ಶಿಬಾಜೆ ದಲಿತ ಯುವಕ ಶ್ರೀಧರ ಸಾವಿನ ಪ್ರಕರಣ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ: ಜ.23ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಡಿಎಸ್‌ಎಸ್ ಪ್ರತಿಭಟನೆ

0


ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ದ.ಕ ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ, ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಜ.23ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು `ಧರ್ಮಸ್ಥಳ ಪೊಲೀಸ್ ಠಾಣೆ ಚಲೋ’ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಪ್ರಧಾನ ಸಂಚಾಲಕ ನೇಮಿರಾಜ್ ಕಿಲ್ಲೂರು ಹೇಳಿದರು.
ಅವರು ಜ.17ರಂದು ಬೆಳ್ತಂಗಡಿ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿಬಾಜೆಯ ಸಾರಾ ಫಾರ್ಮ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ದಲಿತ ಯುವಕ ಶ್ರೀಧರ ಎಂಬವರಿಗೆ ನಾಲ್ಕು ಮಂದಿ ಸೇರಿ ಹಲ್ಲೆ ನಡೆಸಿದ್ದು, ಮರುದಿನ ಅವರ ಶವ ತೋಟದಲ್ಲಿ ಪತ್ತೆಯಾಗಿದೆ. ಅವರ ಸಾವಿನ ಬಗ್ಗೆ ಬಹಳಷ್ಟು ಸಂಶಯಗಳಿವೆ. ರಾತ್ರಿ ವೇಳೆ ತೋಟದ ಬೇಲಿಯನ್ನು ಸರಿಸಿ ಒಳಗೆ ಬಂದಿರುವ ಕುರುಹುಗಳು ಕಂಡುಬರುತ್ತಿದೆ. ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಷಡ್ಯಂತರಗಳು ನಡೆಯುತ್ತಿದ್ದು, ಆರೋಪಿಗಳಿಗೆ ರಾಜಕೀಯದ ಕೃಪ ಕಟಾಕ್ಷದ ಸಂಶಯವಿದೆ. ಆದುದರಿಂದ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆಯನ್ನು ನಡೆಯಲಿದೆ. ಅಂದು ಬೆಳಿಗ್ಗೆ ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯವರಗೆ ಮೆರವಣಿಗೆ ನಂತರ ಪ್ರತಿಭಟನೆ ನಡೆಯಲಿದೆ. ಸ್ಥಳಕ್ಕೆ ದ.ಕ ಪೊಲೀಸ್ ವರಿಷ್ಠಾಧಿಕಾರಿಗಳು ಬರುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು.
ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಚಾಲಕ ಬಿ.ಕೆ ವಸಂತ್ ಅವರು ಮಾತನಾಡಿ, ವಿಷ ಸೇವಿಸಿ ಆತ್ಮಹತ್ಯೆಗೈಯ್ಯುವ ವ್ಯಕ್ತಿ ತಾನು ನಿಂತ ಜಾಗದಿಂದ ಮುಂದೆ ಹೋಗಲು ಸಾಧ್ಯವಿಲ್ಲ, ಹೊಟ್ಟೆಯ ಒಳಗೆ ವಿಷ ಸೇರಿದ್ದರೆ ದೇಹದ ಮೇಲೆ ಇರುವೆಗಳು ಮುತ್ತಿಕೊಳ್ಳಲು ಸಾಧ್ಯವಿಲ್ಲ, ಈ ಸಾವಿನಲ್ಲಿ ಹತ್ತಾರು ಸಂಶಯಗಳು ವ್ಯಕ್ತವಾಗುತ್ತಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಡಿಎಸ್‌ಎಸ್ ರಾಜ್ಯ ಮುಖಂಡರಾದ ಮಾವಳ್ಳಿ ಶಂಕರ್, ಜಿಲ್ಲಾ ಮುಖಂಡ ಎಂ. ದೇವದಾಸ್, ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ಮುಖಂಡರಾದ ಅಶೋಕ್ ಕೊಂಚಾಡಿ, ಸುಂದರ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮೋಗೇರ ಸಂಘದ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here