ಕೊಲ್ಲಮೊಗ್ರದಲ್ಲಿ ಮದ್ಯಮುಕ್ತ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ

0

 

ಊರವರ ವಿರೋಧ ಕಟ್ಟಿಕೊಂಡು ತೆರೆದ ಮದ್ಯದಂಗಡಿಗೆ ನೀವೆ ಬೀಗ ಹಾಕಿ ಗೌರವ ಹೆಚ್ಚಿಸಿ :  ಎನ್.ಎ. ರಾಮಚಂದ್ರ

ಅಬಕಾರಿ ಇಲಾಖೆಯವರು ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡದೆ ಅನುಮತಿ ನೀಡಿ ತೆರೆದ ಮದ್ಯದಂಗಡಿಯನ್ನು ಅವರಿಗೆ ತಿಳಿಯದಂತೆ ಬಂದ್ ಮಾಡಿಸುತ್ತೇವೆ : ಮಹೇಶ್ ರೈ

ಯಾರ ಮೇಲೂ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ :  ಉದಯ ಕೊಪ್ಪಡ್ಕ

ಮದ್ಯ ಮುಕ್ರ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಅಕ್ರಮ ಮದ್ಯದಂಗಡಿ ತೆರೆದಿರುವ ಬಗ್ಗೆ ಪ್ರತಿಭಟನಾ ಸಭೆಯು ಮಯೂರ ಕಲಾ ಮಂದಿರ ಕೊಲ್ಲಮೊಗ್ರದಲ್ಲಿ ಇಂದು ನಡೆಯಿತು.

 

ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ ವಹಿಸಿದ್ದರು.‌
ಪ್ರಸ್ತಾವಿಕವಾಗಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಪಿ. ಗಿರಿಧರ ಮಾತನಾಡಿದರು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಅನೇಕರನ್ನು ಮದ್ಯಮುಕ್ತರನ್ನಾಗಿಸಿ ಊರನ್ನು ಸುಭೀಕ್ಷೆ ಮಾಡಬೇಕೆಂದು ಹೊರಟಿದ್ದರು. ಅದರಂತೆ ಇಲ್ಲಿಯೂ 2 ಸಲ ಮದ್ಯವರ್ಜನ ಶಿಬಿರಗಳಾಗಿದೆ.‌ ಈ ಮೂಲಕ ಅನೇಕ ಕುಟುಂಬಗಳು ಹೊಸ ಜೀವನ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಇಲ್ಲಿ ಮದ್ಯದಂಗಡಿ ತೆರೆದ ಕಾರಣ ಮತ್ತೆ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುಂತಾಗಬಹುದೆಂಬ ಆತಂಕ ಎಲ್ಲರಲ್ಲೂ ಇದೆ. ಊರವರ ವಿರೋಧ ಕಟ್ಟಿಕೊಂಡು ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂಬುದನ್ನು ಅವರು ಯೋಚನೆ ಮಾಡಬೇಕಿತ್ತು. ನೀವಾಗಿಯೇ ತೆರೆದ ಮದ್ಯದಂಗಡಿಯನ್ನು ಪರ್ಮನೆಂಟ್ ಗಿ ನೀವಾಗಿಯೇ ಮುಚ್ಚಿಸಿದರೆ ನಿಮಗೆ ಊರವರ ಮತ್ತು ಎಲ್ಲರ ಗೌರವ ಹೆಚ್ಚಾಗುತ್ತದೆ. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಆಗದಿದ್ದರೆ ಈ ಭಾಗದವರಿಗೆ ತೊಂದರೆ ಎಂದು ಹೇಳಿದರು.

 

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಮಹೇಶ್ ರೈ ಮೇನಾಲ ಮಾತನಾಡಿ ಮದ್ಯದಂಗಡಿಗೆ ಸಂಬಂಧಪಟ್ಟವರು ನಮ್ಮ ಭಾವನೆಗಳನ್ನು ಒಡೆದು, ನಮ್ಮಲ್ಲಿ ಬಿರುಕು ಉಂಟು ಮಾಡುವಂತೆ ಮಾಡಿ ಹೋರಾಟಕ್ಕೆ ಇಳಿಯದಂತೆ ಮಾಡಬಹುದು. ಅದಕ್ಕೆ ನಾವ್ಯಾರು ಕಿವಿಗೊಡಬಾರದು. ಇಂದು ಮತ್ತು ಈ ಹಿಂದೆ ಹೋರಾಟ ದಲ್ಲಿ ಭಾಗವಹಿಸಿದವರೆಲ್ಲರೂ ಒಟ್ಟಾಗಿ ನಿಂತು ಹೋರಾಟದ ನೇತೃತ್ವ ಪಡೆದುಕೊಂಡವರನ್ನು ಬಿಡದೆ ಮುಂದೆಯೂ ಪಾಲ್ಗೊಳ್ಳಬೇಕು ಎಂದರಲ್ಲದೇ ಅಜ್ಜಾವರದಲ್ಲಿ ಓಪನ್ ಆದ ಮದ್ಯದಂಗಡಿ ಬಂದ್ ಮಾಡುವ ಬಗ್ಗೆ ನಡೆಯುತ್ತಿರುವ ಹೋರಾಟದ ಬಗ್ಗೆಯೂ ವಿವರಿಸಿದರು. ಹೋರಾಟದ ಸಂದರ್ಭ ಅನೇಕ ಟೀಕೆಗಳನ್ನು ಎದುರಿಸಿಕೊಂಡು ನಾವು ಯಶಸ್ವಿಯಾಗಬೇಕು.‌ ಅಬಕಾರಿಯವರು ಗ್ರಾಮ ಪಂಚಾಯತ್ ಗೆ ತಿಳಿಸದೆ ಓಪನ್ ಆದ ಮದ್ಯದಂಗಡಿಯನ್ನು ಅವರಿಗೆ ತಿಳಿಯದಂತೆ ಬಂದ್ ಮಾಡಿಸುತ್ತೇವೆ ಎಂದರು.
ವೇದಿಕೆಯಲ್ಲಿದ್ದ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಹಿಮ್ಮತ್ ಕೆ.ಸಿ. ಮಾತನಾಡಿ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಬೇಕಾದರೆ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸುವ ಕಾರ್ಯ ನಡೆಯಬೇಕು.‌ ಇಲ್ಲದಿದ್ದರೆ ಗ್ರಾ.ಮದ ಆರೋಗ್ಯ, ನೆಮ್ಮದಿ ಎಲ್ಲವೂ ಹಾಳಾಗುತ್ತದೆ ಎಂದರು.

ಯಾರ ಮೇಲು ಗೂಬೆ ಕೂರಿಸಬೇಡಿ

ವೇದಿಕೆಯಲ್ಲಿ ಹರಿಹರ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕೊಪ್ಪಡ್ಕ ಮಾತನಾಡಿ ಅತ್ತೆಗೆ ಸಿಟ್ಟು ಕೊತ್ತಿಗೆ ಪೆಟ್ಟು ಎಂಬಂತಾಗಿದೆ ಅಧ್ಯಕ್ಷರ ಸ್ಥಿತಿ. ನಾನು ಪಂಚಾಯತ್ ಅಧ್ಯಕ್ಷನಾಗಿ ಏನು ಜವಾಬ್ದಾರಿಯಾಗಿ ಮಾಡಬೇಕೋ ಅದನ್ನು ಮಾಡಿದ್ದೇನೆ. ಪಂಚಾಯತ್ ನ ವ್ಯವಸ್ಥೆ ಯಡಿಯಲ್ಲಿ ನಾನು ಪರ-ವಿರೋಧ ನೋಡುವುದಿಲ್ಲ. ಹಾಗಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅನಾವಶ್ಯಕ ಸಂದೇಶಗಳನ್ನು ಹರಿಯಬಿಡಲಾಗುತ್ತಿದೆ. ಯಾರ ಮೇಲೆಯೂ ಗೋಬೆ ಕೂರಿಸುವ ಕೆಲಸ ಮಾಡಬೇಡಿ. ಮೊನ್ನೆ ತುರ್ತು ಸಭೆ ಕರೆಯುವಂತೆ ಹೇಳಿದರು. ಪಂಚಾಯತ್ ನಿಯಮದಂತೆ ಸಭೆ ಕರೆದಿದ್ದೇವೆ. ನಮಗೂ ಮದ್ಯದಂಗಡಿ ತೆರೆದವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಬಿಚ್ಚಿಟ್ಟರು. ಕೆಲವೊಂದು ವಿಚಾರದ ಬಗ್ಗೆ ಯಾರ ಮೇಲೂ ಗೂಬೆ ಕೂರಿಸಬೇಡಿ. ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ಬರೆಯುತ್ತಾರೆ. ಆದರೆ ನಾನು ಅಧ್ಯಕ್ಷನಾಗಿ ಜವಾಬ್ದಾರಿಯುತವಾಗಿ ಉತ್ತರಿಸಬೇಕಾಗುತ್ತದೆ ಎಂದರಲ್ಲದೇ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಮಾತ್ರವಲ್ಲ ಅದರಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅಂತಹವರು ಹೋರಾಟಕ್ಕೂ ಅರ್ಹರಲ್ಲ ಎಂದು ಸಭಿಕರಿಂದ ವೇದಿಕೆಯಲ್ಲಿ ಮಾತನಾಡಿ ಚಪ್ಪಾಳೆ‌ಗಿಟ್ಟಿಸಿಕೊಂಡವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸಭೆಯ ಬಳಿಕ ಮೇರವಣಿಗೆಯಲ್ಲಿ ಸಾಗಿ ಪಂಚಾಯತ್ ನಲ್ಲಿ‌ ಮದ್ಯದಂಗಡಿ ನಿಲ್ಲಿಸುವಂತೆ ಮನವಿ ನೀಡಲಾಯಿತು. ಅದಕ್ಕು ಮೊದಲು ಕೊಲ್ಲಮೊಗ್ರ ಮುಖ್ಯ ಪೇಟೆಯಲ್ಲಿ ಪ್ರತಿಕೃತಿಯೊಂದನ್ನು ಸುಡಲಾಯಿತು.
ಮೆರವಣಿಗೆ ಸಾಗುವ ಸಂದರ್ಭ ಮದ್ಯದಂಗಡಿ ಮುಚ್ಚಲಾಗಿತ್ತು.

LEAVE A REPLY

Please enter your comment!
Please enter your name here