ಶಾಸಕರ ಮನೆಗೆ ಹೋದಾಗ ನನಗೆ ಸಾರ್ವಜನಿಕರ ಎದುರು ಅವಮಾನ : ಜಯಾನಂದ ಪಿಲಿಕಳ ಆರೋಪ

0

ಬೆಳ್ತಂಗಡಿ: ಶ್ರೀ ಬೈರವ, ಮೂಜಿಲಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್, ಬೈರವಕಲ್ಲು ಸವಣಾಲು ಗ್ರಾಮ ಇದರ ವತಿಯಿಂದ ನಮ್ಮ ದೈವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು ಈ ಬಗ್ಗೆ ಸರ್ಕಾರದ ಅನುದಾನ ಪಡೆಯುವ ಉದ್ದೇಶದಿಂದ ಹಾಗೂ ಮೂರು ವರ್ಷಗಳ ಹಿಂದೆ 14 ಲಕ್ಷ ರೂಪಾಯಿ ನೀಡುವ ಭರವಸೆಯ ಈಡೇರದ ಹಿನ್ನಲೆಯಲ್ಲಿ ಮಾತನಾಡಲು ಶಾಸಕರ ಮನೆಗೆ ಹೋದಾಗ ನನಗೆ ಸಾರ್ವಜನಿಕರ ಎದುರು ಶಾಸಕರು ಅವಮಾನ ಮಾಡಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಳ ಆರೋಪಿದರು.
ಅವರು ಜ. 21 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಹರೀಶ್ ಪೂಂಜಾರವರ ಆಹ್ವಾನದ ಮೇರೆಗೆ ಅವರ ಗರ್ಡಾಡಿಯ ಮನೆಗೆ ಪದಾಧಿಕಾರಿಗಳ ನೇತೃತ್ವದಲ್ಲಿ ಜ. 20 ರಂದು ಬೆಳಗ್ಗೆ 8.30 ರ ಸುಮಾರಿಗೆ ತೆರಳಿರುತ್ತೇನೆ. ಶಾಸಕರ ಮನೆಯಲ್ಲಿ ಆಗಲೇ ವಿವಿಧ ಊರಿನ ಹತ್ತಾರು ಜನರಿದ್ದರು . ನಮ್ಮ ಸಮಿತಿಯ ಪದಾಧಿಕಾರಿಗಳ ಜೊತೆಗೆ ಶಾಸಕರೊಂದಿಗೆ ಮಾತನಾಡುತ್ತಿದ್ದಾಗ, ಫೇಸ್ ಬುಕ್ ನಲ್ಲಿ ನಾನು ಹಾಕಿದ ಪೋಸ್ಟ್ ವೊಂದರ ವಿಷಯವನ್ನು ಮುಂದಿಟ್ಟುಕೊಂಡು ಶಾಸಕರು ನನ್ನ ಜೊತೆಗೆ ವಾಗ್ವಾದ ನಡೆಸಿದರಲ್ಲದೆ , ಸಾರ್ವಜನಿಕವಾಗಿ ನಿಂದಿಸಿ, ಅವಮಾನ ಮಾಡಿರುತ್ತಾರೆ ಎಂದು ಆರೋಪಿಸಿದರು.
ತನ್ನ ಮನೆಗೆ ಕರೆಸಿಕೊಂಡು, ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಈ ಘಟನೆಯ ಬಗ್ಗೆ ನಾನು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಪ್ರಕರಣ ದಾಖಲಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಮಹಾಬಲ ಮಲೆಕುಡಿಯ, ತಾ.ಪಂ ಮಾಜಿ ಸದಸ್ಯ ಜಯರಾಮ್ ಅಲಂಗಾರು, ಚೇತನ್, ಲಕ್ಷ್ಮಣ್ ಅಲಂಗಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here