ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ಮಾರ್ಗದರ್ಶನ ಹಾಗೂ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ತಾಂತ್ರಿಕ ವಿಧಿವಿಧಾನಗಳೊಂದಿಗೆ ಜ. 14 ಮಕರ ಸಂಕ್ರಮಣದಂದು ಧ್ವಜಾರೋಹಣ ಹಾಗೂ ಭಂಡಾರ ಏರುವುದರಿಂದ ಮೊದಲ್ಗೊಂಡು ಜ.23 ರಂದು ಕಲಶಾಭಿಷೇಕ ಹಾಗೂ ಸಂಪ್ರೋಕ್ಷಣೆಯೊಂದಿಗೆ ವಿಧ್ಯುಕ್ತವಾಗಿ ನಡೆದು ಸಂಭ್ರಮದಿಂದ ಸಂಪನ್ನಗೊಂಡಿತು. ಜ. 15 ರಂದು ಬದಿಮೇಲೆ ಉಳ್ಳಾಲ್ತಿ, ಪೊಸಲ್ತಾಯಿ , ಕುಮಾರಸ್ವಾಮಿ ದೈವಗಳಿಗೆ ನೇಮ,ಜ. 16 ರಂದು ಬದಿಮೇಲೆ ನೆತ್ತರ್ ಮುಗುಳಿ ದೈವದ ನೇಮ ನಡೆದು ಭಂಡಾರ ಇಳಿದು ದೇವಸ್ಥಾನದಲ್ಲಿ ಶ್ರೀ ಕೃಷ್ಣ ಮಂಟಪ ಉತ್ಸವ,ಜ. 17 ರಂದು ಅಶ್ವತ್ಥಕಟ್ಟೆ ಉತ್ಸವ ,ಜ. 18 ರಂದು ಪುಷ್ಕರಣಿ ಕಟ್ಟೆ ಉತ್ಸವ ನಡೆದು ಜ. 19 ರಂದು ಶ್ರೀ ದೇವರು ಸಕಲ ವಾದ್ಯ ವೈಭವಗಳೊಂದಿಗೆ ಪೇಟೆ ಸವಾರಿಯಲ್ಲಿ ಶ್ರೀ ಜನಾರ್ದನ ಸ್ವಾಮಿ ವೃತ್ತ್ತಕ್ಕೆ ಪ್ರದಕ್ಷಿಣೆ ಬಂದು ಮಧ್ಯೆ ಪುಷ್ಪಾಲಂಕೃತ ಕಟ್ಟೆಯ ಮೇಲೆ ಶ್ರೀ ದೇವರು ಆಸೀನರಾಗಿ ವರ್ತಕ ವೃಂದದವರ ವತಿಯಿಂದ ವಿಶೇಷ ಮಹಾಪೂಜೆ ನಡೆದು ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಜ. 20 ರಂದು ಶ್ರೀ ದೇವರು ಚಂದ್ರಮಂಡಲ ರಥಾರೂಢನಾಗಿ ಭಕ್ತರ ಜಯಘೋಷದೊಂದಿಗೆ ರಥಬೀದಿಯ ಅಶ್ವತ್ಥಕಟ್ಟೆವರೆಗೆ ಸಾಗಿಬಂದು ಅಲ್ಲಿ ಕಟ್ಟೆಪೂಜೆ ನಡೆದು ಮರಳಿ ಸ್ವಸ್ಥಾನಕ್ಕೆ ಬರಲಾಯಿತು. ಜ. 21 ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ವಿವಿಧ ವಾದ್ಯ ವೈಭವಗಳೊಂದಿಗೆ ನಡೆದು ಭಕ್ತರು ಬಟ್ಟಲು ಕಾಣಿಕೆ ಪ್ರಸಾದ ಸ್ವೀಕರಿಸಿದರು. ಮದ್ಯಾಹ್ನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಪಾಕಶಾಲೆಯಲ್ಲಿ ವೇದಮೂರ್ತಿ ರಾಮಚಂದ್ರ ಹೊಳ್ಳರಿಂದ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ಸೇವಾಕರ್ತ ಪ್ರವೀಣಕುಮಾರ್ ಇಂದ್ರ ಅವರಿಗೆ ಶರತ್ ಕೃಷ್ಣ ಪಡುವೆಟ್ನಾಯರು ಶಾಲು ಹೊದಿಸಿ ಪ್ರಸಾದ ನೀಡಿದರು. ಸುಮಾರು 8೦೦೦ಕ್ಕೂ ಹೆಚ್ಚು ಭಕ್ತಾದಿಗಳು ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸಿದರು.
ರಾತ್ರಿ ಶ್ರೀ ಜನಾರ್ದನ ಸ್ವಾಮಿ ಮತ್ತು ಮಂಜುಳೇಶ ದೇವರ ಮಹಾರಥೋತ್ಸವ ಪ್ರಯುಕ್ತ ದೇವಳದ ಹೊರಾಂಗಣದಲ್ಲಿ ಉಡ್ಕು ಸುತ್ತು, ಚೆಂಡೆ, ನಾಗಸ್ವರ, ಬ್ಯಾಂಡ್, ಪಲ್ಲಕ್ಕಿ, ಬೆಳ್ಳಿ ರಥ ಸುತ್ತುಗಳು ನಡೆದು, ನೃತ್ಯ ಭಜನೆ ಮತ್ತು ಶಂಖ ಜಾಗಟೆ ಸುತ್ತುಗಳೊಂದಿಗೆ ದೇವರು ಪ್ರದಕ್ಷಿಣೆ ಬಂದು ಬಳಿಕ ರಥ ಬೀದಿಯಲ್ಲಿ ಉಭಯ ದೇವರ ದರ್ಶನ ಬಲಿ ನಡೆಯಿತು. ಶ್ರೀ ಜನಾರ್ದನ ಸ್ವಾಮಿ ಬಲಿ ಮೂರ್ತಿಯನ್ನು ವೆಂಕಟರಾಜ್ ಹಾಗೂ ಮಂಜುಳೇಶನ ಉತ್ಸವ ಬಲಿ ಮೂರ್ತಿಯನ್ನು ರಾಧಾಕೃಷ್ಣ ಹೊಳ್ಳರು ತಲೆಮೇಲೆ ಹೊತ್ತು ದರ್ಶನ ಸೇವೆ ನಡೆಸಿದರು.
ಬಳಿಕ ಉಭಯ ದೇವರು ರಥಾರೂಢರಾಗಿ ಭಕ್ತರಿಂದ ಹಣ್ಣುಕಾಯಿ ಸಮರ್ಪಣೆ ಮತ್ತು ಮಹಾಪೂಜೆ ನಡೆಯಿತು. ಬಳಿಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಅಶ್ವಥ ಕಟ್ಟೆಯ ವರೆಗೆ ಎಳೆದು, ಅಲ್ಲಿ ಕಟ್ಟೆ ಪೂಜೆ ನಡೆದು ಬಳಿಕ ಸ್ವಸ್ಥಾನಕ್ಕೆ ಕರೆತರಲಾಯಿತು. ರಥೋತ್ಸವ ವೇಳೆ ಉದ್ಯಮಿ ಜಯಪ್ರಕಾಶ್ ಮತ್ತು ವಿಶ್ವನಾಥ ಶೆಟ್ಟಿ ಅವರ ಸೇವಾ ರೂಪವಾಗಿ ಸುಡುಮದ್ದು ಪ್ರದರ್ಶನ ನಡೆಯಿತು. ರಥಬೀದಿಯ ಎರಡೂ ಪಾರ್ಶ್ವಗಳಲ್ಲಿ ವ್ಯಾಪಾರ ಮಳಿಗೆಗಳು ಬಿರುಸಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದವು . ಬಳಿಕ ದೇವಸ್ಥಾನದಲ್ಲಿ ಶ್ರೀ ಭೂತ ಬಲಿ ನಡೆಯಿತು.
ಜ. 22 ರಂದು ಬೆಳಿಗ್ಗೆ ಕವಾಟೋದ್ಘಾಟನೆ , ಸಂಜೆ ದೈವ ಮತ್ತು ದೇವರ ಭೇಟಿ ನಡೆದು ಶ್ರೀ ಜನಾರ್ದನ ಸ್ವಾಮಿ ನಿಡಿಗಲ್ ನೇತ್ರಾವತಿ ನದಿಗೆ ತೆರಳಿ ಅವಬೃಥ ಸ್ನಾನ ನಡೆಯಿತು. ದೇವಸ್ಥಾನದಲ್ಲಿ ಧ್ವಜಾವರೋಹಣ, ನಡೆದು ವರ್ಷಾವಧಿ ಮಹೋತ್ಸವ ಸಂಪನ್ನಗೊಂಡಿತು.