






ಬೆಳ್ತಂಗಡಿ: ಮೂರು ವರ್ಷದ ಹಿಂದೆ ಇಳಂತಿಲ ಗ್ರಾಮದ ರಿಫಾಯಿನಗರದಲ್ಲಿ ನಡೆದಿದ್ದ ೧೦ ಲಕ್ಷ ರೂ ದರೋಡೆ ಪ್ರಕರಣದ ಇಬ್ಬರು ಆರೋಪಿಗಳಿಗೆ ೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೨೦ ಸಾವಿರ ರೂ.ದಂಡ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ತೀರ್ಪು ನೀಡಿದೆ.


ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ರಿಫಾಯಿನಗರ ಸಮೀಪದ ಕಡವಿನಬಾಗಿಲು ನಿವಾಸಿ ರಾಝೀಮ್ ಹಾಗೂ ಕೊಕ್ಕಡ ನಿವಾಸಿ ಮುಸ್ತಫಾ ಶಿಕ್ಷೆಗೊಳಗಾದ ಅಪರಾಧಿಗಳು. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ. ಎಂಬವರು ತಮ್ಮ ಮಗಳ ಮದುವೆಗಾಗಿ ಸಾಲ ರೂಪದಲ್ಲಿ ಸಂಗ್ರಹಿಸಿದ್ದ ೧೦ ಲಕ್ಷ ರೂಪಾಯಿಯನ್ನು ೨೦೨೩ರ ಮಾರ್ಚ್ ೨೦ರಂದು ಮಧ್ಯಾಹ್ನ ೩ ಗಂಟೆಗೆ ಇಳಂತಿಲ ಗ್ರಾಮದ ರಿಫಾಯಿನಗರ ಬಳಿಯ ಮೇದರಬೆಟ್ಟು ಎಂಬಲ್ಲಿರುವ ಪ್ರಯಾಣಿಕರ ತಂಗುದಾಣ ಮತ್ತು ಗೂಡಂಗಡಿ ಮಧ್ಯೆ ಇರುವ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ತಮ್ಮ ಸ್ಕೂಟಿ(ಕೆಎ ೧೯. ಇಎಲ್ ೬೮೭೬)ಯ ಸೀಟಿನಡಿಯಲ್ಲಿ ಇರುವ ಬಾಕ್ಸ್ನಲ್ಲಿ ಇಡುತ್ತಿದ್ದಂತೆಯೇ ಹಿಂದಿನಿಂದ ಬಂದ ರಾಝೀಮ್ ಎಂಬಾತ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಆತನ ಯಮಹಾ ಎಫ್ಝಡ್ ಬೈಕ್(ಕೆ.ಎ. ೨೦. ಎಕ್ಸ್ ೭೦೦೧)ನಲ್ಲಿ ಕೊಕ್ಕಡದ ಮುಸ್ತಫಾ ಎಂಬಾತನ ಮನೆಗೆ ಹೋಗಿ ದರೋಡೆ ಮಾಡಿದ ವಿಚಾರ ತಿಳಿಸಿ ರೂ.೧೦ ಲಕ್ಷದಲ್ಲಿ ರೂ.೯ ಲಕ್ಷವನ್ನು ಮುಸ್ತಫಾನಿಗೆ ನೀಡಿ ಆ ದಿನ ಅಲ್ಲೇ ವಾಸ್ತವ್ಯ ಹೂಡಿದ್ದ. ಮರು ದಿನ ರಾಝೀಮ್ ತನ್ನ ಮನೆಗೆ ಬಂದು ರೂ. ೯೦ ಸಾವಿರವನ್ನು ಮನೆಯಲ್ಲಿ ಇರಿಸಿ ೧೦ ಸಾವಿರ ರೂಪಾಯಿ ಖರ್ಚು ಮಾಡಿದ್ದ. ಘಟನೆಗೆ ಸಂಬಂಧಿಸಿ ತನಿಖೆ ಕೈಗೊಂಡಿದ್ದ ಉಪ್ಪಿನಂಗಡಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬಳಿಕ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಆಗಿನ ಪೊಲೀಸ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಳ್ತಂಗಡಿಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ದರೋಡೆ ನಡೆಸಿದ ರಾಜೀಮ್ ಮತ್ತು ಸಹಕರಿಸಿದ ಮುಸ್ತಾಫ ದೋಷಿಗಳಿಂದು ತೀರ್ಮಾನಿಸಿ ಇಬ್ಬರಿಗೂ ತಲಾ ೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ೨೦ ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ರೂ. ೧೦ ಸಾವಿರವನ್ನು ದೂರುದಾರ ಮಹಮ್ಮದ್ ಅವರಿಗೆ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.









