ವೇಣೂರು: ಮಕ್ಕಳ ಸಂಖ್ಯೆಗನುಗುಣವಾಗಿ ಇರುವ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿ ವರ್ಗಾವಣೆ ಮಾಡಲು ಮುಂದಾಗಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ಹೊಕ್ಕಾಡಿಗೋಳಿ ಸ.ಉ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಪೋಷಕರು ಧರಣಿ ನಡೆಸಲು ಮುಂದಾಗಿದ್ದಾರೆ.
ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 121 ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. 1 ರಿಂದ 5ನೇ ತರಗತಿಯ 68 ಮಂದಿ ಮಕ್ಕಳಿಗೆ 4 ಶಿಕ್ಷಕರ ಹುದ್ದೆಗೆ ಅವಕಾಶ ಇದ್ದು, ಕಾರ್ಯನಿರ್ವಹಿಸುತ್ತಿರುವ 3 ಶಿಕ್ಷಕರ ಪೈಕಿ ಒಬ್ಬರನ್ನು ವರ್ಗಾವಣೆ ಮಾಡಲು ಇಲಾಖೆ ಮುಂದಾಗಿದೆ. ಕಳೆದ ಶೈಕ್ಷಣಿಕ ಸಾಲಿನ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಇಲಾಖೆ ವರ್ಗಾವಣೆ ಮಾಡಲು ಮುಂದಾಗಿರುವುದು ಸರಿಯಲ್ಲ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಎಸ್‌ಡಿಎಂಸಿ ಮತ್ತು ಹಳೆ ವಿದ್ಯಾರ್ಥಿ ಸಂಘ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಆಗ್ರಹಿಸಿದೆ. ವರ್ಗಾವಣೆ ಖಚಿತವಾದರೆ ಜ.೨೩ರ ಸೋಮವಾರದಿಂದ ಶಾಲೆಯಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಹುಲಿಮೇರು ಮಾಹಿತಿ ನೀಡಿದ್ದಾರೆ.