ಉರುವಾಲು: ಉರುವಾಲು ಪದವಿನಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಎರಡನೇ ವರ್ಷದ ಜಾತ್ರೋತ್ಸವ ಮತ್ತು ಗೋಂದಲ ಪೂಜೆ ವಿಜೃಂಭಣೆಯಿಂದ ನಡೆಯಿತು.
ಫೆ.20 ರಂದು ಹಸಿರು ಹೊರೆಕಾಣಿಕೆಯ ಮೂಲಕ ಕ್ಷೇತ್ರಕ್ಕೆ ಭಕ್ತರು ವಿವಿಧ ಧಾನ್ಯ,ತರಕಾರಿಗಳನ್ನು ನೀಡಿ ಸೇವೆ ಸಲ್ಲಿಸಿದ್ರು. ಅದೇ ದಿನ ಮಧ್ಯಾಹ್ನ ಮತ್ತು ರಾತ್ರಿ ವೈಭವದ ಮಹಾ ಪೂಜೆ ಪ್ರಸಾದ ವಿತರಣೆ ನಡೆಯಿತು.
ವೈಭವದೊಂದಿಗೆ ನೆರವೇರಿದ ಗೋಂದಲ ಪೂಜೆ:
ಫೆ.21ರಂದು ಸಂಜೆ ಸಂಪೂರ್ಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೋಂದಲ ಪೂಜೆ ನೇರವೇರಿತು. ಭಜನಾ ಕಾರ್ಯಕ್ರಮದ ಜೊತೆ ಮಹಾಪೂಜೆ, ಗೋಂದಲ ಪೂಜೆ ನಡೆದು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳದ ಕೇಪು ಗ್ರಾಮದ ಶೀನನಾಯ್ಕರವರು ಧಾರ್ಮಿಕ ಉಪನ್ಯಾಸ ನೀಡಿ, ಧರ್ಮಕ್ಕೆ ಆದಿಯಿಲ್ಲ, ಅಂತ್ಯವಿಲ್ಲ ಅದು ಸನಾತನ. ಇಡೀ ವಿಶ್ವದಲ್ಲಿ ಧರ್ಮಕ್ಕಿದ್ದಷ್ಟು ಪ್ರಾಧಾನ್ಯತೆ ಬೇರೆ ಯಾವುದಕ್ಕೂ ಇಲ್ಲ. ಧರ್ಮದ ಬಗ್ಗೆ ಶ್ರದ್ಧೆ, ನಿಷ್ಠೆ, ಗೌರವವಿರಬೇಕು. ಮಹಾಮ್ಮಾಯಿ ಕ್ಷೇತ್ರ ಒಂದು ಧರ್ಮ ಕ್ಷೇತ್ರವಾಗಿದೆ. ನಮ್ಮ ಭೂಮಿಯಲ್ಲಿ ದೈವ ದೇವರು ಅವತರಿಸಿದ್ದು ಸಜ್ಜನರ ರಕ್ಷಣೆಗಾಗಿ. ದುಷ್ಟರ ಶಿಕ್ಷೆಗಾಗಿಯಾಗಿದೆ. ನಮ್ಮ ಆಚಾರ ವಿಚಾರ ಸಂಪ್ರದಾಯಗಳು ಹೀಗೆ ಇರಬೇಕೆಂಬ ಬರವಣಿಗೆಯಿಲ್ಲ,ಬದಲಾಗಿ ಹಿರಿಯರಿಂದ ಬಳುವಳಿಯಾಗಿ ಬಂದಿದ್ದಾಗಿದೆ. ಮಹಮ್ಮಾಯಿಯ ಸಾಕ್ಷಾತ್ಕಾರ, ಭೈರವನ ಆರಾಧನೆ ನಮ್ಮನ್ನು ಸದಾ ರಕ್ಷಿಸುತ್ತದೆ ಎಂದರು.
ಮಹಮ್ಮಾಯಿ ಕ್ಷೇತ್ರದ ಅಧ್ಯಕ್ಷ ಲಿಂಗಪ್ಪ ನಾಯ್ಕ ಮಾತನಾಡಿ, ಅರಣ್ಯ ಇಲಾಖೆಯವರು ತಾಯಿಯ ಗುಡಿಯನ್ನು ತೆಗೆದುಕೊಂಡು ಹೋದ ನಂತರ ಕ್ಷೇತ್ರ ಪ್ರಚಾರವಾಯಿತು. ನಂತರ ನಾವು ಮಹಮ್ಮಾಯಿ ತಾಯಿ ಮತ್ತು ಬೈರವನನ್ನು ಇಲ್ಲಿ ಪ್ರತಿಷ್ಠಾಪಿಸಿ ಜಾತ್ರಾಮಹೋತ್ಸವ, ಗೋಂದಲ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ತಾಯಿಯ ಅನುಗ್ರಹದಿಂದ ಕ್ಷೇತ್ರದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತ ಇದೆ. ಇದರ ಬೆಳವಣಿಗೆಗೆ ಶಾಸಕ ಹರೀಶ್ ಪೂಂಜರ ನೆರವು ಹೆಚ್ಚು ಸಿಕ್ಕಿದೆ ಎಂದರು.
ದೇವಸ್ಥಾನದ ಆವರಣದಲ್ಲಿ ಹೈಮಾಸ್ಟ್ ದೀಪ ಉದ್ಘಾಟಿಸಿದ ಶಾಸಕ ಪೂಂಜ
ಉರುವಾಲು ಮಹಮ್ಮಾಯಿ ಕ್ಷೇತ್ರದ ಜಾತ್ರೋತ್ಸವದಲ್ಲಿ ಭಾಗಿಯಾದ ಶಾಸಕ ಹರೀಶ್ ಪೂಂಜ, ಕ್ಷೇತ್ರದ ಆಡಳಿತ ಸಮಿತಿಯ ಕೋರಿಕೆಯ ಮೇರೆಗೆ ಕ್ಷೇತ್ರದ ಆವರಣದಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ, ಸೀತಾರಾಮ ಆಳ್ವ ಕೊರಿಂಜ,ಸಂತೋಷ ನಾಯ್ಕ ಅತ್ತಾಜೆ, ಜಾತ್ರೋತ್ಸವ ಸಮಿತಿಯ ನಾರಾಯಣ ನಾಯ್ಕ ಅಣಬೆಕೋಡಿ, ಸೀತರಾಮ ನಾಯ್ಕ ಅರ್ಬಿ,ಎಸ್ ಕೆ ಡಿ ಆರ್ ಡಿ ಪಿಯ ಪದಾಧಿಕಾರಿಗಳು, ಸದಸ್ಯರು,ಮರಾಠಿ ಸಂಘದ ಸದಸ್ಯರು, ಜಾತ್ರೋತ್ಸವ ಸಮಿತಿ ಹಾಗೂ ಇನ್ನಿತರ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.