ಗ್ರಾಮದೈವದ ಸನ್ನಿಧಿಯಲ್ಲಿ ಸೇವಾ ಕಾರ್ಯ: ಬಡೆಕ್ಕಾವು ಗುತ್ತಿನಲ್ಲಿ ಉಚಿತ ಕಣ್ಣು ಪರೀಕ್ಷೆ, ಕನ್ನಡಕ ವಿತರಣೆದೈವದ ಸೇವೆಯೊಂದಿಗೆ ಜನಸೇವೆ: ಸೆ. 17ಕ್ಕೆ ಬೃಹತ್ ಆರೋಗ್ಯ ಶಿಬಿರ

0

ಬೆಳ್ತಂಗಡಿ: ಕೇವಲ ದೈವಾರಾಧನೆಗಷ್ಟೇ ಸೀಮಿತವಾಗದೆ, ಜನಸೇವೆಯಲ್ಲೂ ತೊಡಗಿಸಿಕೊಂಡಿರುವ ನಾವೂರಿನ ಪ್ರತಿಷ್ಠಿತ ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮತ್ತೊಂದು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಹಿರಿಯ ನಾಗರಿಕರ ದೃಷ್ಟಿ ಸಮಸ್ಯೆಗೆ ಬೆಳಕಾಗುವ ನಿಟ್ಟಿನಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರವನ್ನ ಆಯೋಜಿಸಲಾಗಿದೆ.ಸೆ. 17ರ ಸಂಕ್ರಾಂತಿಯಂದು ಸಂಜೆ 5.00 ಗಂಟೆಯಿಂದ ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಈ ಬೃಹತ್ ಆರೋಗ್ಯ ಶಿಬಿರ ನಡೆಯಲಿದೆ.

4 ಗ್ರಾಮಗಳ 40 ವರ್ಷ ಮೇಲ್ಪಟ್ಟ ನಾಗರಿಕರಿಗೆ ಸೌಲಭ್ಯಈ ಶಿಬಿರ ಕೇವಲ ಒಂದು ಗ್ರಾಮಕ್ಕೆ ಸೀಮಿತವಲ್ಲ. ನಾವೂರು, ನಡ, ಕನ್ಯಾಡಿ ಮತ್ತು ಇಂದಬೆಟ್ಟು ಗ್ರಾಮಗಳ 40 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರಿಗೆ ಈ ಉಚಿತ ಸೇವೆ ಲಭ್ಯವಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯರಿಗೆ ನಗರಕ್ಕೆ ಹೋಗಿ ದುಬಾರಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ಗುತ್ತು ಟ್ರಸ್ಟ್‌ನ ಈ ಹೆಜ್ಜೆ ನಿಜಕ್ಕೂ ಶ್ಲಾಘನೀಯ.

ಗ್ರಾಮದೈವ ಶ್ರೀ ಕೊಡಮಣಿತ್ತಾಯ ಮತ್ತು ಗುತ್ತು ಬಾಮ ದೈವ ಜುಮಾದಿ ಹಾಗೂ ಸಹಪರಿವಾರ ದೈವಗಳ ದೈವಸ್ಥಾನ ಬಡೆಕ್ಕಾವುಗುತ್ತು ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಮತ್ತು ಬೆಳ್ತಂಗಡಿಯ ಹಿರಿಯ ತಜ್ಞ ಕಣ್ಣಿನ ವೈದ್ಯರುಗಳ ತಂಡದಿಂದ ಸೂಕ್ಷ್ಮವಾಗಿ ತಪಾಸಣೆ ನಡೆಯಲಿದೆ. ಅಗತ್ಯವಿರುವವರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕವನ್ನು ವಿತರಿಸಲಾಗುವುದು.

ದೈವದ ಅನುಗ್ರಹದೊಂದಿಗೆ ಅನ್ನದಾನಕೇವಲ ಆರೋಗ್ಯ ಶಿಬಿರಕ್ಕೆ ಈ ಕಾರ್ಯಕ್ರಮ ಸೀಮಿತವಾಗಿಲ್ಲ. ಶಿಬಿರದ ನಂತರ ರಾತ್ರಿ 8.30ರಿಂದ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ. ದೈವದ ಪ್ರಸಾದದ ರೂಪದಲ್ಲಿ ಸಾವಿರಾರು ಮಂದಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸೇವಾ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳುವಂತೆ ಬಡೆಕ್ಕಾವು ಗುತ್ತು ಮನೆಯವರು, ಅರ್ಚಕರು, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು ಮತ್ತು ನಾವೂರು ಗ್ರಾಮದ ಎಲ್ಲ ಗ್ರಾಮಸ್ಥರು ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here