ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮಗಳ ಸಂಭ್ರಮ: ಡಾ| ಹೆಗ್ಗಡೆ ದಂಪತಿಗೆ ನಾಗರಿಕರ ಪೌರ ಸನ್ಮಾನ

0

ಧರ್ಮಸ್ಥಳ: ಸಂಭ್ರಮೋತ್ಸವ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಸಂಭ್ರಮ, ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರಿಗೆ ಮಂಗಳೂರು ವಿ.ವಿ ನೀಡಿರುವ ಗೌರವ ಡಾಕ್ಟರೇಟ್ ಸಂಭ್ರಮ, ಡಾ.ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವೀ.ಹೆಗ್ಗಡೆಯವರ ವೈವಾಹಿಕ ಜೀವನದ ಸುವರ್ಣ ಸಂಭ್ರಮ, ಡಾ.ಹೆಗ್ಗಡೆಯವರ 75ನೇ ಸಂವತ್ಸರಕ್ಕೆ ಪಾದಾರ್ಪಣೆಗೊಂಡ ಸಂಭ್ರಮದ ಅಂಗವಾಗಿ ಸಂಭ್ರಮಗಳ ಸಂಭ್ರಮ ಕಾರ್ಯಕ್ರಮ ಡಿ. 28ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಊರ ನಾಗರಿಕರು, ಕ್ಷೇತ್ರದ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿಗಳು, ಪೇಟೆಯ ವರ್ತಕರು, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಸಂಭ್ರಮ, ಸಡಗರದಿಂದ ವೈಭವ ಪೂರ್ಣವಾಗಿ ನಡೆಯಿತು.

ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಕ್ತರ ಹಾಗೂ ಕ್ಷೇತ್ರದ ನೌಕರರ ಪ್ರೀತಿ-ವಿಶ್ವಾಸ ಹಾಗೂ ಕುಟುಂಬಸ್ಥರ ಪೂರ್ಣ ಸಹಕಾರ ಈ ಎಲ್ಲಾ ಸಾಧನೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.ಕ್ಷೇತ್ರಕ್ಕೆ ದೊಡ್ಡ ಪರಂಪರೆ, ಇತಿಹಾಸ ಹಿನ್ನಲೆ ಇದೆ. ಆನೇಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ನಡೆಯುತ್ತಿದೆ. ಎಲ್ಲಾ ವಿಭಾಗಗಳನ್ನೊ ಒಬ್ಬೋಬ್ಬರು ನೋಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಸಿಬ್ಬಂದಿ ಟೀಮ್ ಆಗಿ ಕೆಲಸ ಮಾಡುತ್ತಿರುವುದರಿಂದ ಕಾರ್ಯ ಯಶಸ್ವಿಯಾಗುತ್ತಿದೆ. ಧರ್ಮಸ್ಥಳವನ್ನು ನಮ್ಮ ಕ್ಷೇತ್ರ ಎಂದು ಭಕ್ತರು ನೋಡುತ್ತಿದ್ದಾರೆ. ಗೌರವದಿಂದ ನಡೆದುಕೊಳ್ಳುತ್ತಾರೆ ಎಂದ ಹೆಗ್ಗಡೆಯವರು ಧರ್ಮಸ್ಥಳ ದಾನಕ್ಕೆ ಶ್ರೇಷ್ಠತೆಯನ್ನು ಪಡೆದಿದೆ. ಮಂಜುನಾಥ ಸ್ವಾಮಿ ಇದನ್ನು ಮಾಡಿಸುತ್ತಾರೆ. ಇದು ಅಭಯ ಕ್ಷೇತ್ರವಾಗಿದೆ. ನಾವು ಯಾರ ಕಾರ್ಯಕ್ರವನ್ನು ಅನುಕರಣೆ ಮಾಡುತ್ತಿಲ್ಲ, ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯುತ್ತೇವೆ ಭಕ್ತರ ಪ್ರೀತಿಯ ಜೊತೆ ಭಾವನೆ ಮುಖ್ಯವಾಗುತ್ತದೆ ಎಂದು ನುಡಿದರು.

ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳು ಕ್ಷೇತ್ರದ ಅನುಭವ, ಜನರ ಸಂಪರ್ಕ ಹಾಗೂ ಸತ್ ಚಿಂತನೆಯಿಂದ ಬಂದಿದ್ದು, ಧರ್ಮಸ್ಥಳದ ಕಾರ್ಯಕ್ರಮಗಳು ಸ್ವರ್ಧೆ, ಹೋಲಿಕೆಗಾಗಿ ಮಾಡಿದಲ್ಲ, ಈ ಕಾರ್ಯಕ್ರಮಗಳು ನಾಡಿನಾದ್ಯಂತ ಜನಮನವನ್ನು ಬೆಳಗಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಬೀಡು, ದೇವಸ್ಥಾನದ ಸಿಬ್ಬಂದಿಗಳು ಒಂದೇ ಸೂತ್ರದಲ್ಲಿ ಒಗ್ಗಟ್ಟಾಗಿ ಇರುವುದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ದೀಪದ ಅಡಿಯಲ್ಲಿ ಕತ್ತಲು ಎನ್ನುವ ಮಾತಿದೆ ಆದರೆ ಧರ್ಮಸ್ಥಳದಲ್ಲಿ ದೀಪದ ಅಡಿ ಬೆಳಕಿದೆ. ಎಲ್ಲರನ್ನೂ ಸೇರಿಸುವ ಮೂಲ ದ್ರವ್ಯ ಒಂದೇ ಆಗಿದೆ. ,ಉಜಿರೆ,ಧರ್ಮಸ್ಥಳದ ನಾಗರಿಕರು ಗೋಡೆಯನ್ನು ಕೆಡವಿ ಸಂಪರ್ಕ ಸೇತುವೆ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿ ತಮ್ಮ ಬದುಕಿನ ಸುದೀರ್ಘ ದಿನಗಳ ಬಗ್ಗೆ ಮಾತನಾಡಿ, ಹೆಗ್ಗಡೆ, ಅವರ ಕುಟುಂಬ, ಧರ್ಮಸ್ಥಳ ಯೋಜನೆಗಳ ಬಗ್ಗೆ, ನೌಕರರ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ, ನಿರ್ದೇಶಕರಾದ ರಮೇಶ್ ಅರವಿಂದ್ , ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಅರ್ಚನಾ ಅರವಿಂದ್, ಡಿ. ಸುರೇಂದ್ರ ಕುಮಾರ್ , ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಸುಪ್ರೀಮ್ ಹರ್ಷೆಂದ್ರ ಕುಮಾರ್, ಡಾ. ನಿರಂಜನ್ ಕುಮಾರ್, ಪದ್ಮಲತಾ ನಿರಂಜನ್ ರಾಜೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಶ್ರದ್ಧಾ ಅಮಿತ್, ಅಮಿತ್ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

ಪೆರಾಡಿಯಿಂದ ಮಂಗಳ ಗಂಗೋತ್ರಿ ತನಕ ಯಾನ: ಧರ್ಮಸ್ಥಳದಿಂದ ದೆಹಲಿಗೆ ಮತ್ತು ರಾಜ ದಂಪತಿಗಳಿಗೆ ಸ್ವರ್ಣ ಶುಭಾಶಯಗಳು ದೃಶ್ಯಾಭಿವಂಧನಾ ಕಾರ್ಯಕ್ರಮ, ಮುಡಿಗೇರಿತು ಡಾಕ್ಟರೇಟ್ ದಿವ್ಯಶ್ರೀ ಬಳಗದವರಿಂದ ಮತ್ತು ಈ ಪರಿಯ ಸೊಬಗನ್ನು ಆರಲ್ಲಿಯು ನಾಕಾಣೆ ದಿವ್ಯಶ್ರೀ ಬಳಗದವರಿಂದ ಕಾವ್ಯಾಭಿವಂದನಾ ಕಾರ್ಯಕ್ರಮ ಜರುಗಿತು. ಊರ ನಾಗರಿಕರು ಮತ್ತು ದೇವಳದ ಸಿಬ್ಬಂದಿಗಳಿಂದ ಹೇಮಾವತಿ ಹೆಗ್ಗಡೆಯವರು ಮತ್ತು ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪೌರ ಸನ್ಮಾನ ಅದ್ದೂರಿಯಾಗಿ ನಡೆಯಿತು.

ವೈಭವದ ಮೆರವಣಿಗೆ: ಆರಂಭದಲ್ಲಿ ಅಮೃತವರ್ಷಿಣಿ ಸಭಾಭವನದ ಬಳಿಯಿಂದ ಆನೆ, ಕುದುರೆ, ವಿವಿಧ ವೇಷ ಭೂಷಣ, ಚೆಂಡೆ, ಬ್ಯಾಂಡ್, ವಾದ್ಯ, ಕೊಂಬು, ಯಕ್ಷಗಾನ ವೇಷಗಳು, ಕೋಲಾಟ, ನಲ್ವತ್ತೆರಡು ವಿವಿಧ ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯಲ್ಲಿ ಹೆಗ್ಗಡೆ ದಂಪತಿಗಳನ್ನು ಊರಿನ ನಾಗರಿಕರು, ಕ್ಷೇತ್ರದ ಸಿಬ್ಬಂದಿಗಳು, ಗಣ್ಯರು, ಭಕ್ತ ಸಮೂಹದವರು ಮೆರವಣಿಗೆಯಲ್ಲಿ ಸಭಾ ವೇದಿಕೆಯ ವರೆಗೆ ಕರೆತರಲಾಯಿತು. ದೇವಳದ ಅರ್ಚಕರಿಂದ ವೇದ ಘೋಷದ ಬಳಿಕ ಶಂಕರ್ ಪೈ ಮತ್ತು ಬಳಗ ನೇರಳಕಟ್ಟೆ ಕುಂದಾಪುರ ಇವರು ಪ್ರಾರ್ಥನೆ ಹಾಡಿದರು. ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಧರ್ಮಸ್ಥಳ ಮಾತ್ತು ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅಭಿನಂದನಾ ಪತ್ರ ವಾಚಿಸಿದರು. ಯೋಜನೆಯ ನಿರ್ದೇಶಕ ಆನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ಅನುಸೂಯ ಪಾಠಕ್, ಮನೋರಮಾ ತೋಳ್ಪಾಡಿತ್ತಾಯ ಮತ್ತು ಬಳಗದವರಿಂದ ಮಂಗಳ ಗೀತೆ ನಡೆಯಿತು. ರಂಗಕಲಾ ಬಳಗ ಧರ್ಮಸ್ಥಳ ಇವರಿಂದ ಗಾನ ವೈಭವ, ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಕಲಾವೈಭವ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here