






ಬೆಳ್ತಂಗಡಿ: ಚುನಾವಣೆ ಮುಗಿದ ನಂತರ ಮತದಾರರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಕಿಮ್ಮತ್ತು ಕೊಡುವುದಿಲ್ಲ ಎಂಬುದಕ್ಕೆ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ಸಾಕ್ಷಿಯಾಗಿದೆ. ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಯಾರು ಕೂಡ ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾಗಿರುವ ಪ್ರಜೆಗಳ ಪರ ಇರುವುದಿಲ್ಲ ಎಂಬುದಕ್ಕೆ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿನ ಹೊಂಡ ಗುಂಡಿಗಳು ಸಾಕ್ಷಿ ಹೇಳುತ್ತಿದೆ. ಎರಡು ವರ್ಷದಿಂದ ನಿರಂತರವಾಗಿ ರಸ್ತೆ ಅವ್ಯವಸ್ಥೆ ಕುರಿತು ಸಾರ್ವಜನಿಕರು ಧ್ವನಿ ಎತ್ತುತ್ತಿದ್ದರೂ, ಸುದ್ದಿ ಬಿಡುಗಡೆ ಸಹಿತ ಹಲವು ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿಲ್ಲ. ವಾಹನ ಚಾಲಕ ಮಾಲಕರು, ಪ್ರಯಾಣಿಕರು, ವಿದ್ಯಾರ್ಥಿಗಳು ಕಾಡಿ ಬೇಡಿದರೂ ಸಂಸದರಾಗಲೀ, ಶಾಸಕರಾಗಲೀ, ಸಚಿವರಾಗಲೀ, ಸರಕಾರವಾಗಲೀ ಇತ್ತ ತಮ್ಮ ಚಿತ್ತ ಹರಿಸುತ್ತಿಲ್ಲ.
ತಮಗೂ ನಿಮ್ಮ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕಣ್ಣಿದ್ದೂ ಕುರುಡರಂತೆ ಸಂಬಂಧಿಸಿದವರು ವರ್ತಿಸುತ್ತಿದ್ದಾರೆ ಎಂಬುದನ್ನು ಪಿಲಿಗೂಡಿನಿಂದ ಉಪ್ಪಿನಂಗಡಿವರೆಗಿನ ರಸ್ತೆಯಲ್ಲಿರುವ ೧೧೪೮ ಹೊಂಡಗಳೇ ಹೇಳುತ್ತಿವೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ರಾಜರು ಮತ್ತು ತಾವು ಜನಸೇವಕರು ಎಂಬುದನ್ನು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳು ಇನ್ನಾದರೂ ಈ ರಸ್ತೆಯನ್ನು ದುರಸ್ತಿ ಪಡಿಸಬೇಕು. ಜನರೇ ಕಟ್ಟಿರುವ ತೆರಿಗೆ ಹಣವನ್ನು ಜನರಿಗಾಗಿ ಉಪಯೋಗಿಸುವ ಮೂಲಕ ಜನರ ಪ್ರಮುಖ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಯ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಅದೆಷ್ಟೋ ಜನರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅದೆಷ್ಟೋ ಜನರು ಕೈಕಾಲು ಮುರಿದುಕೊಂಡಿದ್ದಾರೆ. ಅದೆಷ್ಟೋ ಜನರ ಸೊಂಟ ನೋವು ಜಾಸ್ತಿಯಾಗಿ ಹಾಸಿಗೆ ಹಿಡಿದಿದ್ದಾರೆ. ಅದೆಷ್ಟೋ ಜನರು ಸ್ಕೂಟರ್, ಬೈಕ್, ಕಾರು, ಜೀಪು ಇತ್ಯಾದಿ ವಾಹನಗಳ ರಿಪೇರಿಗೆ ಗ್ಯಾರೇಜ್ನಲ್ಲಿ ಸಾವಿರಾರು ರೂಪಾಯಿ ಸುರಿಯುತ್ತಿದ್ದಾರೆ. ಆದರೂ ಸ್ಪಂದಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಮೊಂಡುತನ ಬಿಟ್ಟು ಇನ್ನಾದರೂ ಜನರ ನರಕ ಯಾತನೆಗೆ ಸ್ಪಂದಿಸಬೇಕು ಎಂದು ಬೇಡಿಕೆ ಕೇಳಿ ಬಂದಿದೆ.
ಗುಂಡಿ ಮತ್ತೆ ಹೆಚ್ಚಾಯ್ತು: ಸುದ್ದಿಯವರು ವರದಿ ಮಾಡುತ್ತಾರೆ, ಒಮ್ಮೆ ಬಂದು ಗುಂಡಿ ಮುಚ್ಚುತ್ತಾರೆ, ಆಮೇಲೆ ಏನಿಲ್ಲ ಏನಿಲ್ಲ..ಇದು ಈ ಬಾರಿ ನಾವು ಪಿಲಿಗೂಡು ಉಪ್ಪಿನಂಗಡಿ ರಸ್ತೆಯ ವರದಿಗೆಂದು ತೆರಳಿದ ವೇಳೆ ಸಾರ್ವಜನಿಕರು ತಮ್ಮ ತಮ್ಮೊಳಗೆ ಆಡಿಕೊಳ್ಳುವ ಮಾತು. ನಮಗೂ ಪಿಲಿಗೂಡು ಉಪ್ಪಿನಂಗಡಿ ರಸ್ತೆಯ ದಯನೀಯ ಸ್ಥಿತಿ ಬಗ್ಗೆ ಪತ್ರಿಕೆಯಲ್ಲಿ ಬರೆದು, ವಾಹಿನಿಯಲ್ಲಿ ವಾಸ್ತವ ಚಿತ್ರಣ ತೋರಿಸಿ ತೋರಿಸಿ ಸಾಕಾಗಿದೆ. ಆದರೆ ಕೆಲವು ಸಲ ಪ್ಯಾಚ್ವರ್ಕ್ ಕಾಟಾಚಾರಕ್ಕೆ ನಡೆದಿರುವುದು ಬಿಟ್ಟರೆ ವ್ಯವಸ್ಥಿತವಾಗಿ ಆಗಿಲ್ಲ. ಈಗ ಮತ್ತೆ ಗುಂಡಿ ಹೆಚ್ಚಾಗಿದೆ.
ಪಿಲಿಗೂಡುನಿಂದ ಉಪ್ಪಿನಂಗಡಿ ತನಕ ಬರೋಬ್ಬರಿ ೧೧೪೮ ಗುಂಡಿ: ೨೦೨೬ರ ಆಗಸ್ಟ್ ೧೧ರಂದು ಸಂಜೆ ೪ ಗಂಟೆಯ ವೇಳೆಗೆ ಪಿಲಿಗೂಡುವಿನಿಂದ ಉಪ್ಪಿನಂಗಡಿ ಸೇತುವೆಯ ತನಕ ಬರೋಬ್ಬರಿ ೧೧೪೮ ಗುಂಡಿಗಳಿರುವ ಲೆಕ್ಕ ಸಿಕ್ಕಿದೆ. ಇದರಲ್ಲೂ ಕೆಲವೊಂದು ಕೆರೆಯಂತಹ ಗುಂಡಿಗಳೂ ಒಂದೆ ಗುಂಡಿಯ ಲೆಕ್ಕದಲ್ಲಿ ಸೇರಿವೆ. ಸುದ್ದಿ ನ್ಯೂಸ್ ಗುಂಡಿ ಲೆಕ್ಕ ಹಾಕಿದ ನಂತರವಾದರೂ ಆಡಳಿತ ವರ್ಗ, ಶಾಸಕರು, ಸಚಿವರು, ಸಂಸದರು, ಸರ್ಕಾರ ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಶಾಸಕರೇ, ಸಂಸದರೇ, ಸಚಿವರೇ ಡೈಲಿ ಇಲ್ಲಿಂದ ಬನ್ನಿ-ಓಪನ್ ಚಾಲೆಂಜ್!: ರಾಜ್ಯ ಸರ್ಕಾರದ ಜನಪರ ಸಚಿವರು, ನಮ್ಮ ಹೆಮ್ಮೆಯ ಶಾಸಕರು, ನಮ್ಮ ಪ್ರೀತಿಯ ಸಂಸದರು ಮತ್ತು ಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆಯ ಅಗ್ರಗಣ್ಯ ಅಧಿಕಾರಿ ವರ್ಗ ಯಾರೇ ಆಗಲಿ, ಈ ರಸ್ತೆಯಲ್ಲಿ ಸತತ ಒಂದು ತಿಂಗಳು ಬರುತ್ತೀರಾ, ಬೈಕ್ನಲ್ಲಿ ಬರುವುದಾದರೆ ನೀವು ಗ್ರೇಟ್. ರಿಕ್ಷಾದಲ್ಲಿ ಪ್ರಯಾಣಿಸುವುದಾದರೂ ಆಗಬಹುದು. ನಿತ್ಯ ಕಾರು, ಬಸ್ನಲ್ಲಾದರೂ ಓಕೆ. ಇಲ್ಲದಿದ್ದರೆ ಕನಿಷ್ಠ ಕಾಲ್ನಡಿಗೆಯಲ್ಲಿಯಾದರೂ ಬನ್ನಿ ಎಂದು ಸಾರ್ವಜನಿಕರು ನೇರ ಸವಾಲು ಹಾಕಿದ್ದಾರೆ.
ಕುಪ್ಪೆಟ್ಟಿ, ಹಲೇಜಿ, ಉಪ್ಪಿನಂಗಡಿ ಸಮೀಪ ಇವೆ ಮಹಾ ಕೆರೆಗುಂಡಿ: ೧೧೪೮ ಗುಂಡಿಗಳಲ್ಲಿ ಕೆಲವು ಕೆರೆ ಸ್ವರೂಪ, ಬಾವಿ ಸ್ವರೂಪ, ಚಿಕ್ಕ ತೋಡಿನ ಸ್ವರೂಪದ ಗುಂಡಿಗಳು ಕೂಡ ಸೇರಿವೆ. ಅದರಲ್ಲೂ ಹಲೇಜಿ, ಕುಪ್ಪೆಟ್ಟಿ, ಕರಾಯ ಸಮೀಪ ಇಂತಹ ಹಲವಾರು ಗುಂಡಿಗಳಿದ್ದು ವಾಹನಗಳು ನಿಂತು, ಕುಳಿತು, ಮಲಗೆದ್ದು ಸಾಗಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಇಲ್ಲಿ ಮನುಷ್ಯನ ಬಾಡಿ ಮತ್ತು ಓಡಿಸುವ ಗಾಡಿ ಎಲ್ಲವೂ ಲಗಾಡಿ ಹೋಗುತ್ತಿದೆ. ಇಷ್ಟೆಲ್ಲ ಆದರೂ ಇದನ್ನು ಕೇಳುವವರು ಯಾರೂ ಇಲ್ಲ. ಯಾಕೆಂದರೆ ಅವರಿಗೆ ಜನರ ತೆರಿಗೆ ಹಣದಿಂದ ಬೇಕಾದ್ದು ಎಲ್ಲವೂ ಸಿಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಜಕಾರಣ ಬಿಡಿ, ಗುಂಡಿ ಮುಚ್ಚಿಬಿಡಿ, ಜನರಿಗೆ ನೆಮ್ಮದಿ ಕೊಡಿ: ಈ ರಸ್ತೆಯ ಬಗ್ಗೆ ಮಾತನಾಡಿದರೆ ರಾಜಕಾರಣಿಗಳದ್ದು ಉತ್ತರವೇ ಬೇರೆ ಇದೆ. ಶಾಸಕ ಹರೀಶ್ ಪೂಂಜ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿ ಸಚಿವರು ರಸ್ತೆ ಮಾಡಿಸುವ ಭರವಸೆ ನೀಡಿ ಆರೇಳು ತಿಂಗಳು ಕಳೆದರೂ ಜನರಿಗೆ ಪ್ರಯೋಜನವಂತೂ ಆಗಲಿಲ್ಲ. ಕೇಂದ್ರದ ಯೋಜನೆಯಡಿ ಸಂಸದ ಬ್ರಿಜೇಶ್ ಚೌಟರವರು ಗುರುವಾಯನಕೆರೆಯಿಂದ ಪಿಲಿಗೂಡಿನ ತನಕ ರಸ್ತೆ ಅಗಲೀಕರಣ ಡಾಮರೀಕರಣ ಆಗಿದೆ. ಅದೇ ಸ್ಪರ್ ರಸ್ತೆ ಯೋಜನೆ ಉಪ್ಪಿನಂಗಡಿ ತನಕ ಕಾಮಗಾರಿ ಮಾಡಬಹುದಿತ್ತಲ್ವಾ ಎಂಬ ಪ್ರಶ್ನೆಗಳಿದ್ದರೆ ಇನ್ನುಳಿದ ರಸ್ತೆಯನ್ನು ರಾಜ್ಯ ಸರ್ಕಾರ ಮಾಡಬೇಕು ಅನ್ನುವ ವಾದವೂ ಇದೆ. ಇದು ಕೇಂದ್ರನೋ ರಾಜ್ಯವೋ ಅಂತ ಹೊಯಿಕೈ ನಡೆಸುತ್ತಾ ಇರುವುದು ಬಿಟ್ಟು ಜನರಿಗಾಗಿ ಯಾರಾದರೂ ಮಾಡಿ ಎಂದು ಸಾರ್ವಜನಿಕರು ಬೇಡಿ ಕೊಳ್ಳುತ್ತಿದ್ದಾರೆ.
ನಾನು ಅಧಿವೇಶನದಲ್ಲಿ ಮಾತಾಡಿ ಅನುದಾನ ಇಟ್ಟಿzನೆ: ಪಿಲಿಗೂಡು ಉಪ್ಪಿನಂಗಡಿ ರಸ್ತೆಗೆ ಎಸ್ಹೆಚ್ಡಿಪಿಯಲ್ಲಿ ಅನುದಾನವನ್ನು ಸರ್ಕಾರ ಕೇಳಿತ್ತು. ಎರಡು ವರ್ಷದ ಹಿಂದೆ ನಾನು ಕೊಟ್ಟಿzನೆ. ಈಗ ಅದರ ಡಿಪಿಆರ್ ಮಾಡಲು ಟೆಂಡರ್ ಮಾಡಿದ್ದಾರೆ. ನಾನು ಎರಡ್ಮೂರು ಸಲ ಅಧಿವೇಶನದಲ್ಲಿ ಮತ್ತು ಸಚಿವರೊಂದಿಗೆ ಮಾತನಾಡಿzನೆ. ಬೇಸಿಗೆ ಅಷ್ಟೊತ್ತಿಗೆ ಟೆಂಡರ್ ಆಗಿ ಕಾಮಗಾರಿ ಆಗಬಹುದು ಅನ್ನುವ ವಿಶ್ವಾಸವಿದೆ. ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ
ಬಸಳೆ ನೆಟ್ಟು ಡಾಂಬರು ಹಾಕಬೇಕಾಗಬಹುದಾ..?
ನಮ್ಮ ರಸ್ತೆಯಲ್ಲಿ ಹೋದರೆ ಮನುಷ್ಯ ಆಸ್ಪತ್ರೆಗೆ, ವಾಹನ ಗ್ಯಾರೇಜ್ಗೆ ಹೋಗಬೇಕು. ಕಳೆದ ಬಾರಿ ಶಿವಗಿರಿಯಲ್ಲಿ ಬಾಳೆಗಿಡ ಎಲ್ಲಾ ನೆಟ್ಟಿದ್ದೆವು. ಈ ಬಾರಿ ಬಸಳೆ ತರಕಾರಿ ನೆಟ್ಟು ಅದರಿಂದ ಬರುವ ಹಣದಿಂದ ಡಾಮರ್ ಮಾಡಬೇಕಾ ಗೊತ್ತಿಲ್ಲ. ಶಾಸಕ ಹರೀಶ್ ಪೂಂಜ ೧೩ ಕೋಟಿ, ರಕ್ಷಿತ್ ಶಿವರಾಂ ೧೩ ಕೋಟಿ ಅಂತೆಲ್ಲ ಮಾತನಾಡುವುದು ಕೇಳಿzನೆ. ಇಬ್ಬರದ್ದೂ ಸೇರಿ ೨೬ ಕೋಟಿ ಬರುತ್ತದೋ ಗೊತ್ತಿಲ್ಲ. ದಯವಿಟ್ಟು ಈ ರಸ್ತೆ ಸರಿಪಡಿಸಿ ಅಂತ ನಾನು ವಿನಂತಿಸುತ್ತೇನೆ. ಆನಂದ ಸ್ಥಳೀಯ ನಿವಾಸಿ ಶಿವಗಿರಿ ಕಲ್ಲೇರಿ
ನಾವು ಹೇಳಿಕೆ ನೀಡುವಂತಿಲ್ಲ: ಪಿಲಿಗೂಡು ಉಪ್ಪಿನಂಗಡಿ ರಸ್ತೆಯ ದುರವಸ್ಥೆಯ ಬಗ್ಗೆ ಅಧಿಕೃತ ಹೇಳಿಕೆಗಾಗಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಅವರನ್ನು ಸುದ್ದಿ ತಂಡ ಭೇಟಿಯಾದಾಗ ಅವರು ತಾನು ಪತ್ರಿಕೆಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ತಿಳಿಸಿದರು.
ಇಲ್ಲಿವರೆಗೆ ಏನಾಗಿದೆ?: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ೧೨ ಕೋಟಿ ರೂಪಾಯಿ ಅನುಮೋದನೆ ಆಗಿದೆ. ಡಿಪಿಆರ್ ಮಾಡಲು ಕ್ಯಾಡ್ ಸ್ಟೇಷನ್ ಮೈಸೂರಿನವರಿಗೆ ಗುತ್ತಿಗೆ ನೀಡಲಾಗಿದೆ. ಇದರ ಬಳಿಕ ಅಂದಾಜು ಪಟ್ಟಿ ಮಂಜೂರಾತಿ ಆಗಬೇಕಿದೆ. ಆ ನಂತರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅನುಷ್ಠಾನ ಘಟಕ ಬೆಂಗಳೂರುರವರು ಟೆಂಡರ್ ಕರೆದು ಗುತ್ತಿಗೆ ನಿಗದಿ ಪಡಿಸಿ ನಂತರ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಲೋಕೋಪಯೋಗಿ ಇಲಾಖಾ ಮೂಲಗಳು ತಿಳಿಸಿವೆ.
ಬಾಕ್ಸೈಟ್ ಲಾರಿಗಳ ಪಯಣ-ಲೋಕೋಪಯೋಗಿ ಇಲಾಖೆಯಿಂದ ಆರ್ಟಿಓಗೆ ಪತ್ರ: ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯಲ್ಲಿ ಟನ್ ಗಟ್ಟಲೆ ಮಣ್ಣು, ಬಾಕ್ಸೈಟ್ ತುಂಬಿರುವ ಲಾರಿಗಳು ಸಾಗುತ್ತವೆ. ಈ ರಸ್ತೆಯಲ್ಲಿ ಇಂತಹ ಬಹುದೊಡ್ಡ ಲೋಡ್ ಲಾರಿಗಳು ಸಾಗುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಆರ್ಟಿಓಗೆ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಸುದ್ದಿಗೆ ಲಭ್ಯವಾಗಿದೆ.









