ಬೆಳ್ತಂಗಡಿ : ಗ್ರಾಮೀಣ ಪ್ರತಿಭೆಗಳಿಂದಲೇ ಮೂಡಿಬಂದ ಕನ್ನಡ ಚಲನಚಿತ್ರ, ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ಪೋಣಿಸಲಾದ “ಮಗಳು ” ಕನ್ನಡ ಚಲನಚಿತ್ರ ಫೆ.17 ರಂದು ರಾಜ್ಯದ್ಯಾಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತೋಮಸ್ ಎಂ. ಎಂ. ತಿಳಿಸಿದರು.
ಇವತ್ತಿನ ಕಾಲಘಟ್ಟದಲ್ಲಿ ಮದ್ಯಪಾನ ಜೀವನದ ಅಂಗವಾಗಿ ಬಿಟ್ಟಿದೆ. ಮದ್ಯಪಾನ ಎಂಬ ಒಂದು ಕೆಟ್ಟ ಚಟದಿಂದ ಒಂದು ಕುಟುಂಬ ಹೇಗೆ ಬೀದಿಗೆ ಬೀಳುತ್ತದೆ. ಓರ್ವ ಕುಡುಕತಂದೆಯ ಜೀವನವನ್ನು ಮಗಳು ಯಾವ ರೀತಿ ಪರಿವರ್ತಿಸುತ್ತಾಳೆ, ಕುಡುಕನ ಕತ್ತಲ ಜೀವನಕ್ಕೆ ಮಗಳು ಯಾವ ರೀತಿ ಬೆಳಕು ಆಗುತ್ತಾಳೆ ಅನ್ನುವುದೇ ಇದರ ಕಥೆ.
ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್ ನಡಿ ನಿರ್ಮಾಣ ಆಗಿರುವ ಈ ಚಿತ್ರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಮಕ್ಕಳ ಭಾವನೆಗಳನ್ನು, ಪೋಷಕರ ಸಮಸ್ಯೆಗಳನ್ನು ಬಹಳಷ್ಟು ಹತ್ತಿರದಿಂದ ಅರ್ಥೈಸಿಕೊಂಡ ತೋಮಸ್ ಅವರು ಅವರಿಗೆ ಸಮಾಜಕ್ಕೆ ಒಂದು ಭಾಂದವ್ಯದ ಸಂದೇಶ ಸಾರಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಪೋಣಿಸಲಾಗಿದೆ, ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ನಿರ್ಮಿಸಲಾದ ಚಿತ್ರ ಇದೀಗ ಎಲ್ಲರ ಗಮನ ಸೆಳೆದಿದೆ. ಕುಟುಂಬದ ಜತೆ ಒಟ್ಟಿಗೆ ಕೂತುಕೊಂಡು ನೋಡಬಹುದಾದ ಅದ್ಭುತ ಚಿತ್ರ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಖ್ಯಾತ ತುಳುಚಲನಚಿತ್ರ ನಟ ನವೀನ್ ಡಿ ಪಡೀಲ್ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪಕ್ಕಾ ಹಳ್ಳಿ ಕಲಾವಿದವರು ಎನ್ನುವುದೇ ವಿಶೇಷ. ಚಿತ್ರದ ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್ ಎಂ.ಎಂ, ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್, ಸುಂದರ ಹೆಗ್ಡೆ ವೇಣೂರು, ಪಿ. ಧರಣೇಂದ್ರ ಕುಮಾರ್ ಹೊಸಂಗಡಿ , ಶ್ರವಣ ಕುಮಾರಿ, ಆರ್ಪಿತಾ ಕೋಟ್ಯಾನ್ , ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ, ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮುಂತಾದವರು ನಟಿಸಿದ್ದಾರೆ.
ಚಿತ್ರದ ಸಹನಿರ್ಮಾಪಕರಾಗಿ ಬಿಟಲ್ ಮ್ಯಾಥ್ಯೂ, ಮಂಗಳೂರು ಹಾಗೂ ಅರುಣ್ ಬೆಳ್ತಂಗಡಿ ಸಹಕರಿಸಿದ್ದರೆ ಸಹ ನಿರ್ದೇಶಕರಾಗಿ ಮಹಾಲಕ್ಷ್ಮೀ ಪೆರಾಡಿ ಮತ್ತು ಸಂದೇಶ ಬಡಕೋಡಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ಶಶಿಧರ ದೇವಾಡಿಗ ಉಡುಪಿ, ಸಂಗೀತಾ ಗುರುರಾಜ್ ಎಂ.ಬಿ., ನೃತ್ಯ ಸಂಯೋಜನೆ ಶ್ರವಣ ಕುಮಾರಿ ಮಾಡಿದ್ದರೆ ಸಂಕಲಕ ಹರೀಶ್ ಕೊಡ್ವಾಡಿ ಮತ್ತು ಸುಶಾಂತ್ ಪೂಜಾರಿ – ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಮನಸೆಳೆಯುವ ಮೂರು ಹಾಡುಗಳಿದ್ದು, ತೋಮಸ್ ಎಂ.ಎಂ. ಮತ್ತು ಸೀತಾ ಆರ್. ಶೇಟ್ ರಚಿಸಿದ್ದಾರೆ. ಸಂಗೀತಾ ಬಾಲಚಂದ್ರ ಮತ್ತು ಗುರುರಾಜ್ ಎಂ.ಬಿ ಧ್ವನಿ ನೀಡಿದ್ದಾರೆ. ಪೋಸ್ಟರ್ ಡಿಸೈನ್ ದಿನೇಶ್ ಗ್ಲೋಸಿಂಗ್ ಡಿಜಿಟಲ್ ಮೂಡಬಿದಿರೆ ನಿರ್ವಹಿಸಿದ್ದಾರೆ.