ಮಹೇಶ್ ಶೆಟ್ಟಿ ಗಡಿಪಾರು ವಿಚಾರ: ಏ.೩೦ರಂದು ಹೈಕೋರ್ಟ್ ಆದೇಶ

0

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ೩ನೇ ಬಾರಿ ಹೊರಡಿಸಿರುವ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಏ.೩೦ರಂದು ತನ್ನ ಆದೇಶ ಪ್ರಕಟಿಸಲಿದೆ. ತನ್ನನ್ನು ಗಡಿಪಾರು ಮಾಡಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ(೫೮)ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಏ.೨೪ರಂದು ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರು ವಾದ ಪ್ರತಿವಾದ ಆಲಿಸಿ ಏ.೨೯ರಂದು ಈ ಕುರಿತು ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು. ಆದರೆ ಏ.೨೯ರಂದು ಈ ಕುರಿತು ಯಾವುದೇ ಆದೇಶ ಪ್ರಕಟಿಸದ ನ್ಯಾಯಮೂರ್ತಿಗಳು ಏ.೩೦ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಪ್ರಥಮ ಬಾರಿ ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರು ಮಹೇಶ್ ಶೆಟ್ಟಿ ಅವರನ್ನು ೧೨ ತಿಂಗಳು ಮತ್ತು ೨ನೇ ಬಾರಿ ೯ ತಿಂಗಳು ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಎರಡೂ ಆದೇಶಕ್ಕೂ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಉಚ್ಛ ನ್ಯಾಯಾಲಯದ ಮಾರ್ಗಸೂಚಿಯಂತೆ ಮೂರನೇ ಬಾರಿ ಪರಿಷ್ಕೃತ ಆದೇಶ ಹೊರಡಿಸಿದ್ದ ಸಹಾಯಕ ಆಯುಕ್ತರು ಮಹೇಶ್ ಶೆಟ್ಟಿ ಅವರನ್ನು ೬ ತಿಂಗಳು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು.

ವಾದ-ಪ್ರತಿವಾದ ಮುಕ್ತಾಯ: ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಪರ ವಾದ ಮಂಡಿಸಿದ್ದ ವಕೀಲರಾದ ಎಂ.ಆರ್.ಬಾಲಕೃಷ್ಣ ಸುಳ್ಯ ಮತ್ತು ಮತ್ತು ಮೋಹಿತ್ ಕುಮಾರ್ ಪುತ್ತೂರು ಅವರು ಪೊಲೀಸರು ಉಲ್ಲೇಖಿಸಿರುವ ೨೬ ಪ್ರಕರಣಗಳಲ್ಲಿ ೧೩ ಪ್ರಕರಣಗಳಲ್ಲಿ ಮಹೇಶ್ ಶೆಟ್ಟಿ ಅವರು ಈಗಾಗಲೇ ದೋಷಮುಕ್ತಗೊಂಡಿದ್ದಾರೆ. ಎರಡು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಉಳಿದ ೧೦ ಪ್ರಕರಣಗಳು ಕೇವಲ ತನಿಖೆ ಮತ್ತು ವಿಚಾರಣಾ ಹಂತದಲ್ಲಿದೆ. ಅವೆಲ್ಲವೂ ಜಾಮೀನು ನೀಡಬಹುದಾದ ಸ್ಥರೂಪದ್ದಾಗಿದೆ. ಮಹೇಶ್ ಶೆಟ್ಟಿ ವಿರುದ್ಧ ದಾಖಲಾದ ಎಲ್ಲ ಹೊಸ ಕ್ರಿಮಿನಲ್ ಪ್ರಕರಣಗಳು ಗಡಿಪಾರು ಪ್ರಸ್ತಾವನೆಗೆ ಸಂಬಂಧಿಸಿದಂತೆ ಪೊಲೀಸರು ವರದಿ ಸಲ್ಲಿಸಿದ ನಂತರ ದಾಖಲಾಗಿವೆ. ಉಪ ವಿಭಾಗಾಧಿಕಾರಿಗಳ ಮುಂದೆ ಮೊದಲ ಗಡಿಪಾರು ಪ್ರಕ್ರಿಯೆ ನಡೆಯುತ್ತಿದ್ದಾಗ ೫ ಪ್ರಕರಣಗಳನ್ನು ಉzಶಪೂರ್ವಕವಾಗಿ ದಾಖಲಿಸಲಾಗಿದೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು. ಈ ವೇಳೆ ನ್ಯಾಯಮೂರ್ತಿಯವರು ಅವರ ಮೇಲೇಯೇ ಏಕೆ ಕೇಸ್ ಹಾಕುತ್ತಿದ್ದಾರೆ. ಬೇರೆ ಯಾರೂ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ತಿಮರೋಡಿ ಪರ ವಕೀಲರು ಮಹೇಶ್ ಶೆಟ್ಟಿ ಒಬ್ಬ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು. ಸೌಜನ್ಯಾ ಕೊಲೆ ಪ್ರಕರಣದ ಹೋರಾಟದ ನೇತೃತ್ವ ವಹಿಸಿದ್ದಾರೆ. ಅದೇ ಕಾರಣಕ್ಕೆ ಹಲವಾರು ಪ್ರಕರಣಗಳನ್ನು ದಾಖಲಿಸಿ ಈಗ ಗಡಿಪಾರು ಆದೇಶ ಹೊರಡಿಸಿದ್ದಾರೆ. ಈ ಆದೇಶ ಹೊರಡಿಸುವಾಗ ಎ.ಸಿ. ಅವರು ಈ ಐದು ಹೊಸ ಪ್ರಕರಣಗಳನ್ನು ಪರಿಗಣಿಸಬಾರದಿತ್ತು.

ಇದಲ್ಲದೆ ಮಹೇಶ್ ಶೆಟ್ಟಿ ಅವರು ಖುಲಾಸೆಗೊಂಡ ೧೩ ಪ್ರಕರಣಗಳು, ಬಿ ರಿಪೋರ್ಟ್ ಸಲ್ಲಿಕೆಯಾಗಿರುವ ೨ ಪ್ರಕರಣಗಳು ಹಾಗೂ ೫೦ ರೂ. ದಂಡ ವಿಧಿಸಲಾಗಿರುವ ಒಂದು ಪ್ರಕರಣವಿದೆ. ಇಂಥ ಅಸಂಬದ್ಧ ದಾಖಲೆಗಳ ಆಧಾರದ ಮೇಲೆ ಎ.ಸಿ. ಅವರು ಗಡಿಪಾರು ಆದೇಶ ಹೊರಡಿಸಿದ್ದಾರೆ ಎಂದು ವಾದ ಮಂಡಿಸಿದ್ದರು. ಇದಕ್ಕೆ ಆಕ್ಷೇಪ ಸೂಚಿಸಿದ್ದ ಸರಕಾರದ ಪರ ವಕೀಲರು ಸೌಜನ್ಯ ಪ್ರಕರಣ ನಡೆದಿರುವುದು ೨೦೧೨ರಲ್ಲಿ. ಆದರೆ ೧೯೯೭ರಿಂದಲೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ್ದರು. ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಪೀಠ ಏ.೨೯ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಅಲ್ಲಿಯವರೆಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಗಡಿಪಾರು ಆದೇಶ ಜಾರಿಗೊಳಿಸಿದಂತೆ ಈ ಹಿಂದೆ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತ್ತು. ಇದೀಗ ನ್ಯಾಯಪೀಠ ಏ.೩೦ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ಬುರುಡೆ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದ ವಿಚಾರಣೆ ಮೇ. ೨೫ಕ್ಕೆ ಮುಂದೂಡಿಕೆ
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಕ್ಷೇತ್ರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ತಂಡ ಸಲ್ಲಿರುವ ಅರ್ಜಿ ಮತ್ತು ಧರ್ಮಸ್ಥಳ ಕ್ಷೇತ್ರದ ಪರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಪರ ಹಿರಿಯ ನ್ಯಾಯವಾದಿ ದೊರೆರಾಜು ನೇತೃತ್ವದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದ ಮುಂದಿನ ವಿಚಾರಣೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮೇ. ೨೫ಕ್ಕೆ ನಡೆಯಲಿದೆ. ಧರ್ಮಸ್ಥಳ ಪರ ವಕೀಲ ಸಿ.ವಿ.ನಾಗೇಶ್ ಅವರು ಈಗಾಗಲೇ ತಮ್ಮ ವಾದ ಮಂಡನೆ ಪೂರ್ಣಗೊಳಿಸಿದ್ದಾರೆ. ಬುರುಡೆ ಪ್ರಕರಣದಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ತೀರಾ ಹಾನಿಯಾಗಿದೆ ಎಂಬುದನ್ನು ನ್ಯಾಯಾಧೀಶರ ಮುಂದೆ ಎಳೆಎಳೆಯಾಗಿ ಸಿ.ವಿ.ನಾಗೇಶ್ ವಿವರಿಸಿದ್ದಾರೆ. ಇದಕ್ಕೆ ಎಸ್‌ಐಟಿ ಪರ ವಕೀಲರಾಗಿರುವ ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಪ್ರಬಲ ಆಕ್ಷೇಪ ಸಲ್ಲಿಸಿದ್ದಾರೆ. ಧರ್ಮಸ್ಥಳ ದೇವಸ್ಥಾನವನ್ನು ಸಂತ್ರಸ್ತ ಎಂದು ಈ ಹಂತದಲ್ಲಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ದಿವ್ಯರಾಜ್ ಹೆಗ್ಡೆ ನ್ಯಾಯಾಧೀಶರ ಗಮನ ಸೆಳೆದಿದ್ದಾರೆ. ಧರ್ಮಸ್ಥಳ ಪರ ಅರ್ಜಿಗೆ ಈಗಾಗಲೇ ಆಕ್ಷೇಪಣೆ ವ್ಯಕ್ತಪಡಿಸಿ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರದಲ್ಲಿ ಮೇ.೨೫ರಂದು ತಿಮರೋಡಿ ಪರ ವಕೀಲರ ವಾದ ಮಂಡಿಸಲಿದ್ದಾರೆ. ಧರ್ಮಸ್ಥಳ ಪರ ಮತ್ತು ವಿರುದ್ಧವಾದ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಅಂತಿಮ ಆದೇಶ ಹೊರಡಿಸಲಿದ್ದಾರೆ.

LEAVE A REPLY

Please enter your comment!
Please enter your name here