ಬೆಳ್ತಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಫೆ.15 ರಂದು ನವಜೀವನ ಸಮಾವೇಶ 2022-23 ನೇ ಸಾಲಿನ ಮದ್ಯವರ್ಜಿತರ ಕೌಟುಂಬಿಕ ಸಮ್ಮಿಲನ ನಡೆಯಲಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯಿಸ್ ಹೇಳಿದರು.
ಅವರು ಫೆ.11 ರಂದು ಜನಜಾಗೃತಿ ವೇದಿಕೆ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೆರವೇರಿಸಲಿದ್ದಾರೆ. ಹಾಗೂ ವ್ಯಸನಮುಕ್ತರಿಗೆ ಗುರುತಿನ ಚೀಟಿ ವಿತರಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಮಾತೃ ಹೇಮಾವತಿ ವಿ. ಹೆಗ್ಗಡೆಯವರು ಡಾ. ವಿರೂಪಾಕ್ಷ ದೇವರ ಮನೆ ಇವರು ವ್ಯಸನಿಗಳ ಮಕ್ಕಳ ಕುರಿತು ಬರೆದಿರುವ ‘ನಿನಗೆ ನೀನೇ ಗೆಳೆಯ ‘ಪುಸ್ತಕ ಬಿಡುಗಡೆ ಗೊಳಿಸುವರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಾದ್ಯಂತ 4786 ವ್ಯಸನಮುಕ್ತರು ಸಮವಸ್ತ್ರದೊಂದಿಗೆ ಮತ್ತು ಅವರ ಕುಟುಂಬಸ್ಥರು ಭಾಗವಹಿಸಲಿದ್ದಾರೆ ‘ಜನಜಾಗೃತಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ 30 ವರ್ಷಗಳಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಭವಿ ಸಮಾಜಸೇವಕ ಡಾ| ಥೋಮಸ್ ಸ್ಕರಿಯ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವರಾದ ವಿ. ಸುನಿಲ್ ಕುಮಾರ್ ರವರು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವ್ಯಸನಮುಕ್ತರಿಗೆ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿ 4 ಮಂದಿಗೆ ನೀಡಲಾಗುವುದು.
ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ವಿಧಾನ ಸಭಾ ಸದಸ್ಯರುಗಳಾದ ಕೆ. ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ , ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯ ಮೋನಪ್ಪ ಗೌಡ, ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಎಸ್.ಎಸ್. ಯೋಜನೆ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್, ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಮೋಹನ್ ಕೆ., ಸುರೇಂದ್ರ, ಯಶವಂತ್, ತಿಮ್ಮಯ್ಯ ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.