ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಸುಳ್ಯದ ಉಮ್ಮರ್ ಫಾರೂಕ್ ಬಂಧನ

0

ಬೆಳ್ತಂಗಡಿ: ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು(೩೪) ಅವರನ್ನು ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ೨೦೨೨ರ ಜುಲೈ ೨೬ರಂದು ರಾತ್ರಿ ೮ ಗಂಟೆ ವೇಳೆಗೆ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತಲೆ ಮರೆಸಿಕೊಂಡಿದ್ದ ಸುಳ್ಯದ ಉಮ್ಮರ್ ಫಾರೂಕ್ ಎಂ.ಆರ್. ಎಂಬಾತನನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೨೫ಕ್ಕೆ ಏರಿಕೆಯಾಗಿದೆ. ಕೇರಳದ ಕೊಚ್ಚಿಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಎನ್‌ಐಎ ಅಧಿಕಾರಿಗಳು ಉಮ್ಮರ್ ಫಾರೂಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಲ್ಲಿತ್ತು. ಆತನ ಮಾಹಿತಿ ನೀಡುವವರಿಗೆ ಎನ್‌ಐಎ ೪ ಲಕ್ಷ ರೂ. ಬಹುಮಾನ ಘೋಷಿಸಿತ್ತು. ಈ ಹಿಂದೆ ಎನ್‌ಐಎ ಅಧಿಕಾರಿಗಳು ಭಾರತೀಯ ದಂಡಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಉಮ್ಮರ್ ಫಾರೂಕ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖೆ ವೇಳೆ ಸುಳ್ಯದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಆತ ಇತರ ಆರೋಪಿಗಳೊಂದಿಗೆ ಭಾಗವಹಿಸಿದ್ದ ಎನ್ನುವುದು ಬೆಳಕಿಗೆ ಬಂದಿತ್ತು. ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಸ್ಥಳ ಗುರುತಿಸಲು ಹಾಗೂ ಬೆಳ್ಳಾರೆ ಗ್ರಾಮದಲ್ಲಿ ಪೂರ್ವ ಪರಿಶೀಲನೆ ನಡೆಸಲು ಸಹ ಹಂತಕರಿಗೆ ತನ್ನ ಮೋಟಾರ್ ಸೈಕಲ್ ಒದಗಿಸಲು ಉಮ್ಮರ್ ಫಾರೂಕ್ ಒಪ್ಪಿಕೊಂಡಿದ್ದ ಎಂದು ಎನ್‌ಐಎ ತಿಳಿಸಿದೆ. ಅಲ್ಲದೆ ಪ್ರಕರಣದ ಸಾಕ್ಷಿದಾರನನ್ನು ಹತ್ಯೆ ಮಾಡಲು ನಡೆದ ಯತ್ನದಲ್ಲಿಯೂ ಆತ ಇತರ ಆರೋಪಿಗಳೊಂದಿಗೆ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ೨೦೨೨ರ ಜು. ೨೬ರಂದು ಬೆಳ್ಳಾರೆಯಲ್ಲಿ ಅವರದೇ ಮಾಲಕತ್ವದ ಅಕ್ಷಯ ಚಿಕನ್ ಸೆಂಟರ್ ಎದುರು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ತನಿಖೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ರೂಪಿಸಿದ್ದ ಸಂಚಿನ ಭಾಗವಾಗಿ ಈ ಹತ್ಯೆ ನಡೆದಿರುವುದು ಬಹಿರಂಗವಾಗಿತ್ತು. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಎನ್‌ಐಎ ಶೋಧ ಕಾರ್ಯ ಮುಂದುವರಿಸಿದೆ.

ಪಡಂಗಡಿಯ ನೌಷಾದ್‌ನೊಂದಿಗೆ ಸಂಪರ್ಕ ಹೊಂದಿದ್ದ ಉಮ್ಮರ್ ಫಾರೂಕ್!: ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ನಡೆಸಿದ ಕೂಡಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಇತರ ಆರೋಪಿಗಳ ಜತೆ ಕಾಲ್ಕಿತ್ತಿದ್ದ ಸುಳ್ಯದ ಉಮ್ಮರ್ ಫಾರೂಕ್ ಅನಂತರ ಬೇರೆ ಬೇರೆ ರಾಜ್ಯಗಳಲ್ಲಿ ಅಡಗಿಕೊಂಡಿದ್ದ. ತನಿಖಾ ತಂಡಕ್ಕೆ ಸುಳಿವು ಸಿಗದಂತೆ ನೋಡಿಕೊಳ್ಳಲು ತನ್ನ ಚಹರೆ ಮತ್ತು ಹೆಸರನ್ನು ಬದಲಾಯಿಸಿಕೊಂಡಿದ್ದ. ನೇರವಾಗಿ ಆತ ಮನೆಯವರನ್ನೂ ಸಂಪರ್ಕಿಸುತ್ತಿರಲಿಲ್ಲ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಎನ್‌ಐಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಇತರ ಇಬ್ಬರು ಆರೋಪಿಗಳಾದ ಸೋಮವಾರಪೇಟೆಯ ಅಬ್ದುಲ್ ನಾಸಿರ್ ಪಿ. ಮತ್ತು ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಪೊಯ್ಯಗುಡ್ಡೆಯ ನೌಷದ್ ಜತೆ ಕೆಲವು ಸಮಯ ಇದ್ದ ಉಮ್ಮರ್ ಫಾರೂಕ್ ಬಳಿಕ ಅವರಿಂದಲೂ ದೂರವಾಗಿರಲು ಯತ್ನಿಸಿದ್ದ. ಕೆಲವು ಸಮಯ ಆಂಧ್ರಪ್ರದೇಶದಲ್ಲಿದ್ದ ಈ ಮೂವರು ಅಲ್ಲಿಂದ ಬೇರ್ಪಟ್ಟು ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದರು. ಕಳೆದ ಜು. ೧೧ರಂದು ಅಬ್ದುಲ್ ನಾಸಿರ್ ಮತ್ತು ನೌಷಾದ್ ಅವರನ್ನು ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ಬಂಧಿಸಲಾಗಿತ್ತು. ನೌಷದ್ ಜತೆ ಕೊಚ್ಚಿಗೆ ಬಂದಿದ್ದ ಫಾರೂಕ್ ಅಲ್ಲಿಯೂ ಪ್ರತ್ಯೇಕವಾಗಿ ಓಡಾಡುತ್ತಿದ್ದ. ಆದುದರಿಂದ ನೌಷದ್ ಬಂಧನದ ವೇಳೆ ಈತ ತನಿಖಾಧಿಕಾರಿಗಳ ಬಲೆಯಿಂದ ತಪ್ಪಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here