ಬೆಳ್ತಂಗಡಿ: ಮರಾಟಿ ನಾಯ್ಕ ಸಮುದಾಯದ ಜನತೆ ಶ್ರಮಜೀವಿಗಳಾಗಿದ್ದು ಕೃಷಿಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಕೃಷಿ ಉಳಿದರಷ್ಟೇ ಜನತೆ ಬದುಕಲು ಸಾಧ್ಯ. ಅದೇ ರೀತಿ ಸಮುದಾಯದ ಜನರು ಮರಾಟಿ ಭಾಷೆ, ನಾಡು, ಸಂಸ್ಕ್ರತಿ ಉಳಿಸಿ, ಬೆಳೆಸುವ ಕಾರ್ಯವನ್ನು ನಡೆಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಹೇಳಿದರು.
ಅವರು ಮಾ.27 ರಂದು ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಲಾಯಿಲಾ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ, ಸನ್ಮಾನ, ಗುಮ್ಮಟೆ ಪದ ಕುಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈಗಿನ ಕಾಲದಲ್ಲಿ ಎಷ್ಟು ವಿದ್ಯೆ ಗಳಿಸಿದರೂ ಕೃಷಿ ಮಾಹಿತಿ ಇಲ್ಲದಿದ್ದರೆ ಮುಂದಿನ ಜೀವನ ಕಷ್ಟ ಸಾಧ್ಯ. ಮಕ್ಕಳಿಗೆ ಎಳವೆಯಿಂದಲೇ ಸಂಸ್ಕಾರ ತುಂಬುವ ಕಾರ್ಯ ನಡೆಸಬೇಕು. ಆಚಾರ, ವಿಚಾರ, ಉಡುಗೆ, ತೊಡುಗೆಗಳಲ್ಲಿ ನಮ್ಮ ತನವನ್ನು ಬಿಡಬಾರದು. ಇತ್ತೀಚಿನ ದಿನಗಳಲ್ಲಿ ಜನತೆ ಸ್ವಾರ್ಥಿಗಳಾಗುತ್ತಿದ್ದಾರೆ. ಕಾಡು ಪ್ರಾಣಿಗಳ ಜಾಗದಲ್ಲಿ ನಾವು ಇದ್ದೇವೆ ಎಂಬುದನ್ನು ಮರೆಯಬಾರದು. ನಾವು ಪರಿಸರ ಉಳಿಸಿದರೆ ಇತರ ಜೀವಿಗಳೂ ಆಶ್ರಯ ಪಡೆಯಲು ಸಾಧ್ಯ. ಅವುಗಳು ಉಳಿದರಷ್ಟೇ ಮನುಷ್ಯನಿಗೆ ಉಳಿಗಾಲ ಎಂಬ ಅರಿವು ಮೂಡಿಸುವುದು ಅಗತ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ವ್ಯವಸ್ಥಾಪಕ ನಿರ್ದೇಶಕ ಡಾ. ಪದ್ಮಯ್ಯ ನಾಯ್ಕ್, ಗುಮ್ಮಟೆ ನಮ್ಮ ಸಮುದಾಯದ ಸಂಸ್ಕ್ರತಿಯ ಭಾಗವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಸಮುದಾಯ ಈ ಹಿಂದೆ ಕೂಡು ಕಟ್ಟು ಎಂಬ ವಿಚಾರದ ಮೂಲಕ ಬೆಸೆದುಕೊಂಡಿತ್ತು. ಕ್ರಮೇಣ ಅದು ಬದಲಾಗಿದೆ. ತಾಲೂಕು ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಸಂಘಟನೆ ಕಾರ್ಯ ನಡೆಸಿ ಈ ಸಂಘದ ಮೂಲಕ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯತೆ ಇದೆ. ಈ ಮೂಲಕ ಸಂಘಟನೆ ಬಲಗೊಳ್ಳಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಅಡ್ಯನಡ್ಕ ಶ್ರೀ ಮಹಮ್ಮಾಯಿ ಮರಾಟಿ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ್ ಮಾತನಾಡಿ, ಸಂಘಟನೆ ನಡೆಸುವ ವೇಳೆ ಹಲವು ರೀತಿಯ ಸವಾಲುಗಳು ಎದುರಾಗುತ್ತವೆ. ಟೀಕೆಗಳಿಗೆ ಕಿವಿಗೊಡದೆ, ಅನಗತ್ಯ ಮಾತನಾಡುವವರ ಕುರಿತು ಗಂಭೀರವಾಗಿ ನೋಡದೆ, ಉತ್ತಮ ವಿಚಾರ ಧಾರೆಗಳು ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಸಂಘ ಬೆಳೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ ಕೇಳ್ತಡ್ಕ, ಸಂಘ ಈಗಾಗಲೇ ಐದು ವರ್ಷಗಳಿಂದ ತಾಲೂಕಿನಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದೆ. ಮುಂದೆಯೂ ಸಮುದಾಯಕ್ಕಾಗಿ ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲು ತಯಾರಿ ನಡೆಸಲಾಗಿದೆ.
ಸಂಘದ ಗೌರವ ಸಲಹೆಗಾರ ಸಂತೋಷ್ ಕುಮಾರ್ ಲಾಯಿಲಾ ಮಾತನಾಡಿದರು.
ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ.ಪದವಿ ಪಡೆದ ಡಾ. ಶರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿ ಸಂಕೇತ್ ಜಿ.ಕೆ. ಅವರನ್ನು ಗೌರವಿಸಲಾಯಿತು. ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಕಾರ್ಯದರ್ಶಿ ತಾರನಾಥ ನಾಯ್ಕ್ ಮಂಡಿಸಿದರು. ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ್ ಬಡಕೋಡಿ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಸ್ವಾಗತಿಸಿ, ಸಮಿತಿಯ ಪವಿತ್ರಾ ಲೋಕೇಶ್ ವಂದಿಸಿದರು. ಉಪಾಧ್ಯಕ್ಷ ವಸಂತ ನಾಯ್ಕ್ ನಿರೂಪಿಸಿದರು.