ವೇಣೂರು: ಸೀಮೆಯ ಪಟ್ಟದ ದೇವರಾದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವಕ್ಕೆ ರಾಜ್ಯ ವ್ಯಾಪ್ತಿಯಿಂದ ಭಕ್ತರು ಆಗಮಿಸಲಿದ್ದು ಎಲ್ಲಾ ಸಿದ್ದತೆಗಳು ನಡೆಯುತ್ತಿದೆ.
ಬ್ರಹ್ಮಕಲಶೋತ್ಸವದಲ್ಲಿ ಸುಮಾರು 2.50 ಲಕ್ಷ ಭಕ್ತರು ಭಾಗವಹಿಸುವ ಸಾಧ್ಯತೆಯಿದೆ. ದೇವಸ್ಥಾನ ಸಂಪೂರ್ಣ ಶಿಲಾಮಯವಾಗಿದ್ದು ಸುತ್ತುಪೌಳಿಗೆ ಸಂಪೂರ್ಣ ತಾಮ್ರದ ಹೊದಿಕೆ ಹಾಸಿದ ಜಿಲ್ಲೆಯ ಮೊದಲ ದೇವಸ್ಥಾನವಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಫೆ.17 ರಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೈಸೂರು ದಸರಾ ಉತ್ಸವದಂತೆ ಸುಮಾರು 22 ಕಿ.ಮೀ ದೀಪಾಲಂಕಾರ ಮಾಡಲಾಗಿದೆ. ಸುಮಾರು 80ಕಿ.ಮೀ ವರೆಗೆ ಅಲಂಕಾರ ಮಾಡಲಾಗಿದೆ. ಯಕ್ಷ ವೇದಿಕೆಯಲ್ಲಿ ಸುಮಾರು 10 ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಪೂರ್ವಸಿದ್ದತೆಗಳು ನಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಯನ್.ಪುರುಷೋತ್ತಮ ರಾವ್, ಬ್ರಹ್ಮಕಲಶೋತ್ಸವದ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಬಿಇ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಜ್ಞನಾರಾಯಣ ಭಟ್, ವೇಣೂರು ಗ್ರಾ.ಪಂ ಅಧ್ಯಕ್ಷ ನೇಮಯ್ಯ ಕುಲಾಲ್ ಉಪಸ್ಥಿತರಿದ್ದರು.