಲಿ ಹಾಕಿ ಪ್ರತಿಭಟನೆ ನಡೆಸಬೇಕು, ಬಹಿಷ್ಕರಿಸಬೇಕು. ಇಲ್ಲದಿದ್ದರೆ ಈಗಿನ ಕಾಮಗಾರಿ ಒಂದು ವರ್ಷ ಬಾಳಿಕೆ ಬರಲಾರದು. ಆ ಮಾಹಿತಿಯನ್ನು ಆರ್‌ಟಿಐನಲ್ಲಿ ಗ್ರಾಮಸ್ಥರು ಪಡೆಯಬಹುದು. ಜನರು ರಾಜರುಗಳಾಗಬೇಕು. ಜನಪ್ರತಿನಿಧಿ, ಶಾಸಕರು, ಅಧಿಕಾರಿಗಳು ನಮ್ಮ ಜನ ಸೇವಕರಾಗಬೇಕು. ಇಲ್ಲದಿದ್ದರೆ ಏನಾಗಬಹುದು? ಈಗಿನ ಪರಿಸ್ಥಿತಿಯೇ ಮುಂದುವರಿಯಬಹುದು. -ಡಾ. ಶಿವಾನಂದ ಯು.ಪಿ.

ಕೇರಳದಲ್ಲಿ ಜನಜಾಗೃತಿ, ಆಡಳಿತದ ಜಾಗೃತಿ ಮತ್ತು ಜವಾಬ್ದಾರಿ ಇದೆ: ಕಾಮಗಾರಿಯಲ್ಲಿ ಕಮಿಷನ್ ವ್ಯವಹಾರ ಕಡಿಮೆ – ಕಳಪೆ ಕಾಮಗಾರಿಯೂ ಕಡಿಮೆ:ರಸ್ತೆಗಳು ಮರಣ ಗುಂಡಿಗಳು ಆಗುವುದಿಲ್ಲ-ಬಾಳಿಕೆ ಬರುತ್ತವೆ.
ಕರ್ನಾಟಕಕ್ಕೆ ಹೋಲಿಸಿದರೆ ಕೇರಳ ರಾಜ್ಯದ ರಸ್ತೆಗಳು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಅಲ್ಲಿನವರು ಹೇಳುವ ಪ್ರಕಾರ ಜನ ಜಾಗೃತಿ, ಆಡಳಿತದ ಜಾಗೃತಿ ಮತ್ತು ಜವಾಬ್ದಾರಿ ಇದಕ್ಕೆ ಕಾರಣ. ಪ್ರತಿ ರಸ್ತೆ ಕಾಮಗಾರಿ ಆಗುವಾಗಲೂ ಅನುದಾನ ಯಾವ ವ್ಯಾಪ್ತಿಗೆ ಬರುತ್ತದೆಯೋ ಆ ಮಟ್ಟದಲ್ಲಿ ಅದಕ್ಕೊಂದು ಮೋನಿಟರಿಂಗ್ ಕಮಿಟಿ ಇರುತ್ತದೆ. ಪಂಚಾಯತ್ ಮಟ್ಟ, ಬ್ಲಾಕ್ ಪಂಚಾಯತ್ ಮಟ್ಟ, ಜಿಲ್ಲಾ ಪಂಚಾಯತ್, ಪಿಡಬ್ಲ್ಯೂಡಿ ರಸ್ತೆಗಳು … ಹೀಗೆ ಕಮಿಟಿಗಳಿದ್ದು ಜವಾಬ್ದಾರಿಯುತ ಇಲಾಖಾ ಮುಖ್ಯಸ್ಥರು ಆ ಕಮಿಟಿಗಳ ನೇತೃತ್ವ ವಹಿಸುತ್ತಾರೆ. ಸ್ಥಳೀಯ ಮಟ್ಟದ ಜನಪ್ರತಿನಿಧಿಗಳೂ ಸಮಿತಿಯಲ್ಲಿರುತ್ತಾರೆ. ಈ ಸಮಿತಿ ಕಾಮಗಾರಿಗಳ ಸಂದರ್ಭದಲ್ಲಿ ಮೇಲ್ವಿಚಾರಣೆ ಮಾಡುತ್ತದೆ.
ಮಾತ್ರವಲ್ಲ ಬಿಲ್ ಮಂಜೂರಾಗುವ ಸಂದರ್ಭಗಳಲ್ಲೂ ಅವರ ಸಹಿ ಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಆಸಕ್ತಿಯಿಂದ ಸ್ಥಳೀಯವಾಗಿ ಮೇಲುಸ್ತುವಾರಿ ಸಮಿತಿಯೊಂದನ್ನು ರಚಿಸುವ ಕ್ರಮವೂ ಇದೆ. ಈ ಸಮಿತಿಯೂ ಕಾಮಗಾರಿಗಳ ಬಗ್ಗೆ ನಿಗಾ ವಹಿಸುತ್ತದೆ. ಇನ್ನು ಕೆಲವರ ಪ್ರಕಾರ ಕೇರಳದಲ್ಲಿ ಕಾಮಗಾರಿಗಳಲ್ಲಿ ಕಮಿಷನ್ ವ್ಯವಹಾರ ತೀರಾ ಕಡಿಮೆ. ಜನಪ್ರತಿನಿಧಿಗಳ, ಇಂಜಿನಿಯರ್‌ಗಳ, ಕಾಂಟ್ರಾಕ್ಟರ್‌ಗಳ ಜೇಬಿಗೆ ಭ್ರಷ್ಟಾಚಾರದ ಹಣ ಬೀಳುವುದಿಲ್ಲ. ಹಾಗಾಗಿ ಪೂರ್ತಿ ಹಣ ಕಾಮಗಾರಿಗಳಿಗೇ ಬಳಕೆಯಾಗುತ್ತದೆ.
ಕೇರಳದಲ್ಲಿ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಬಿಟ್ಟುಕೊಟ್ಟ ಮೇಲೆ ಕಾಂಟ್ರಾಕ್ಟರ್ ೫ ವರ್ಷ ಅದನ್ನು ಮೆಂಟೈನ್ ಮಾಡಬೇಕಾಗಿದೆ. ಅದಕ್ಕೆ ಟೆಂಡರ್‌ನಲ್ಲಿ ಹಣವನ್ನು ಇರಿಸಿರುತ್ತಾರೆ. ರಸ್ತೆಯಲ್ಲಿ ನೀರು ನಿಲ್ಲದಂತೆ ಚರಂಡಿಯಲ್ಲಿ ಹರಿದುಹೋಗುವಂತೆ ಯಾವುದೇ ರಸ್ತೆಯಲ್ಲಿ ಯಾವುದೇ ಕ್ರ್ಯಾಕ್ ಆಗದಂತೆ, ಗುಂಡಿಗಳು ಆಗದಂತೆ ನೋಡಿಕೊಳ್ಳಬೇಕು. ರಸ್ತೆಯ ಬದಿ ಮತ್ತು ರಸ್ತೆಯ ಬದಿಯಲ್ಲಿರುವ ಮರದ ಕೊಂಬೆಗಳನ್ನು ರಸ್ತೆಗೆ ಬೀಳದಂತೆ, ಲೈನ್‌ಗಳನ್ನು ರಿಫ್ಲೆಕ್ಟ್‌ಗಳನ್ನು ಸರಿ ಇರುವಂತೆ ನೋಡಿಕೊಳ್ಳಬೇಕು. ಹೀಗೆ ೫ ವರ್ಷ ಮೆಂಟೈನ್ ಮಾಡದಿದ್ದರೆ ಕಾಂಟ್ರಾಕ್ಟರ್ ಡೆಪೋಸಿಟ್ ಆಗಿ ಇಟ್ಟಿರುವ ಹಣವನ್ನು ಅವರಿಗೆ ಸರಕಾರ ನೀಡುವುದಿಲ್ಲ. ಮತ್ತು ಅವರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುತ್ತಾರೆ. ನಂತರ ರಸ್ತೆಯನ್ನು ಮೆಂಟೈನೆನ್ಸ್‌ಗೆ ಮತ್ತು ಮರು ಡಾಮರೀಕರಣಕ್ಕೆ ಟೆಂಡರ್‌ನಲ್ಲಿ ನೀಡುತ್ತಾರೆ.
ಇಲ್ಲಿ ಕರ್ನಾಟದಲ್ಲಿಯೂ (ಬೆಳ್ತಂಗಡಿಯಲ್ಲಿ ) ರಸ್ತೆ ಕಾಮಗಾರಿಯಾದಮೇಲೆ ಮೆಂಟೈನೆನ್ಸ್ ಇದೆ. ಆದರೆ ರಸ್ತೆಯೇ ಕಳಪೆಯಾದರೆ ಮೆಂಟೈನೆನ್ಸ್ ಅದಕ್ಕಿಂತ ಕಳಪೆಯಾಗಿರುತ್ತದೆ. ಇಲ್ಲಿ ರಸ್ತೆಗಳನ್ನು ಬಿಜೆಪಿ- ಕಾಂಗ್ರೆಸ್ ರಸ್ತೆ, ಶಾಸಕರ – ವಿರೋಧ ಪಕ್ಷಗಳ ರಸ್ತೆ ಎಂದು ತಿಳಿದು ಆ ರೀತಿಯ ರಾಜಕೀಯ ಮಾಡುತ್ತಾರೆಯೇ ಹೊರತು ಜನರು ಅದು ತಮ್ಮ ರಸ್ತೆ ಎಂದು ತಿಳಿಯುವುದಿಲ್ಲ. ಇದರಿಂದ ಇಲ್ಲಿ ಕಳೆಪೆ ರಸ್ತೆಗಳದ್ದೇ, ಭ್ರಷ್ಟಾಚಾರದ್ದೇ ಸಾಮ್ರಾಜ್ಯ ವಿಜ್ರಂಬಿಸುತ್ತದೆ. -ಸಂಗ್ರಹ