ಬೆಳ್ತಂಗಡಿ: ದೇಶದ ಎಲ್ಲಾ ನಾಗರೀಕರಿಗೂ ಸಮಾನವಾದ ಹಕ್ಕುಗಳಿವೆ. ಸಂವಿಧಾನ ಮಾನವ ಹಕ್ಕುಗಳ ರಕ್ಷಕ. ಮಾನವ ಹಕ್ಕುಗಳ ಉಲ್ಲಂಘನೆ ಆದಾಗ ಅದರ ವಿರುದ್ಧ ಹೋರಾಡಬೇಕು. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ನಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಬೈಂದೂರು ಆರಕ್ಷಕ ಠಾಣೆಯ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಡಿ. 5 ರಂದು ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಕಾನ್ಫರೆನ್ಸಾ ಎಪಿಸ್ಕೋಪಾಲೇ ಇಟಾಲಿಯನಾ ಪ್ರಾಯೋಜಿತ ಕಾರ್ಯಕ್ರಮ, ಆದಿತ್ಯ ತಾಲೂಕು ಒಕ್ಕೂಟ ಬೈಂದೂರು, ಶ್ರೀನಿಧಿ ಮಹಾಸಂಘ ಬಾಡ, ಅನುಗ್ರಹ ಮಹಾಸಂಘ ಕಲ್ಮಕ್ಕಿ, ಸೂರ್ಯ ಮಹಾಸಂಘ ಮದ್ದೋಡಿ ಹಾಗೂ ಪ್ರಗತಿ ಮಹಾಸಂಘ ತೂದಳ್ಳಿ ಇವುಗಳ ಸಹಭಾಗಿತ್ವದಲ್ಲಿ ಕಲ್ಮಕ್ಕಿ ಸಂತ ಸೆಬಾಸ್ಟಿಯನ್ ಚರ್ಚ್ ಸಭಾಭವನದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯು ಆಯೋಜಿಸಿದ ಅಂತರಾಷ್ಟ್ರೀಯ ಮಾನವ ಹಕ್ಕು ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ರೇವತಿ ಹಾಗೂ ಕಲ್ಮಕ್ಕಿ ಸಂತ ಸೆಬಾಸ್ಟಿಯನ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಫ್ರಾನ್ಸಿಸ್ ಓಡಂಪಳ್ಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಸ್ವಾಮಿ ಬಿನೋಯಿ ಎ.ಜೆ. ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಮಣಿಕಂಠ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾನವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಬೈಂದೂರು ಆದಿತ್ಯ ತಾಲೂಕು ಒಕ್ಕೂಟದ ಅಧ್ಯಕ್ಷೆ ಸುಶೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೈಂದೂರಿನ ಪ್ರಗತಿಪರ ಹೋರಾಟಗಾರರಾದ ಕೋಣಿ ವೆಂಕಟೇಶ್ ನಾಯಕ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಲ್ಮಕ್ಕಿ ಅನುಗ್ರಹ ಮಹಾಸಂಘದ ಅಧ್ಯಕ್ಷೆ ಎಲ್ಸಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರು ಮಾನವ ಹಕ್ಕಿನ ಬಗ್ಗೆ ಅರಿವಿನ ಹಾಡು ಹಾಡಿದರು. ಮಾನವ ಹಕ್ಕಿನ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೈಂದೂರು ಆರಕ್ಷಕ ಠಾಣೆಯ ಅಧಿಕಾರಿ ಶ್ರೀ. ಸುಬ್ರಹ್ಮಣ್ಯರವರು ಬೋಧಿಸಿದರು.
ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಸದಸ್ಯರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು.
ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಸಂಸ್ಥೆಯ ಸಂಯೋಜಕರಾದ ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಬಾಡ ಶ್ರೀನಿಧಿ ಮಹಾಸಂಘದ ಅಧ್ಯಕ್ಷೆ ಭಾನುಮತಿ ಬಿ.ಕೆ ಎಲ್ಲರನ್ನು ಸ್ವಾಗತಿಸಿದರು. ಬೈಂದೂರು ವಲಯದ ಕಾರ್ಯಕರ್ತೆ ಸರೋಜ ಧನ್ಯವಾದವಿತ್ತರು. ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಕುಮಾರಿ ಮನುಶ್ರೀ, ಕುಮಾರಿ ಜಯಶ್ರೀ, ಪ್ರಣಿತ್ ಹಾಗೂ ಅಭಿಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.