




ಸುಲ್ಕೇರಿ: ರಾಜ್ಯ ಮಟ್ಟದ 17 ವರ್ಷ ವಯೋಮಾನ ವಿಭಾಗದ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಶಿಕಾಂತ್ ಸುಲ್ಕೇರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಈಗಾಗಲೇ ತಾಲೂಕು, ಜಿಲ್ಲೆ ಸೇರಿದಂತೆ ಮೈಸೂರು ವಿಭಾಗ, ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಸಾಧನೆ ಮಾಡಿದ ಅವರು ಈಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ. ಸುಲ್ಕೇರಿ ಗ್ರಾಮದ ಭಂಡಾರಗೋಳಿ ನಿವಾಸಿ ಶ್ರೀಧರ್ ಮತ್ತು ಪುಷ್ಪ ಅವರ ಪುತ್ರ. ರಾಷ್ಟ್ರದ ಮಟ್ಟದ ಕಬಡ್ಡಿ ಪಂದ್ಯಾಟವು ಹರಿಯಾಣ ರಾಜ್ಯದಲ್ಲಿ ನಡೆಯಲಿದ್ದು, ಹರಿಯಾಣಕ್ಕೆ ತೆರಳಲಿದ್ದಾರೆ. ನ. 27ರಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ 17 ವರ್ಷ ವಯೋಮಾನದ ಸಬ್ ಜ್ಯೂನಿಯರ್ ವಿಭಾಗದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗುವ ಮೂಲಕ ಕಬಡ್ಡಿ ಕ್ಷೇತ್ರದಲ್ಲಿ ಹೊಸ ಬರವಸೆ ಮೂಡಿದೆ.









