ನಮ್ಮ ಕುಡ್ಲ ಟಿ.ವಿ.ಯ ಯಕ್ಷ ತೆಲಿಕೆ ಎಪಿಸೋಡ್‌ಗೆ ಬುರುಡೆ ಟೈಟಲ್!-ಕಲಾವಿದರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರಿನಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ: ನಮ್ಮ ಕುಡ್ಲ ಟಿ. ವಿ. ವಾಹಿನಿಯ ಯಕ್ಷ ತೆಲಿಕೆ ಕಾರ್ಯಕ್ರಮಕ್ಕೆ ಬುರುಡೆ ಎಂಬ ಟೈಟಲ್ ಇಟ್ಟಿರುವುದಕ್ಕೆ ಕೋಪಗೊಂಡ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದಡಿ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಂಗ್‌ದ ರಾಜೆ ಸುಂದರ ರೈ ಮಂದಾರ ಕೇಸು ದಾಖಲಿಸಿದ್ದಾರೆ. ಜತೆಗೆ ಇನ್ನೋರ್ವ ಕಲಾವಿದ ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿ ಅವರು ಪುತ್ತೂರು ಮಹಿಳಾ ಠಾಣೆಯಲ್ಲಿ ಮಹೇಶ್ ಶೆಟ್ಟಿ ವಿರುದ್ಧ ಕೇಸು ನೀಡಿದ್ದಾರೆ.

ಮಹೇಶ್ ಶೆಟ್ಟಿ ವಿರುದ್ಧ ದಾಖಲಾದ ಕೇಸ್‌ನ ವಿವರ: ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ನಮ್ಮ ಕುಡ್ಲ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಕ್ಷ ತೆಲಿಕೆ’ ಎಂಬ ಕಾರ್ಯಕ್ರಮದಲ್ಲಿ ಬುರುಡೆ’ ಟೈಟಲ್ ಇಟ್ಟು ಎಪಿಸೋಡ್ ಮಾಡಲಾಗಿತ್ತು. ಇದರಲ್ಲಿ ತುಳುನಾಡಿನ ಖ್ಯಾತ ಕಲಾವಿದರಾದ ಸುಂದರ್ ರೈ ಮಂದಾರ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ದಿನೇಶ್ ರೈ ಕಡಬ ಮತ್ತು ದಿನೇಶ್ ಕೋಡಪದವು ಅಭಿನಯಿಸಿದ್ದರು.

ಯಕ್ಷ ತೆಲಿಕೆಯ ಕಾರ್ಯಕ್ರಮಕ್ಕೆ ಬುರುಡೆ ಟೈಟಲ್ ಇಟ್ಟುಕೊಂಡಿರುವುದಕ್ಕೆ ಕೋಪಗೊಂಡ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು. ಇವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯನ್ನು ಪ್ರಜ್ವಲ್ ಕುಮಾರ್ ಅವರು ಸುಂದರ್ ರೈ ಮಂದಾರ ಅವರಿಗೆ ಕಳುಹಿಸಿದ್ದರು. ಈ ಆಡಿಯೋವನ್ನು ಸುಂದರ್ ರೈ ಅವರು ಕೇಳಿಸಿಕೊಂಡಾಗ ಅದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರಜ್ವಲ್ ಕುಮಾರ್ ಅವರಲ್ಲಿ ನಿನ್ನ ಒಂಜಿ ವೀಡಿಯೋ ತೂತೆ ಎಂದು ತುಳು ಭಾಷೆಯಲ್ಲಿ ಮಾತು ಆರಂಭಿಸಿದ್ದಾರೆ.

ಬಳಿಕ ನಿನ್ನ ತಂದೆಯ ಕಥೆ ಹೇಳುವುದಾ ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು ಬುರುಡೆಯ ಒಂದು ವೀಡಿಯೋ ಮಾಡಿರುತ್ತೀಯಾ ಎಂದು ಕೇಳಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಆಯೆ ಉಲ್ಲೆ ಅತ್ತಾ ಕೋಡಪದವು, ಮಂದಾರ ಎಂದು ಹೆಸರು ಉಲ್ಲೇಖಿಸಿ ಕೀಳು ಮಟ್ಟದ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾರೆ. ಇದು ಸುಂದರ್ ರೈ ಅವರ ಗೌರವಕ್ಕೆ, ಅಭಿಮಾನಕ್ಕೆ ಧಕ್ಕೆ ತಂದಿದೆ. ಅಲ್ಲದೆ ಸಮಾಜದ ಬೇರೆ ಬೇರೆ ಜಾತಿಗಳ ಮಧ್ಯೆ ಗಲಭೆ, ದೊಂಬಿ ಹಾಗೂ ದ್ವೇಷ ಉಂಟು ಮಾಡಲು ಕಾರಣವಾಗಿದೆ. ದಿನೇಶ್ ಕೋಡಪದವು ಅವರ ತಾಯಿಯ ಬಗ್ಗೆ ಅಪಮಾನವಾಗುವ ರೀತಿಯಲ್ಲಿ ಮಹೇಶ್ ಶೆಟ್ಟಿ ಮಾತನಾಡಿದ್ದಾರೆ. ಆ ಮೂಲಕ ಹೆಣ್ಣು ಹೆಂಗಸಿನ ಚಾರಿತ್ರ್ಯಕ್ಕೆ ಮಸಿ ಬಳಿಯುವ, ಕಳಂಕ ಬರುವ ಅವಹೇಳನಕರವಾದ ಮಾತುಗಳನ್ನು ಆಡಿದ್ದಾರೆ.

ಇದು ಜಾತಿ ವೈಷಮ್ಯಕ್ಕೆ, ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವಂತಿದೆ. ಸುಂದರ್ ರೈ ಮಂದಾರ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಮತ್ತು ಉತ್ತಮ ಸ್ಥಾನಮಾನವನ್ನು ಹೊಂದಿದ್ದು ಇದೇ ಕಾರಣಕ್ಕೆ ಈ ರೀತಿಯಾಗಿ ಮಾನಹಾನಿಕರವಾದ ಪದಗಳನ್ನು ಬಳಸಿ ಅವರ ಪತ್ನಿ ಹಾಗೂ ತಾಯಿ ಬಗ್ಗೆ ಕೂಡ ಮಹೇಶ್ ಶೆಟ್ಟಿ ಕೆಟ್ಟದಾಗಿ ಮಾತನಾಡಿದ್ದಾರೆ. ಮಹೇಶ್ ಶೆಟ್ಟಿ ಅವರು ತೇಜೋವಧೆ, ಮಾನಭಂಗ ಮಾಡಬೇಕು ಎಂಬ ಕುರಿತಾದ ಉದ್ದೇಶದಿಂದಲೇ ಈ ರೀತಿ ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ. ಈ ಸಂಭಾಷಣೆಯಿಂದ ಸುಂದರ್ ರೈ ಮಂದಾರ ಅವರ ಪತ್ನಿ ಹಾಗೂ ತಾಯಿ ಹಾಗೂ ಮನೆಯವರಿಗೆ ತೀವ್ರವಾದ ಆಘಾತವಾಗಿದೆ. ಅಲ್ಲದೆ ಮಹೇಶ್ ಶೆಟ್ಟಿ ಅವರು ಅಕುಲು ರಡ್ಜ್ ಜನ ಭಾರೀ ರಾವೊಂದು ಉಲ್ಲೆರ್. ಸುಂದರ್ ರೈಕ್ ಲಾ ಉಂಡು, ಕೋಡಪದವುಗ್ ಲಾ ಉಂಡು” ಎಂದು ಪದೇ ಪದೇ ಸುಂದರ್ ರೈ ಮಂದಾರ ಮತ್ತು ದಿನೇಶ್ ಕೋಡಪದವು ಅವರ ಹೆಸರು ಹೇಳಿ ಜೀವ ಬೆದರಿಕೆ ಹಾಕಿದ್ದಾರೆ.ಅಕುಲೆಗ್ ಎನ್ನ ಪೆದಂಬು ಗೊತ್ತಿಜ್ಜಿ’ ಎಂದು ತಾನು ಭಾರೀ ಡೇಂಜರ್ ಎಂಬಂತೆ ಬಿಂಬಿಸಿಕೊಂಡಿದ್ದಾರೆ.

ಈ ಬಗ್ಗೆ ಸುಂದರ್ ರೈ ಮಂದಾರ ಅವರು ಪ್ರಜ್ವಲ್‌ರವರನ್ನು ಸಂಪರ್ಕಿಸಿದಾಗ ಪ್ರಜ್ವಲ್ ಅವರ ಮೊಬೈಲ್ ಸಂಖ್ಯೆಗೆ ಮಹೇಶ್ ಶೆಟ್ಟಿ ತಿಮರೋಡಿ ಏ.೧೧ರಂದು ಸಾಯಂಕಾಲ ೬:೧೬ ಗಂಟೆಗೆ ಫೋನ್ ಕರೆ ಮಾಡಿ ಮಾತನಾಡಿರುವುದಾಗಿದೆ ತಿಳಿದು ಬಂದಿದೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಏ.೧೫ರಂದು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಲಂ ೧೯೬(೧),೩೫೨,೩೫೧(೪),೭೯ ಬಿಎನ್‌ಎಸ್ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಇದೇ ಘಟನೆಗೆ ಸಂಬಂಧಿಸಿ ಕಲಾವಿದ ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಮಹೇಶ್ ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ.


LEAVE A REPLY

Please enter your comment!
Please enter your name here