ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಅಂತರ್ ಕಾಲೇಜ್ ಮಟ್ಟದ ಪುರುಷರ ಹಾಗೂ ಮಹಿಳೆಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭವು ಡಿ.15ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ.ಫಾ.ಬೇಸಿಲ್ ವಾಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಆಂಗ್ಲ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ತ್ರಿಶಾಲ ಜೈನ್ ಮಾತನಾಡಿ ಸ್ಪರ್ಧಾಳುಗಳು ಸೋತಿದ್ದೇವೆ ಎಂದು ಕುಗ್ಗಬೇಡಿ ಏಕೆಂದರೆ, ಸ್ಪರ್ಧಿಸುವುದು ಮುಖ್ಯ. ಜೀವನದಲ್ಲಿ ಪ್ರಯತ್ನಗಳು ನಿರಂತರವಾಗಿದ್ದರೆ ಒಂದು ದಿನ ನಮಗೆ ಯಶಸ್ಸು ಲಭಿಸುತ್ತದೆ ಎಂದು ಹೇಳಿ ತಾನು ಸುಮಾರು 25 ವರ್ಷಗಳ ಕಾಲ ಆಂಗ್ಲ ಭಾಷಾ ಪ್ರಾಧ್ಯಾಪಕಿಯಾಗಿ ಸೇಕ್ರೆಡ್ ಹಾರ್ಟ್ ಸಂಸ್ಥೆಯೊಂದಿಗೆ ಹೊಂದಿದ್ದ ಒಡನಾಟವನ್ನು ಸ್ಮರಿಸಿಕೊಂಡರು.
ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದ ಸೇಕ್ರೆಡ್ ಹಾರ್ಟ್ ಸಂಸ್ಥೆಯನ್ನು ಶ್ಲಾಘಿಸಿದರು. ತಾನು ಒಬ್ಬ ಅತ್ಯುತ್ತಮ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿ ಹಾಗೂ ಇಂದು ತರಬೇತುದಾರನಾಗಿ ರೂಪುಗೊಳ್ಳಲು ಸೇಕ್ರೆಡ್ ಹಾರ್ಟ್ ಸಂಸ್ಥೆ ನನಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಇಂದಿನ ವಿದ್ಯಾರ್ಥಿಗಳಿಗೆ ತರಬೇತುದಾರರಾದ ಶ್ರೀ.ವಿಲ್ಸನ್ ರೂಪೇಶ್ ಮೊರಾಸ್, ಶ್ರೀ.ಅಬ್ದುಲ್ ರಶೀದ್ ಮತ್ತು ಶ್ರೀ.ಮಿಥುನ್ ಕುಮಾರ್ ಇವರನ್ನ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ.ಜೆರಮ್ ಡಿ’ಸೋಜಾ ಮಾತನಾಡಿ ಪಂದ್ಯಾಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ಸ್ವಾಗತಿಸಿದರು, ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್.ಎಂ ಧನ್ಯವಾದ ಸಮರ್ಪಿಸಿದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಶ್ರೀ.ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.
ಪುರುಷರ ವಿಭಾಗದಲ್ಲಿ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯಾವಳಿಗಳಲ್ಲಿ ಅಂತಿಮವಾಗಿ ಶ್ರೀ.ಅನಂತರಾಜು ಸ್ಮಾರಕ ಟ್ರೋಫಿಗಾಗಿ ನಡೆದ ಹೋರಾಟದಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ ಆಳ್ವಾಸ್ ಕಾಲೇಜು ಮೂಡಬಿದ್ರೆ ಪ್ರಥಮ ಸ್ಥಾನವನ್ನು, ಆತಿಥೇಯ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಒಟ್ಟು 16 ತಂಡಗಳ ನಡುವೆ ಫೆಬಿಯನ್ ಬಿ.ಎನ್ ಕುಲಾಸೋ ರೋಲಿಂಗ್ ಟ್ರೋಫಿಗಾಗಿ ನಡೆದ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ಪ್ರಥಮ ಸ್ಥಾನವನ್ನು, ಶ್ರೀ.ಭುವನೇಂದ್ರ ಕಾಲೇಜು ಕಾರ್ಕಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.