







ಬೆಳ್ತಂಗಡಿ: ರಸ್ತೆ ಎಂದರೆ ಸುಗಮ ಸಂಚಾರಕ್ಕೆ ದಾರಿ. ಆದರೆ ಗುರುವಾಯನಕೆರೆ-ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು ೨೧ ಕಿ.ಮೀ. ರಸ್ತೆ ಇದೀಗ ವಾಹನ ಸವಾರರಿಗೆ ಪ್ರತಿದಿನವೂ ಸವಾಲಿನ ಮಾರ್ಗವಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಸಂಚರಿಸಿ ಪರಿಶೀಲಿಸಿದಾಗ ೨೯೪ ದೊಡ್ಡ ಹಾಗೂ ಅತ್ಯಂತ ಅಪಾಯಕಾರಿ ಗುಂಡಿಗಳು ಕಂಡುಬಂದಿದ್ದು, ಸಣ್ಣಪುಟ್ಟ ಗುಂಡಿಗಳ ಸಂಖ್ಯೆ ೭೦೦ಕ್ಕೂ ಮಿಕ್ಕಿದೆ. ಸುದ್ದಿ ನ್ಯೂಸ್ ತಂಡ ಗುರುವಾಯನಕೆರೆಯಿಂದ ತಾಲೂಕಿನ ಕಟ್ಟ ಕಡೆಯ ಗ್ರಾ.ಪಂ ಆದ ಹೊಸಂಗಡಿವರೆಗೆ ಮಹಾಗುಂಡಿಗಳನ್ನು ಎಣಿಕೆ ಮಾಡಿ ಬಂದಿದ್ದು, ಆಗ ಸಿಕ್ಕಿರುವುದು ಕೇವಲ ಗುಂಡಿಗಳ ಸಂಖ್ಯೆಯಲ್ಲ; ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಜನರ ಸುರಕ್ಷತೆಯ ಪ್ರಶ್ನೆ.
ಒಂದೇ ಕಡೆ ೨೦ಕ್ಕೂ ಹೆಚ್ಚು ಗುಂಡಿಗಳು: ಪಡಂಗಡಿ ಹಾಗೂ ಗರ್ಡಾಡಿ ಭಾಗದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿವರ್ಷವೂ ಇದೇ ಸಮಸ್ಯೆ ಮರುಕಳಿಸುತ್ತಿದೆ. ಕೆಲವೆಡೆ ಒಂದೇ ಸ್ಥಳದಲ್ಲಿ ೨೦ಕ್ಕೂ ಹೆಚ್ಚು ಗುಂಡಿಗಳು ಕಾಣಸಿಗುತ್ತವೆ. ವರ್ಷಕ್ಕೊಮ್ಮೆ ಪ್ಯಾಚ್ವರ್ಕ್ ಮಾಡಲಾಗುತ್ತದೆ. ಆದರೆ ಮಳೆಗಾಲ ಬರುತ್ತಿದ್ದಂತೆ ಮತ್ತೆ ಅದೇ ಜಾಗದಲ್ಲಿ ಗುಂಡಿಗಳು ಬಾಯ್ತೆರೆದುಕೊಳ್ಳುತ್ತವೆ. ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ; ಆದರೆ ಗುಂಡಿ ಸಮಸ್ಯೆ ಮಾತ್ರ ಮುಗಿಯುತ್ತಿಲ್ಲ. ಇದು ರಸ್ತೆಯ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆ ಮೂಡಿಸುತ್ತಿದೆ.
ಗುಂಡಿ ತಪ್ಪಿಸಲು ಹೋಗಿ.. ಮತ್ತೊಂದು ಅಪಾಯ: ಒಂದು ಗುಂಡಿಯನ್ನು ತಪ್ಪಿಸಲು ವಾಹನವನ್ನು ಒಂದು ಬದಿಗೆ ತಿರುಗಿಸಿದರೆ ಅಲ್ಲಿಯೂ ಮತ್ತೊಂದು ಗುಂಡಿ ಎದುರಾಗುತ್ತದೆ. ಕೆಲವೆಡೆ ಗುಂಡಿಗಳನ್ನು ತಪ್ಪಿಸಲು ರಸ್ತೆಯ ಬದಿಯಲ್ಲಿ ಹಾಕಿರುವ ದೊಡ್ಡ ಬೌಲ್ಡರ್ ಕಲ್ಲುಗಳು ಮತ್ತೊಂದು ಅಪಾಯಕ್ಕೆ ಕಾರಣವಾಗಿವೆ. ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ದೊಡ್ಡ ವಾಹನಗಳಿಗೂ ಈ ಕಲ್ಲುಗಳು ಹಾಗೂ ಉಬ್ಬು-ತಗ್ಗಿನ ರಸ್ತೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಗುಂಡಿ ತಪ್ಪಿಸುವುದೇ ಅಪಾಯವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ಯಾಚ್ವರ್ಕ್ ಬಳಿಕ ರಸ್ತೆ ಮತ್ತಷ್ಟು ಉಬ್ಬು-ತಗ್ಗು: ಗುಂಡಿಗಳಿಗೆ ಪ್ಯಾಚ್ ಹಾಕಿದರೂ ರಸ್ತೆ ಸಮತಟ್ಟಾಗುತ್ತಿಲ್ಲ. ಕೆಲವೆಡೆ ಪ್ಯಾಚ್ ಮಾಡಿದ ಭಾಗಗಳು ಎತ್ತರವಾಗಿದ್ದು, ಉಳಿದ ರಸ್ತೆ ತಗ್ಗಾಗಿದೆ. ಪರಿಣಾಮವಾಗಿ ರಸ್ತೆಯುದ್ದಕ್ಕೂ ಒಂದೆಡೆ ಗುಂಡಿ, ಮತ್ತೊಂದೆಡೆ ಉಬ್ಬು-ತಗ್ಗು ಎಂಬ ಸ್ಥಿತಿ ನಿರ್ಮಾಣವಾಗಿದೆ. ದೊಡ್ಡ ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚುವ ಪ್ರಯತ್ನ ನಡೆದಿರುವ ಕಡೆಗಳಲ್ಲಿಯೂ ವಾಹನ ಸಂಚಾರ ಸುಗಮವಾಗಿಲ್ಲ. ರಾತ್ರಿ ವೇಳೆಯಲ್ಲಿ ಗುಂಡಿಗಳು ಹಾಗೂ ಕಲ್ಲುಗಳು ಸ್ಪಷ್ಟವಾಗಿ ಕಾಣದೆ ಅಪಾಯ ಇನ್ನಷ್ಟು ಹೆಚ್ಚಾಗುತ್ತಿದೆ.
ರಸ್ತೆ ಗುಂಡಿಗಳ ಹೊಡೆತಕ್ಕೆ ವಾಹನಗಳಿಗೂ ಹೊಡೆತ!: ಗುಂಡಿಗಳ ರಸ್ತೆಯಲ್ಲಿ ನಿರಂತರವಾಗಿ ಸಂಚರಿಸುವುದರಿಂದ ವಾಹನಗಳ ಮೇಲೂ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಬೆನ್ನುನೋವು, ವಾಹನಗಳ ಟೈರ್, ಸಸ್ಪೆನ್ಶನ್ ಸೇರಿದಂತೆ ವಿವಿಧ ಭಾಗಗಳಿಗೆ ಹಾನಿಯಾಗುತ್ತಿದ್ದು, ಪದೇಪದೇ ವಾಹನ ದುರಸ್ತಿಗೆ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾಗುವ ಸ್ಥಿತಿ ವಾಹನ ಸವಾರರ ದಿನನಿತ್ಯದ ಅನುಭವವಾಗಿದೆ.
ಅದೇ ಕಥೆ… ಪರಿಹಾರ ಮಾತ್ರ ಇಲ್ಲ!: ಈ ರಸ್ತೆಯ ದುಸ್ಥಿತಿ ಕುರಿತು ಪ್ರತಿವರ್ಷವೂ ಮಳೆಗಾಲದಲ್ಲಿ ದೂರುಗಳು ಹಾಗೂ ವರದಿಗಳು ಬರುತ್ತಿವೆ. ಸಮಸ್ಯೆ ಅಧಿಕಾರಿಗಳ ಗಮನಕ್ಕೂ ಬರುತ್ತಿದೆ. ಪ್ಯಾಚ್ವರ್ಕ್ ಕೂಡ ನಡೆಯುತ್ತಿದೆ. ಆದರೂ ಮುಂದಿನ ಮಳೆಗಾಲದಲ್ಲಿ ಮತ್ತೆ ಅದೇ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ.
ಶಾಶ್ವತ ರಸ್ತೆ ಬೇಕು: ಪ್ರತಿ ವರ್ಷ ಗುಂಡಿ ಬಿದ್ದಾಗ ಪ್ಯಾಚ್ ಹಾಕುವುದರಿಂದ ಸಾರ್ವಜನಿಕರ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದಿಲ್ಲ. ಮಳೆಗಾಲ ಬಂದಾಗ ಮತ್ತೆ ಅದೇ ಸಮಸ್ಯೆ ಎದುರಾಗುತ್ತಿರುವುದನ್ನು ಗಮನಿಸಿ, ರಸ್ತೆಯ ಗುಣಮಟ್ಟ ಹಾಗೂ ಕಾಮಗಾರಿಯ ಸ್ಥಿತಿಯನ್ನು ಪರಿಶೀಲಿಸಿ ಗುಣಮಟ್ಟದ ಶಾಶ್ವತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ೨೧ ಕಿ.ಮೀ. ರಸ್ತೆಯಲ್ಲಿ ೨೯೪ ಮಹಾ ಗುಂಡಿಗಳು ಹಾಗೂ ೭೦೦ಕ್ಕೂ ಅಧಿಕ ಸಣ್ಣ ಗುಂಡಿಗಳು ಕಂಡುಬಂದಿರುವುದು ಸಾಮಾನ್ಯ ವಿಚಾರವಲ್ಲ. ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ಉದ್ಯೋಗಿಗಳು, ರೋಗಿಗಳು ಹಾಗೂ ಪ್ರತಿನಿತ್ಯ ಸಂಚರಿಸುವ ಸಾವಿರಾರು ಜನರ ಸುರಕ್ಷತೆಯ ಪ್ರಶ್ನೆ ಇದಾಗಿದೆ. ಜನರ ಸಮಸ್ಯೆ ಪ್ರತಿವರ್ಷ ಸುದ್ದಿಯಾಗುತ್ತಲೇ ಇದೆ. ಆದರೆ ಈ ಸುದ್ದಿ ಮುಂದಿನ ಮಳೆಗಾಲದಲ್ಲೂ ಇದೇ ರೀತಿ ಪುನರಾವರ್ತನೆಯಾಗಬೇಕೇ? ಎಂಬ ಪ್ರಶ್ನೆಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತರ ನೀಡಬೇಕಿದೆ. ಗುಂಡಿಗಳನ್ನು ಮುಚ್ಚುವುದಲ್ಲ… ಗುಂಡಿಗಳೇ ಬೀಳದಂತಹ ಗುಣಮಟ್ಟದ ರಸ್ತೆ ನಿರ್ಮಿಸುವುದು ಈಗಿನ ಅಗತ್ಯ.
ಪಡಂಗಡಿ ರಸ್ತೆಯಲ್ಲಿ ಗುಂಡಿಗಳ ಸಮಸ್ಯೆ ಇರುವುದನ್ನು ಗಮನಕ್ಕೆ ಬಂದಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಹಲವು ಬಾರಿ ಸ್ವಂತ ಖರ್ಚಿನಿಂದಲೇ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿzನೆ. ಈ ರಸ್ತೆಯನ್ನು ಮಳೆಹಾನಿ ಪಟ್ಟಿಯಲ್ಲಿಯೂ ಸೇರಿಸಲಾಗಿದೆ. ಸರ್ಕಾರದಿಂದ ಮರುಡಾಂಬರೀಕರಣಕ್ಕೆ ಅವಕಾಶ ದೊರೆಯಲಿದೆ ಎಂಬ ಭರವಸೆ ಇದೆ. ಶೀಘ್ರದಲ್ಲೇ ರಸ್ತೆ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ.” -ಹರೀಶ್ ಪೂಂಜ, ಶಾಸಕ


ಪ್ರಯಾಸಕರ: ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವುದೇ ಪ್ರಯಾಸವಾಗಿದೆ. ಮಳೆಗಾಲದಲ್ಲಿ ನೀರು ತುಂಬಿ ಗುಂಡಿಗಳಿರುವುದು ಗಮನಕ್ಕೂ ಬರುವುದಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ನಮಗೆ ಇದೇ ಸಮಸ್ಯೆ. ವಿಶ್ವನಾಥ್, ದ್ವಿ ಚಕ್ರ ವಾಹನ ಸವಾರ
- ರಿಪೇರಿಗೆ ಖರ್ಚು: ರಸ್ತೆ ಬಗ್ಗೆ ನಾವು ಏನು ಹೇಳುವುದು ಎಂದೇ ಗೊತ್ತಾಗುವುದಿಲ್ಲ, ಅಲ್ಲಲ್ಲಿ ಉಚಿತ ಗುಂಡಿ. ಈ ಗುಂಡಿಗಳ ಸಮಸ್ಯೆಯಿಂದ ನಾವು ಎಷ್ಟೋ ಬಾಡಿಗೆ ಬಿಡುತ್ತಿzವೆ. ಅಗತ್ಯ ಗ್ರಾಹಕರು ಇದ್ದರೆ ಮಾತ್ರ ಬರುತ್ತೇನೆ. ಪ್ರತಿದಿನ ಬಂದರೆ ವಾಹನ ರಿಪೇರಿಗೆ ಖರ್ಚಾಗುತ್ತದೆ. – ಕೇಶವ, ಟೆಂಪೋ ಚಾಲಕ
- ಈ ಗುಂಡಿಗಳಿಂದ ಮೂಡಬಿದಿರೆಯಿಂದ ಬೆಳ್ತಂಗಡಿಗೆ ಬರುವ ಬಸ್ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಬಸ್ ಚಾಲಕರಿಗೆ ಬೈಯುವ ಹಾಗೂ ಇಲ್ಲ, ಬಿಡುವಾಗೂ ಇಲ್ಲ. ಹೆಚ್ಚಿನ ಬಸ್ಗಳ ಸ್ಪೇರ್ ಪಾರ್ಟ್ಗಳು ಅಲ್ಲಲ್ಲಿ ಕಳಚಿ ಬೀಳುತ್ತಿವೆ. ಈ ಸಮಸ್ಯೆಗಳನ್ನು ನಾವು ಯಾರಲ್ಲಿ ಹೇಳುವುದು? ಆದಷ್ಟು ಬೇಗ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು. ಇಲ್ಲದಿದ್ದರೆ ಪ್ರತಿ ಮಳೆಗಾಲದಲ್ಲಿಯೂ ಇದೇ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ಯಾಚ್ ವರ್ಕ್ ಮಾಡಿದರೆ ಗುಂಡಿಗಳ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.
- – ಜಗದೀಶ್, ಬಸ್ ಟೈಂ ಕೀಪರ್, ಶಕ್ತಿನಗರ
ಸಮರ್ಪಕ ಡಾಂಬರೀಕರಣ ಮಾಡಲ್ಲ: ಗರ್ಡಾಡಿ ರಸ್ತೆಯಲ್ಲಿ ಯಾವಾಗಲೂ ದ್ವಿ ಚಕ್ರ ವಾಹನ ಸವಾರರು ಗುಂಡಿಗಳಿಂದಾಗಿ ಬೀಳುತ್ತಲೇ ಇರುತ್ತಾರೆ. ಅನೇಕರಿಗೆ ಗಂಭೀರ ಗಾಯಗಳಾಗಿವೆ. ಇದು ಲಾರಿಗಳು, ಬಸ್ಗಳು, ಸಣ್ಣ ಪುಟ್ಟ ವಾಹನಗಳು ಪ್ರತಿನಿತ್ಯ ಓಡಾಡುವ ರಸ್ತೆ. ಇಲ್ಲಿ ಆದಷ್ಟು ಬೇಗ ಗುಣಮಟ್ಟದ ರಸ್ತೆಯ ಅಗತ್ಯ ಇದೆ. ಕಳೆದ ಬಾರಿ ಡಾಂಬರೀಕರಣ ಮಾಡುವಾಗ ಇಂಜಿನಿಯರ್ ಜೊತೆ ನಾನೇ ಮಾತನಾಡಿ ಗಟ್ಟಿ ರಸ್ತೆ ಮಾಡಿ ಎಂದು ಕೇಳಿದಾಗ ಇಲ್ಲ ಮೇಡಂ, ಅದು ಮಳೆಗಾಲದಲ್ಲಿ ಹೋಗುತ್ತದೆ ಎಂದು ಹೇಳುತ್ತಾರೆ. ಈ ಹಿಂದೆ ಸಣ್ಣ ರಸ್ತೆ ಇರಬೇಕಾದರೆ ಈ ರೀತಿ ಗುಂಡಿ ಬೀಳುತ್ತಿರಲಿಲ್ಲ, ಈಗ ಯಾಕೆ ಹೀಗೆ ರಸ್ತೆಗಳು ಉಳಿಯುವುದಿಲ್ಲ. ಅವರು ವೈಜ್ಞಾನಿಕವಾಗಿ ಸಮರ್ಪಕವಾಗಿ ಡಾಂಬರೀಕರಣ ಮಾಡುತ್ತಿಲ್ಲ, ಹಾಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಗುಂಡಿ ಸಮಸ್ಯೆ ಆಗುತ್ತಿದೆ. – ಲತಾ, ಪಡಂಗಡಿ ಗ್ರಾಮಸ್ಥರು









