









ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ೧೩ ವರ್ಷಗಳ ಹಿಂದೆ ನಡೆದಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳಿಗೆ ಸಾಕ್ಷಿ ಸಂರಕ್ಷಣಾ ಕಾಯಿದೆಯಡಿ ರಕ್ಷಣೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಪಾಂಗಳ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಏ. ೨೯ರಂದು ನಡೆದ ವೇಳೆ ನ್ಯಾಯಮೂರ್ತಿಗಳು ಈ ಆದೇಶ ನೀಡಿದ್ದಾರೆ. ಸೌಜನ್ಯ ಪ್ರಕಾರಣದ ಎಲ್ಲ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕು, ಮರು ತನಿಖೆ ಕುರಿತ ತಮ್ಮ ನಿಲುವನ್ನು ಸಿಬಿಐ ಮತ್ತು ರಾಜ್ಯ ಸರ್ಕಾರ ೨ ವಾರದಲ್ಲಿ ಲಿಖಿತ ರೂಪದಲ್ಲಿ ತಿಳಿಸಬೇಕು, ಮರು ತನಿಖೆಯನ್ನು ಯಾವ ತನಿಖಾ ಸಂಸ್ಥೆ ನಡೆಸಬಹುದು ಎನ್ನುವುದನ್ನು ತಿಳಿಸಬೇಕು. ಇಂತಹ ಗಂಭೀರ ಪ್ರಕರಣದಲ್ಲಿ ರಾಜ್ಯ ಸರಕಾರ ಇಷ್ಟೊಂದು ನಿರಾಸಕ್ತಿ ತೋರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಇದೇ ವೇಳೆ ಹೇಳಿದ್ದಾರೆ. ಪ್ರಮುಖ ಸಾಕ್ಷಿ ಮತ್ತು ದಾಖಲೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಕುಸುಮಾವತಿ ಪರ ವಕೀಲರಾದ ಶೋಭಾ ಗುಪ್ತ, ಶೇಖರ ದೇವಸ ಮತ್ತು ಅಶುತೋಷ ದುಬೆ ಅವರು ಸಲ್ಲಿಸಿದ್ದಾರೆ. ಈ ವಿಚಾರಣೆ ನಡೆಯುವ ವೇಳೆ ಸಂತೋಷ ರಾವ್ ಪರ ಹಿರಿಯ ವಕೀಲ ಗುರುರಾಜ್ ಸುಪ್ರೀಂಕೋರ್ಟ್‌ನಲ್ಲಿ ಹಾಜರಿದ್ದರು. ಜುಲೈ ೧೪ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.








