ವೇಣೂರು: ಇತಿಹಾಸ ಪ್ರಸಿದ್ಧ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರದ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಡಿ. ೪ರಂದು ಇಲ್ಲಿಯ ಭರತೇಶ ಸಭಾಭವನದಲ್ಲಿ ಜರಗಿದ್ದು, ಶಾಸಕ ಹರೀಶ್ ಪೂಂಜ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಯಜ್ಞನಾರಾಯಣ ಭಟ್ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಅವರು, ಸಮಿತಿಯ ಪರಿಪೂರ್ಣತೆಯ ದೃಷ್ಟಿಯಿಂದ ಇನ್ನೊಂದು ವಾರದೊಳಗೆ ಸಭೆ ಕರೆದು ಉಪಸಮಿತಿಗಳನ್ನು ರಚನೆ ಮಾಡಲಾಗುವುದು ಎಂದರು.
ಇದು ನಮ್ಮ ಯೋಗಭಾಗ್ಯ
ಸೀಮೆಯ ದೇವಸ್ಥಾನದ ಈ ಬ್ರಹ್ಮಕಲಶೋತ್ಸವದಲ್ಲಿ ಸೇರುವ ಭಕ್ತರಿಗೆ ಆತಿಥ್ಯ ನೀಡುವ ಕೆಲಸ ನಮ್ಮಿಂದ ಆಗಬೇಕು. ಪರಿಶ್ರಮದ ಮೂಲಕ ನಾವೆಲ್ಲರೂ ಒಂದಾಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬೇಕಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೇಣೂರು ಸೀಮೆಗೆ ಸಂಬಂಧಿತ ೧೨ ಗ್ರಾಮದ ಬಂಧುಗಳು ಸಹಕಾರ ನೀಡುವುದಾಗಿ ಅಲ್ಲಿನ ಶಾಸಕರು ಭರವಸೆ ನೀಡಿದ್ದಾರೆ. ಸೀಮೆಯ ದೇಗುಲದ ಜೀರ್ಣೋದ್ಧಾರ ಇದು ನಮ್ಮ ಯೋಗಭಾಗ್ಯ ಎಂದರು. ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.
ಅಳದಂಗಡಿಯ ಶಿವಪ್ರಸಾದ್ ಅಜಿಲರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ| ಪ್ರದೀಪ್ ನಾವೂರು ಬ್ರಹ್ಮಕಲಶೋತ್ಸವದ ಮಹತ್ವದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಆನಂದ ಶೆಟ್ಟಿ, ಸೋಮಯ್ಯ ಹನೈನಡೆ, ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಕೋಶಾಧಿಕಾರಿ ಎ. ಜಯರಾಮ್ ಶೆಟ್ಟಿ, ಗುರುವಾಯನಕೆರೆ ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ ಎಸ್. ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿದರು.