







ಬೆಳ್ತಂಗಡಿ: ೨೦೧೭ರ ಎಪ್ರಿಲ್ ೮ರಂದು ರಾತ್ರಿ ೧೦.೧೫ರ ವೇಳೆಗೆ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿಗೆ ಕಾರು ಅಡ್ಡ ಇಟ್ಟು ಚಾಲಕನಿಗೆ ಚೂರಿಯಿಂದ ಇರಿದು ಹಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಬೆಂಗಳೂರು ನಿವಾಸಿ ಮೂರ್ತಿ ಯಾನೆ ಪಿಂಟು (೩೭) ಎಂಬಾತನನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ರೆಖ್ಯದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: ೬೫/೨೦೧೭ರಂತೆ ಕಲಂ, ೩೯೭, ೩೯೫ ಜೊತೆಗೆ ೩೪ ಐಪಿಸಿಯಡಿ ಕೇಸು ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಯಾಗಿದ್ದು ಸುಮಾರು ೫ ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಂಗಳೂರಿನ ಮೂರ್ತಿ ಯಾನೆ ಪಿಂಟು ಎಂಬಾತನ ಬಂಧನಕ್ಕೆ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳಾದ ವ್ರಷಭ ಮತ್ತು ಚರಣ್ ರಾಜ್ರವರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಮೂರ್ತಿ ಯಾನೆ ಪಿಂಟುನನ್ನು ಬಂಧಿಸಿದ್ದಾರೆ.


ಇಬ್ಬರ ಬಂಧನವಾಗಿತ್ತು: ೨೦೧೭ರ ಎಪ್ರಿಲ್ ೮ರಂದು ಬೆಳಿಗ್ಗೆ ಚಿಕ್ಕಮಗಳೂರಿನ ಅಂಬಲೆಯ ರಾಘವೇಂದ್ರ ಎಂಬವರು ಲಾರಿ(ಕೆ.ಎ.೪೦-ಎ-೨೦೭೬)ಯಲ್ಲಿ ಗೌರಿಬಿದನೂರಿನ ತೊಂಡೆಬಾವಿ ಎಂಬಲ್ಲಿಂದ ಸಿಮೆಂಟ್ ಲೋಡ್ ಮಾಡಿಕೊಂಡು ಉಡುಪಿ ಕಡೆಗೆ ಹೊರಟು ಅರಸೀಕೆರೆ ಮಾರ್ಗವಾಗಿ ಬರುತ್ತಾ ರಾತ್ರಿ ೧೦.೧೫ರ ವೇಳೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎಂಜಿರ ಎಂಬಲ್ಲಿಗೆ ತಲುಪಿ ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರಶಂಕೆ ಮಾಡಿ ಲಾರಿಗೆ ಹತ್ತುವ ಸಮಯ ಈ ಲಾರಿಗೆ ಒಂದು ಕಾರನ್ನು ಅಡ್ಡ ಇಟ್ಟು ಕಾರಿನಿಂದ ೫ ಜನರು ಇಳಿದಿದ್ದರು. ಅವರ ಪೈಕಿ ಮೂರು ಮಂದಿ ಲಾರಿಯ ಎಡಬದಿಯ ಬಾಗಿಲು ತೆಗೆದು ನುಗ್ಗಿದ್ದರು. ಇನ್ನಿಬ್ಬರು ಬಲಬದಿಯಿಂದ ಒಳಗೆ ನುಗ್ಗಿದ್ದರು. ಅವರ ಪೈಕಿ ಓರ್ವ ಚೂರಿ ತೋರಿಸಿ ಚಾಲಕ ರಾಘವೇಂದ್ರ ಅವರನ್ನು ಹೆದರಿಸಿ ನಿನ್ನ ಹತ್ತಿರ ಏನೆಲ್ಲಾ ವಸ್ತುಗಳಿಗೆ ಅದನ್ನೆಲ್ಲಾ ಕೊಡು ಎಂದು ಹೇಳಿದ್ದ. ಚಾಲಕ ರಾಘವೇಂದ್ರ ಅವರು ತನ್ನಲ್ಲಿ ಹಣ ಇಲ್ಲ ಎಂದು ತಿಳಿಸಿದಾಗ ಒಬ್ಬನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದ. ಮತ್ತೋರ್ವ ಕೈಯಲ್ಲಿದ್ದ ಚೂರಿಯಿಂದ ರಾಘವೇಂದ್ರ ಅವರ ಎಡಕಾಲಿನ ಮೊಣಗಂಟಿಗೆ, ಎದೆಯ ಎಡಭಾಗಕ್ಕೆ ಹಾಗೂ ಬಲಭುಜಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿದ್ದ. ಅಲ್ಲದೆ ರಾಘವೇಂದ್ರ ಅವರ ಚಡ್ಡಿಯ ಕಿಸೆಯಿಂದ ೧೭ ಸಾವಿರ ರೂ ನಗದು ಹಣ ಮತ್ತು ಕರ್ಣಾಟಕ ಬ್ಯಾಂಕ್ನ ಎಟಿಎಂ ಇದ್ದ ಪರ್ಸ್ ಮತ್ತು ೧೨ ಸಾವಿರ ರೂ ಬೆಲೆ ಬಾಳುವ ಮೊಬೈಲ್ ಫೋನ್ ಹಾಗೂ ಲಾರಿಯ ಕೀಯನ್ನು ಎಳೆದುಕೊಂಡು ಮಹೀಂದ್ರ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದರು.
ನಂತರ ರಾಘವೇಂದ್ರ ಅವರು ಲಾರಿಯ ಒಳಗೆ ನೋಡಿದಾಗ ದರೋಡೆಕೋರರಿಗೆ ಸೇರಿದ ನೋಕಿಯಾ ಕಂಪನಿಯ ಮೊಬೈಲ್ ಫೋನ್ ಸಿಕ್ಕಿತ್ತು. ಚಾಲಕ ರಾಘವೇಂದ್ರ ಅವರು ಆ ದಾರಿಯಲ್ಲಿ ಬಂದವರಲ್ಲಿ ಘಟನೆಯ ಕುರಿತು ತಿಳಿಸಿ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದರು.
ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ೨೦೧೭ರ ಎ.೯ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ೬೫/೨೦೧೭ರಂತೆ ಐಪಿಸಿ ೩೯೭ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳಾದ ಮಯಾಕೃಷ್ಣಮಾಂಗ ಎ, ಮಣಿ ಅಲಿಯಾಸ್ ಮಣಿಕಂಠ, ಮೂರ್ತಿ ಯಾನೆ ಪಿಂಟು ಪ್ರಭು, ಕುರಲ್ಕುಳ್ಳ ಮತ್ತು ನಂಜುಡ ವಿ. ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಠಾಣಾ ಪೊಲೀಸರು ಬೆಂಗಳೂರು ಮಾಗಡಿಯ ನಂಜುಂಡ ಮತ್ತು ಬೆಂಗಳೂರಿನ ಬನಶಂಕರಿ ನಿವಾಸಿ ಮಣಿ ಅಲಿಯಾಸ್ ಮಣಿಕಂಠ ಎಂಬಾತನನ್ನು ಬಂಧಿಸಿದ್ದರು. ಇದೀಗ ಮತ್ತೋರ್ವ ಆರೋಪಿ ಮೂರ್ತಿ ಯಾನೆ ಪಿಂಟುವನ್ನು ಬಂಧಿಸಿದ್ದಾರೆ.









