







ಬೆಳ್ತಂಗಡಿ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಹದ ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಣೇಶ್ ಎಂಬವರನ್ನು ಕೊಲೆ ಮಾಡಿದ ಬಳಿಕ ತಲೆ ಮರೆಸಿಕೊಂಡಿದ್ದ ಗ್ರಾಮ ಆಡಳಿತಾಧಿಕಾರಿ ಜಯಚಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಜೂ.೨೫ರಂದು ಬೆಳಿಗ್ಗೆ ಭಾರತಿನಗರದ ಶೆಟ್ಟಿಹಳ್ಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ ನಂತರ ನ್ಯಾಯಾಲಯಕ್ಕೆ ಜರುಪಡಿಸಲಾಗಿದೆ.
ಘಟನೆಯ ವಿವರ: ಜೂ.೨೨ರಂದು ರಾತ್ರಿ ವೇಳೆ ಗಣೇಶ್ ಅವರು ತನ್ನ ಮನೆಯ ಸಮೀಪದ ಅಂಗಡಿಯೊಂದರ ಬಳಿ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ಜಯಚಂದ್ರ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದನ್ನು ಗಮನಿಸಿದ ಗಣೇಶ್ ಅವರು ಸಾರ್ವಜನಿಕರನ್ನು ಬೈಯ್ಯದಂತೆ ಬುದ್ಧಿವಾದ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಜಯಚಂದ್ರ ಏಕಾಏಕಿ ಗಣೇಶ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಬಳಿಕ ಗ್ರಾಮಸ್ಥರು ಅಡ್ಡಬಂದು ಅವರಿಬ್ಬರನ್ನೂ ಸಮಾಧಾನಪಡಿಸಿ ಮನೆಗಳಿಗೆ ತೆರಳುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದರು. ಬಳಿಕ ಏನೂ ಆಗಿಲ್ಲವೆಂದಂತೆ ವರ್ತಿಸಿದ್ದ ಜಯಚಂದ್ರ ಅಲ್ಲಿ ಗ್ರಣೇಶ್ ಅವರನ್ನು ತಬ್ಬಿಕೊಂಡು ಅಲ್ಲಿಂದ ಮನೆಗೆ ಕರೆದುಕೊಂಡು ಹೋಗಿ ಮನೆಯ ಕೋಣೆಗೆ ಚಿಲಕ ಹಾಕಿ ಮರದ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಗಣೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ಕರೆ ತರಲಾಗಿತ್ತು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ್ ಅವರು ಜೂ.೨೩ರಂದು ಬೆಳಗಿನ ಜಾವ ಮೃತಪಟ್ಟಿದ್ದರು.


ಬಳಿಕ ಪೊಲೀಸರು ಜಯಚಂದ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ನಡೆದ ಬಳಿಕ ಜಯಚಂದ್ರ ತಲೆ ಮರೆಸಿಕೊಂಡಿದ್ದ. ನಂತರ ಮಂಡ್ಯ ಎಸ್.ಪಿ.ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅನಿಲ್ ಅವರ ತಂಡ ಕಾರ್ಯಾಚರಣೆ ನಡೆಸಿ ಜಯಚಂದ್ರನನ್ನು ಬಂಧಿಸಿದೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿಯಲ್ಲಿ ಅಮಾನತುಗೊಂಡಿದ್ದ ಜಯಚಂದ್ರನ ವಿರುದ್ಧ ಸುಳ್ಯದಲ್ಲಿಯೂ ಪ್ರಕರಣ ದಾಖಲಾಗಿತ್ತು: ಬೆಳ್ತಂಗಡಿ ತಾಲೂಕಿನ ಬಾರ್ಯ, ತೆಕ್ಕಾರು, ಪುತ್ತಿಲದಲ್ಲಿ ಗ್ರಾಮ ಕರಣಿಕನಾಗಿ ಕಾರ್ಯ ನಿರ್ವಹಿಸಿದ್ದ ಜಯಚಂದ್ರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಅಕ್ರಮ-ಸಕ್ರಮದ ವಿಷಯ ನಿರ್ವಾಹಕರಾಗಿಯೂ ಕರ್ತವ್ಯ ನಿರ್ವಹಿಸಿದ್ದ. ಈ ವೇಳೆ ಅಕ್ರಮ ಸಕ್ರಮದಲ್ಲಿ ನಕಲಿ ಸಹಿ ಹಾಗೂ ನಕಲಿ ಪತ್ರ ಮಾಡಿದ ಆರೋಪದಡಿ ಆತನನ್ನು ಅಮಾನತುಗೊಳಿಸಿತ್ತು. ಎರಡು ವರ್ಷದ ಹಿಂದೆ ಪುತ್ತೂರಿಗೆ ವರ್ಗಾವಣೆಗೊಂಡಿದ್ದ ಜಯಚಂದ್ರ ಸುಳ್ಯದಲ್ಲಿ ಗ್ರಾಮಕರಣಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಾನಮತ್ತನಾಗಿ ಜೊತೆಗಿದ್ದಾತನಿಗೆ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ್ದ.
ಈ ವಿಚಾರಕ್ಕೆ ಸಂಬಂಧಿಸಿ ಜಯಚಂದ್ರನ ವಿರುದ್ಧ ಸುಳ್ಯದಲ್ಲಿ ಅಟ್ರಾಸಿಟಿ ಕೇಸು ದಾಖಲಾಗಿತ್ತು. ಎರಡು ವರ್ಷದ ಹಿಂದೆ ಪುತ್ತೂರಿಗೆ ವರ್ಗಾವಣೆಗೊಂಡಿದ್ದ ಜಯಚಂದ್ರ ಕೆಮ್ಮಿಂಜೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿದ್ದ. ಮಂಡ್ಯದಲ್ಲಿ ಕೊಲೆ ನಡೆಯುವ ಎರಡು ದಿನಗಳ ಹಿಂದೆಯೇ ಆತ ಕರ್ತವ್ಯಕ್ಕೆ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಅನಧಿಕೃತ ಗೈರು ಕುರಿತು ಪುತ್ತೂರು ಹೋಬಳಿಯ ಕಂದಾಯ ನಿರೀಕ್ಷಕ ಚಂದ್ರನಾಯ್ಕ ಅವರು ತಹಶೀಲ್ದಾರ್ಗೆ ವರದಿ ನೀಡಿದ್ದಾರೆ.









