






ಬೆಳ್ತಂಗಡಿ: ಉದ್ಯಮಿ ಸುದೀಪ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆತ್ಮಹತ್ಯೆಗೆ ಆತನ ಪತ್ನಿ ಸೌಮ್ಯ ಶೆಟ್ಟಿ ಅವರ ದುಷ್ಪ್ರೇರಣೆ ನೀಡಿರುವುದು ಸಾಬೀತಾಗಿದೆ ಎಂದು ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಲಾಗಿದೆ.
ಘಟನೆಯ ವಿವರ: ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯಾಗಿದ್ದು ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ಸುದೀಪ್ ಶೆಟ್ಟಿ ಮತ್ತು ಕಾರ್ಕಳದ ಬಂಗ್ಲೆಗುಡ್ಡೆಯ ಸೌಮ್ಯ ಶೆಟ್ಟಿ ಅವರು ಕಳೆದ ಫೆಬ್ರವರಿ ೧೭ರಂದು ಪುತ್ತೂರಿನ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿತ ವಿವಾಹವಾಗಿದ್ದರು. ಮಾರ್ಚ್ ೧೯ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ತಿಂಗಳೊಳಗೆ ಮಾ. ೨೨ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಾ. ೨೯ರಂದು ಸುದೀಪ್ ಸಾವನ್ನಪ್ಪಿದ್ದರು. ಈ ಘಟನೆ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಸುದೀಪ್ ತಂದೆ ದಾಮೋದರ್ ಶೆಟ್ಟಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಮೇರೆಗೆ ತನಿಖೆ ನಡೆದಿತ್ತು. ಬಳಿಕ ನಾಟಕ ಕಲಾವಿದೆಯೂ ಆಗಿರುವ ಮೇಕಪ್ ಆರ್ಟಿಸ್ಟ್ ಸೌಮ್ಯ ಶೆಟ್ಟಿಯನ್ನು ಬಂಧಿಸಲಾಗಿತ್ತು. ಜೂ. ೯ರಂದು ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ದೋಷರೋಪ ಪಟ್ಟಿ ಸಲ್ಲಿಸಿದ್ದು ಸೌಮ್ಯ ಶೆಟ್ಟಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ವರದಿ ನೀಡಿದ್ದಾರೆ. ಸುದೀಪ್ ಶೆಟ್ಟಿ ಅವರ ತಂದೆ ದಾಮೋದರ್ ಅವರು ತಮ್ಮ ಸೊಸೆ ಸೌಮ್ಯ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಸೌಮ್ಯ ತನ್ನ ಮಗನಿಗೆ ವಿಷವುಣಿಸಿ ಕೊಲೆಗೈದಿದ್ದಾಳೆ. ಆತ ವಿಷ ಸೇವಿಸಿದ ವಿಷಯವನ್ನು ಏಳು ದಿನಗಳ ಕಾಲ ಮುಚ್ಚಿಟ್ಟು ಸರಿಯಾದ ಚಿಕಿತ್ಸೆ ಸಿಗದಂತೆ ಮಾಡಿದ್ದಾಳೆ ಎಂದು ದೂರಿನಲ್ಲಿ ದಾಮೋದರ್ ಉಲ್ಲೇಖಿಸಿದ್ದರು. ಅಲ್ಲದೆ ಸೌಮ್ಯ ಈ ಹಿಂದೆಯೂ ಹಲವರಿಗೆ ವಂಚಿಸಿರುವ ಕುರಿತು ಪೊಲೀಸರಿಗೆ ತಿಳಿಸಿದ್ದರು.
ಸೌಮ್ಯ ಮಾನಸಿಕ ಕಿರುಕುಳ ನೀಡಿ ಸುದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು. ತನಿಖೆ ಕೈಗೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು. ಎ. ೧೧ರಂದು ಸೌಮ್ಯಳನ್ನು ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು. ಆಕೆಗೆ ಉಡುಪಿ ಸೆಷೆನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಹೀಗಾಗಿ ಆಕೆಯನ್ನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ.
ಪತಿಗೆ ಹಿಂಸೆ: ಮಾ. ೧೭ರಂದು ಸಂಬಂಧಿಕರ ಮನೆಯ ಪೂಜಾ ಕಾರ್ಯಕ್ರಮಕ್ಕೆ ನನ್ನ ಪತ್ನಿ ಹಾಗೂ ಮಗ ಸುದೀಪ್ ಶೆಟ್ಟಿಯೊಂದಿಗೆ ಸೌಮ್ಯ ಶೆಟ್ಟಿ ಬೆಳ್ತಂಗಡಿಯ ಲಾಯಿಲಕ್ಕೆ ಕಾರಿನಲ್ಲಿ ತೆರಳಿದ್ದಳು. ಬೆಳ್ತಂಗಡಿ ತಲುಪುತ್ತಿದ್ದಂತೆ ಸುದೀಪ್ ಶೆಟ್ಟಿ ಜೊತೆ ಜಗಳಕ್ಕಿಳಿದ ಸೌಮ್ಯ ನನ್ನ ಪತ್ನಿಗೂ ಬೈದಿದ್ದಾಳೆ. ಆಕೆಯನ್ನು ಸೌಮ್ಯ ಶೆಟ್ಟಿ ಕಾರಿನಿಂದ ಇಳಿಸಿದ್ದಾಳೆ ಎಂದು ಸುದೀಪ್ ತಂದೆ ದಾಮೋದರ್ ದೂರಿನಲ್ಲಿ ತಿಳಿಸಿದ್ದರು. ಸೌಮ್ಯ ಶೆಟ್ಟಿಗೆ ಈ ಹಿಂದೆ ಎರಡು ಮದುವೆಯಾಗಿದ್ದು ಆ ಬಳಿಕ ಮತ್ತೊಬ್ಬನ ಜೊತೆಗಿದ್ದಳು. ಇದೆಲ್ಲ ತಿಳಿಯದೇ ಸುದೀಪ್ ಮದುವೆಯಾಗಿದ್ದ. ಈ ವಿಚಾರ ನಮಗೆ ಗೊತ್ತಿರಲಿಲ್ಲ. ಫೆ. ೬ರಂದು ಬಂಗಾಡಿ ಸಮೀಪದ ಕುತ್ರೊಟ್ಟು ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಮದುವೆ ನೋಂದಾವಣೆ ಸಂದರ್ಭ ಉಲ್ಲೇಖಿಸಿದ್ದಳು ಎಂದು ತಿಳಿಸಿದ್ದ ದಾಮೋದರ್ ಅವರು ಸುದೀಪ್‌ಗೆ ಸೌಮ್ಯ ಶೆಟ್ಟಿ ಸಾಕಷ್ಟು ಹಿಂಸೆ ನೀಡಿದ್ದಾಳೆ ಎಂದು ಆರೋಪಿಸಿದ್ದರು. ಇತ್ತೀಚೆಗಷ್ಟೇ ಪೊಲೀಸರು ಸೌಮ್ಯ ಶೆಟ್ಟಿಗೆ ಸೇರಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದರು. ಇದೀಗ ನ್ಯಾಯಾಲಯಕ್ಕೆ ಸೌಮ್ಯ ಶೆಟ್ಟಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.








