ಉಜಿರೆ:ತಪ್ಪದ ವಾಹನ ಪಾರ್ಕಿಂಗ್ ಕಿರಿಕಿರಿ, ಉಜಿರೆ ವರ್ತಕರ ಸಂಘದಿಂದ ಪಂಚಾಯತ್ ಗೆ ಮನವಿ

0

ಉಜಿರೆ :ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ, 20,000 ಜನಸಂಖ್ಯೆ, ಹೆಸರಾಂತ ಶಿಕ್ಷಣ ಸಂಸ್ಥೆ,ಉದ್ಯಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಪ್ರಮುಖ ಪೇಟೆಯಾದ ಉಜಿರೆಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿದೆ. ಇಲ್ಲಿನ ಅವೈಜ್ಞಾನಿಕ ಸರ್ಕಲ್ ತೆರವುಗೊಳಿಸಿದರೆ ಪಾರ್ಕಿಂಗ್, ವಾಹನ ಸಂಚಾರ ಒಂದಿಷ್ಟು ಸುಗಮಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಲ್ಲಿತ್ತು.ಆದರೆ ಇದನ್ನು ತೆರವುಗೊಳಿಸಿದರೂ ಸಮಸ್ಯೆ ಯಥಾವತ್ತಾಗಿದೆ.

ಉಜಿರೆ ಪೇಟೆಯಲ್ಲಿ ವಾಹನ ಸವಾರಿ, ಪಾರ್ಕಿಂಗ್ ಎಂಬುದು ಚಕ್ರವ್ಯೂಹವನ್ನು ಭೇದಿಸಿದಷ್ಟು ಕಠಿಣ.ಎಲ್ಲಾ ಕಡೆಯಿಂದ ನುಗ್ಗುವ ವಾಹನಗಳು, ಅವ್ಯವಸ್ಥಿತ ಪಾರ್ಕಿಂಗ್ ಸಣ್ಣಪುಟ್ಟ ಅಪಘಾತ, ಗೊಂದಲ,ವಾಗ್ವಾದಕ್ಕೆ ಕಾರಣವಾಗುತ್ತಿದೆ. ಅಲ್ಲಲ್ಲಿ ಇರುವ ಬಸ್ ನಿಲ್ದಾಣಗಳು ಕೂಡ ಪ್ರಯಾಣಿಕರ ಗೊಂದಲವನ್ನು ಮುಂದುವರಿಸಿವೆ. ಉಜಿರೆಯ ಕಾಲೇಜು ರಸ್ತೆ ಹೈಟೆಕ್ ಆಗಿ ಅಭಿವೃದ್ಧಿ ಹೊಂದಿದೆ. ಇದರ ಫುಟ್ ಪಾತ್ ಮೇಲೆಯು ವಾಹನ ಪಾರ್ಕಿಂಗ್ ಕಂಡುಬರುತ್ತದೆ. ಸಾರ್ವಜನಿಕರ ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ, ಬಾಡಿಗೆ ವಾಹನಗಳ ಅನಧಿಕೃತ ಪಾರ್ಕಿಂಗ್ ಕಂಡು ಬರುತ್ತಿದೆ. ಬಸ್ ನಿಲ್ದಾಣದಲ್ಲಿ ಬಾಡಿಗೆ ವಾಹನಗಳು ಠಿಕಾಣಿ ಹೂಡುತ್ತಿವೆ.

ವರ್ತಕರ ಸಂಘದಿಂದ ಮನವಿ

ಉಜಿರೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ ರಸ್ತೆ ಬದಿ ಹಾಗೂ ರಸ್ತೆಯಲ್ಲಿ ವಾಹನ ನಿಲ್ಲಿಸಿ ವ್ಯಾಪಾರ ಮಾಡುವುದು ಇತ್ಯಾದಿಗಳಿಂದ ಮುಕ್ತಿ ನೀಡುವ ಬಗ್ಗೆ ಡಿ. 15 ರಂದು ಗ್ರಾಮ ಪಂಚಾಯಿತಿಗೆ ಉಜಿರೆ ವರ್ತಕರ ಸಂಘದಿಂದ ಮನವಿ ನೀಡಲಾಗಿದೆ. ಇದು 5ನೇ ಬಾರಿ ನೀಡಿದ ಅರ್ಜಿಯಾಗಿದೆ. ಇಲ್ಲಿನ ಅವ್ಯವಸ್ಥೆಗಳಿಂದ ಅಧಿಕೃತವಾಗಿ ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಪೇಟೆ ಪ್ರದೇಶದಲ್ಲಿ ಗಲೀಜು ಉಂಟಾಗುತ್ತಿರುವುದು, ಅನಧಿಕೃತ ರಸ್ತೆ ಬದಿ ವ್ಯಾಪಾರ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ರಸ್ತೆಯಲ್ಲಿ ಪಾರ್ಕಿಂಗ್

ಉಜಿರೆಯ ಪೇಟೆಯ ಪ್ರತಿ ಪ್ರದೇಶದಲ್ಲಿ ಬಾಡಿಗೆ ವಾಹನಗಳ ಪಾರ್ಕಿಂಗ್ ಇರುವುದರಿಂದ ಸಾರ್ವಜನಿಕರು ಅಗತ್ಯವಾದ ಅಂಗಡಿಗಳಿಗೆ ಹೋಗಲು ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದು ಅನಿವಾರ್ಯವಾಗಿದೆ. ಇದು ಟ್ರಾಫಿಕ್ ಜಾಮ್ ಗೂ ಕಾರಣವಾಗುತ್ತಿದೆ. ಒಂದು ವೇಳೆ ಬಾಡಿಗೆ ವಾಹನಗಳ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ಹೋದರೆ ಅಲ್ಲಿಂದ ವಾಹನ ಹೊರತೆಗೆಯಲು ಇನ್ನಿಲ್ಲದ ಬವಣೆ ಪಡಬೇಕಾಗುತ್ತದೆ.

ಲೆಕ್ಕಕ್ಕೆ ಮಾತ್ರ ಸಂಚಾರಿ ಪೊಲೀಸ್

ಇಲ್ಲಿ ಇಷ್ಟೊಂದು ಅವ್ಯವಸ್ಥೆಗಳು ತಾಂಡವವಾಡುತ್ತಿದ್ದರು ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸರು ಅದರ ಗೋಜಿಗೆ ಹೋಗುತ್ತಿಲ್ಲ. ಇಲ್ಲಿರುವ ಓರ್ವ ಸಿಬ್ಬಂದಿ ಆ ಕಡೆ ಈ ಕಡೆ ಹೋಗುತ್ತಾರೆ ವಿನಹ ಅಗತ್ಯ ಇರುವ ಸ್ಥಳಗಳಲ್ಲಿ ಇರುವುದಿಲ್ಲ. ಅಥವಾ ವಾಹನ ಪಾರ್ಕಿಂಗ್, ಸಂಚಾರ ವ್ಯವಸ್ಥೆ, ಟ್ರಾಫಿಕ್ ಜಾಮ್ ವ್ಯವಸ್ಥೆಯನ್ನು ಸರಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲ.

LEAVE A REPLY

Please enter your comment!
Please enter your name here