ಅಶ್ಲೀಲತೆ ಪ್ರಸಾರ, ವಂಚನೆ, ಬೆದರಿಕೆ ಪ್ರಕರಣಗಳಿಗೆ ತಕ್ಷಣ ಎಫ್‌ಐಆರ್ ಕಡ್ಡಾಯ: ಪೊಲೀಸ್ ಅಧಿಕಾರಿಗಳಿಗೆ ಡಿಜಿಪಿ ನಿರ್ದೇಶನ

0

ಬೆಳ್ತಂಗಡಿ: ಯಾವುದೇ ವ್ಯಕ್ತಿಯ ಖಾಸಗಿ/ಆಪ್ತ ಚಿತ್ರಗಳು ಸೇರಿ ಪ್ರತೀಕಾರಾತ್ಮಕ ಅಶ್ಲೀಲತೆ ಪ್ರಸಾರ, ವಂಚನೆ ಹಾಗೂ ಬೆದರಿಕೆಯೊಡ್ಡುವಿಕೆ ಮುಂತಾದ ಪ್ರಕರಣಗಳ ಕುರಿತು ದೂರು ಬಂದ ತಕ್ಷಣ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ|ಎಂ.ಎ.ಸಲೀಂ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯ ಮೇರೆಗೆ ಆದೇಶ ಹೊರಡಿಸಿರುವ ಡಿಜಿಪಿ ಅವರು ಯಾವುದೇ ವ್ಯಕ್ತಿಯ ಖಾಸಗಿ/ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಅವರ ಅನುಮತಿಯಿಲ್ಲದೆ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗುವ ದೂರುಗಳನ್ನು ದಾಖಲಿಸುವಲ್ಲಿ ಕೆಲವೆಡೆ ನಿರಾಕರಣೆ ಮಾಡುತ್ತಿರುವುದು ಅಥವಾ ವಿಳಂಬವಾಗಿ ದಾಖಲಿಸುತ್ತಿರುವುದು ಗಮನಕ್ಕೆ ಬಂದಿದೆ.

ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆ ಅಲ್ಲ. ಭಾರತೀಯ ನ್ಯಾಯ ಸಂಹಿತೆ ೨೦೨೩ರ ಸೆಕ್ಷನ್ ೭೭ರ ವಿವರಣೆ ೨ ಪ್ರಕಾರ ಪೀಡಿತರು ಚಿತ್ರ/ವೀಡಿಯೊ ಸೆರೆ ಹಿಡಿಯಲು ಒಪ್ಪಿಗೆ ನೀಡಿದ್ದರೂ ಮೂರನೇ ವ್ಯಕ್ತಿಗಳಿಗೆ ಹಂಚಲು ಒಪ್ಪಿಗೆ ನೀಡದೇ ಇದ್ದು ಚಿತ್ರ/ವೀಡಿಯೊ ಹಂಚಿಕೆಯಾಗಿದ್ದರೆ ಅದು ಅಪರಾಧವಾಗುತ್ತದೆ ಎಂದು ಡಾ|ಎಂ.ಎ.ಸಲೀಂ ತಿಳಿಸಿದ್ದಾರೆ. ಕೆಲವೊಮ್ಮೆ ಸಂತ್ರಸ್ತರು ಮೊದಲು ಆ ಚಿತ್ರ/ವಿಡಿಯೋಗಳನ್ನು ಚಿತ್ರೀಕರಿಸಲು ಒಪ್ಪಿಗೆ ನೀಡಿದ್ದರು ಎಂಬ ಕಾರಣದ ಆಧಾರದ ಮೇಲೆ ದೂರು ಸ್ವೀಕರಿಸದಿರುವುದು ಕಂಡು ಬಂದಿದೆ. ಆದರೆ ನಿಯಮಾನುಸಾರ ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಗೂ ಮತ್ತು ಇತರರಿಗೆ ಹಂಚಿಕೆ/ಪ್ರಸಾರಕ್ಕೆ ನೀಡುವ ಒಪ್ಪಿಗೆಗೂ ವ್ಯತ್ಯಾಸವಿದೆ.

ಚಿತ್ರೀಕರಣಕ್ಕೆ ಒಪ್ಪಿಗೆ ಇದ್ದರೂ ಹಂಚಿಕೆಗೆ ಒಪ್ಪಿಗೆ ಇಲ್ಲದೆ ಪ್ರಚಾರ ಪಡಿಸಿದರೆ ಅದು ಅಪರಾಧವಾಗುತ್ತದೆ. ಏಕೆಂದರೆ ದೇಹದ ಗೌಪ್ಯತೆ, ಮಾಹಿತಿಯ ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ಪ್ರಸಾರವನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ ೨೧ರ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಮಾನ್ಯತೆ ನೀಡಿದೆ. ಒಬ್ಬ ಮಹಿಳೆ ಖಾಸಗಿ ಕ್ರಿಯೆಯಲ್ಲಿ ತೊಡಗಿರುವಾಗ ಸಾಮಾನ್ಯವಾಗಿ ನೋಡಬಾರದೆಂಬ ನಿರೀಕ್ಷೆಯ ಪರಿಸ್ಥಿತಿಯಲ್ಲಿ ಆಕೆಯನ್ನು ನೋಡುವುದು, ಚಿತ್ರ ಸೆರೆ ಹಿಡಿಯುವುದು ಅಥವಾ ಅಂತಹ ಚಿತ್ರಗಳನ್ನು ಪ್ರಸಾರ ಮಾಡುವುದು ಅಪರಾಧವಾಗುತ್ತದೆ. ಈ ಅಪರಾಧಗಳಿಗೆ ೧ರಿಂದ ೭ ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳ ಚಿತ್ರವನ್ನು ಅವರ ಅನುಮತಿಯಿಲ್ಲದೆ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ಗೋಪ್ಯತೆಯನ್ನು ಉಲ್ಲಂಸುವ ಸಂದರ್ಭಗಳಲ್ಲಿ ನಡೆದರೆ ಅದು ಅಪರಾಧವಾಗುತ್ತದೆ. ಇದಕ್ಕೆ ಗರಿಷ್ಠ ೩ ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ೨ ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಇಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಕಾಮ ಪ್ರಚೋದಕ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಿದ್ದು ಗರಿಷ್ಠ ೩ ವರ್ಷಗಳ ಶಿಕ್ಷೆ ಹಾಗೂ ೫ ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಪುನರಾವರ್ತಿತ ಅಪರಾಧಕ್ಕೆ ಗರಿಷ್ಠ ೫ ವರ್ಷಗಳ ಶಿಕ್ಷೆ ಹಾಗೂ ೧೦ ಲಕ್ಷ ರೂ.ವರೆಗೆ ದಂಡ ಹಾಕಲಾಗುತ್ತದೆ. ಲೈಂಗಿಕ ಕ್ರಿಯೆ ಅಥವಾ ಲೈಂಗಿಕವಾಗಿ ಸ್ಪಷ್ಟ ವಿಷಯ ಹೊಂದಿರುವ ವಸ್ತುಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಾಗಿದ್ದು ಗರಿಷ್ಠ ೫ರಿಂದ ೭ ವರ್ಷಗಳ ಶಿಕ್ಷೆ ಹಾಗೂ ೧೦ ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಡಾ| ಎಂ.ಎ. ಸಲೀಂ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳೀಯ ವ್ಯಾಪ್ತಿಯ ಹೊರಗಿನ ಅಪರಾಧಕ್ಕೆ ಝೀರೋ ಎಫ್‌ಐಆರ್‌ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಪ್ರಕಾರ ಝೀರೋ ಎಫ್‌ಐಆರ್ ದಾಖಲಿಸಿ ತಕ್ಷಣ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ಐಟಿ ಕಾಯ್ದೆ ಮತ್ತು ಐಟಿ ನಿಯಮಗಳು ೨೦೨೧ರ ಅನ್ವಯ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಿ ಅಪರಾಧಕರ ವಿಷಯವನ್ನು ತೆಗೆದುಹಾಕಲು/ತಡೆ ಹಿಡಿಯುವ ತ್ವರಿತ ಕ್ರಮ ಕೈಗೊಳ್ಳಬೇಕು. ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ಎಫ್‌ಐಆರ್ ನೋಂದಣಿಯನ್ನು ನಿರಾಕರಿಸ ಕೂಡದು ಅಥವಾ ಮುಂದೂಡಬಾರದು. ಆ ಒಪ್ಪಿಗೆಯು ನಂತರದ ಅನುಮತಿಯಿಲ್ಲದ ಪ್ರಸಾರಕ್ಕೆ ರಕ್ಷಣೆಯಾಗುವುದಿಲ್ಲ. ಆಪ್ತ ವಿಷಯಗಳನ್ನು ಬಳಸಿ ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ/ಸುಲಿಗೆ ನಡೆಸಿದರೆ ಬಿಎನ್‌ಎಸ್ ೨೦೨೩ರ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ವಿಧಿಗಳನ್ನು ಐಟಿ ಕಾಯ್ದೆಯ ಜೊತೆಗೆ ಅಳವಡಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ನೋಂದಣಿ ಮಾಡದಿರುವುದು ಅಥವಾ ಪೂರ್ವಾನುಮತಿ ಎಂಬ ತಪ್ಪು ಕಾರಣದಿಂದ ವಿಳಂಬ ಮಾಡುವುದು ಕಂಡು ಬಂದಲ್ಲಿ ಅಂತಹ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here