ಕೊಯ್ಯೂರು : ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಬಹುದಿನಗಳ ಮೇಲ್ಮಹಡಿಯ ಬೇಡಿಕೆಯನ್ನು ಶೀಘ್ರದಲ್ಲಿಯೇ ಈಡೇರಿಸಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ 2022-23 ನೇ ಸಾಲಿನ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಮಲೆಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಮಿತಾಶ್ರೀ, ಪ್ರಿಯಾ, ಸುಷ್ಮಾ, ಸಾವಿತ್ರಿ, ದುರ್ಗಾಪ್ರಸನ್ನ, ಪ್ರೀತಿ ಹಾಗೂ ಉತ್ತಮ ಅಂಕಗಳಿಸಿದ ಆಮೀರ್, ಭವ್ಯಾ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಷಯವಾರು ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯಾ ವಿಷಯ ಉಪನ್ಯಾಸಕರು ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು. ಸನ್ಮಾನಿತರ ಪರವಾಗಿ ಸ್ಮಿತಾಶ್ರೀ ಅನಿಸಿಕೆ ಹಂಚಿಕೊಂಡರು. ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಪಾಂಬೇಲು ತಮ್ಮ ಪುತ್ರಿ ಕು. ವಂಶಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲು ಹತ್ತು ಸಾವಿರ ರೂಪಾಯಿ ನಗದನ್ನು ಕು. ವಂಶಿ ಮೂಲಕ ಪ್ರಾಚಾರ್ಯರಿಗೆ ಹಸ್ತಾಂತರಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಛಮೆ, ವಾರ್ಡ್ ಸದಸ್ಯರಾದ ಲೋಕೇಶ್ ಪಾಂಬೇಲು, ಇಸುಬು ಉಣ್ಣಾಲು ಮತ್ತು ಹೇಮಾವತಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶ್ವಿನ್ ಕುಮಾರ್, ಕಾರ್ಯದರ್ಶಿ ಮುಮ್ತಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ತೃಪ್ತಿ ಪಿ. ಜಿ. ಸ್ವಾಗತಿಸಿದರು. ಪ್ರಭಾರ ಪ್ರಾಚಾರ್ಯ ಬಾಲಕೃಷ್ಣ ಬೇರಿಕೆ ವಾರ್ಷಿಕ ವರದಿ ವಾಚನ ಮಾಡಿದರು. ಮಾಯಿಲ ಕೆ., ಭವ್ಯಾ ಎಂ., ಜಯಶ್ರೀ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂತೋಷ್ ಕುಮಾರ್ ವಂದಿಸಿದರು. ಲಕ್ಷ್ಮಣ ಗೌಡ ಕೆ. ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರಗಿದವು.