


ಬೆಳ್ತಂಗಡಿ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿ ನಿರ್ದೇಶನದಂತೆ, ಮಾದಕದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನದ ಪ್ರಯುಕ್ತ, ಎಸ್.ಜೆ.ಎಂ ಉಜಿರೆ ವಲಯದ ಆಶ್ರಯದಲ್ಲಿ, ಮದ್ರಸ ವಿದ್ಯಾರ್ಥಿಗಳಿಂದ SBS ಬಾಲ ಮಸೀರ (ವಿದ್ಯಾರ್ಥಿ ಜಾಥಾ ) ಜ.21 ರಂದು ಉಜಿರೆಯಲ್ಲಿ ನಡೆಯಿತು.
ಉಜಿರೆ ಟೌನ್ ಜುಮ್ಮಾ ಮಸ್ಜಿದ್ ವಠಾರದಿಂದ ಆರಂಭಗೊಂಡು ಹಳೆಪೇಟೆ ಟಿ.ಬಿ ಕ್ರಾಸ್ ವರೆಗೆ ಜಾಗೃತಿ ಜಾಥಾ ನಡೆದು ಅಲ್ಲಿ ಸಾರ್ವಜನಿಕ ಸಂದೇಶ ಭಾಷಣ ನಡೆಯಿತು.
ವಲಯದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕಬಕ ಅಧ್ಯಕ್ಷತೆ ವಹಿಸಿದ್ದರು. ಸುನ್ನೀ ಮೆನೇಜ್‌ಮೆಂಟ್ (ಎಸ್‌ಎಮ್‌ಎ) ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಎಸ್‌ವೈಎಸ್ ಉಜಿರೆ ಸೆಂಟರ್ ದಅವಾ ಕಾರ್ಯದರ್ಶಿ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಉದ್ಘಾಟನಾ ಭಾಷಣ ನಡೆಸಿದರು.

ಟಿ.ಬಿ ಕ್ರಾಸ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನೆರಿಯ ಮಸ್ಜಿದ್ ಖತೀಬ್ ಮುಹಮ್ಮದ್ ಶರ್ವಾನಿ ಮಾತನಾಡಿ, ವ್ಯಸನ ಜಾಲ ಇಂದು ಎಳೆಯ ಪ್ರಾಯದ ಮಕ್ಕಳನ್ನು ಕೇಂದ್ರೀಕರಿಸಿಕೊಂಡಿದೆ. ಆದ್ದರಿಂದ ಕ್ಯಾಂಪಸ್ ಗಳಲ್ಲಿ ನಿರಂತರ ಜಾಗೃತಿ ಅಗತ್ಯವಾಗಿದೆ. ವ್ಯಸನಗಳೆಡೆಗೆ ಪ್ರೇರೇಪಿಸುವವರ ವಿರುದ್ಧ ಇರುವ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಮ್‌ಎ ಝೋನ್ ಅಧ್ಯಕ್ಷ ಹಮೀದ್ ನೆಕ್ಕರೆ, ಉಜಿರೆ ರೀಜಿನಲ್ ಕಾರ್ಯದರ್ಶಿ ಅಬ್ದುಲ್ ಜಲೀಳ್ ಸಖಾಫಿ, ಎಸ್‌ಜೆಎಮ್ ಕಾರ್ಯದರ್ಶಿ ಅಶ್ರಫ್ ಹಿಮಮಿ ಉಜಿರೆ, ಎಸ್‌ವೈಎಸ್ ಉಜಿರೆ ಅಧ್ಯಕ್ಷ ಹೈದರ್ ಮದನಿ, ಪ್ರಮುಖರಾದ ಖಾಲಿದ್ ಮುಸ್ಲಿಯಾರ್ ಕುಂಟಿನಿ, ಯೂಸುಫ್ ಅತ್ತಾಜೆ, ಹನೀಫ್ ಮುಸ್ಲಿಯಾರ್, ಹಂಝ ಮಾಚಾರ್, ಸಲೀಂ ಕುಂಟಿನಿ, ಮುಹ್ಯುದ್ದೀನ್ ಕುಂಟಿನಿ ಮೊದಲಾದವರು ಉಪಸ್ಥಿತರಿದ್ದರು.
ಅಶ್ರಫ್ ಹಿಮಮಿ ಸ್ವಾಗತಿಸಿ ವಂದಿಸಿದರು.