







ಬೆಳ್ತಂಗಡಿ: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿ ನೀಡುವ ವಿಚಾರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಚರ್ಚೆಯಾಗತೊಡಗಿದೆ. ಸುದ್ದಿ ಬಿಡುಗಡೆ ಪತ್ರಿಕೆಯ ಕಳೆದ ವಾರದ ಸಂಚಿಕೆಯಲ್ಲಿ ಬೆಳ್ತಂಗಡಿ ಮಹಿಳಾ ಮೀಸಲು ಕ್ಷೇತ್ರವಾಗುವುದೇ? ಇಲ್ಲಿನ ಆಕಾಂಕ್ಷಿಗಳು ಎಲ್ಲಿಗೆ ಹೋಗಬಹುದು? ಕುತೂಹಲ-ಆಕಾಂಕ್ಷಿಗಳಲ್ಲಿ ಗೊಂದಲ-ಇಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಎನ್ನುವುದು ಗಮನಾರ್ಹ’ ಎಂಬ ತಲೆಬರಹದಡಿ ವಿಶೇಷ ಲೇಖನ ಪ್ರಕಟವಾದ ಬಳಿಕ ಪ್ರತೀ ಹಳ್ಳಿ ಹಳ್ಳಿಯಲ್ಲಿಯೂ ಇದೇ ವಿಷಯ ಚರ್ಚೆಯಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆ ಬೆಳ್ತಂಗಡಿ ಕ್ಷೇತ್ರಮಹಿಳೆ’ಗೆ ಮೀಸಲಾದರೆ ಇಲ್ಲಿ ಯಾರು ಅಭ್ಯರ್ಥಿಗಳಾಗಬಹುದು ಎಂದು ಅರ್ಹತೆ ಇರುವವವರ ಹೆಸರು ಕೇಳಿ ಬರುತ್ತಿದೆ. ಹಾಲಿ ಶಾಸಕರಾಗಿರುವ ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಯಾವ ಕ್ಷೇತ್ರದತ್ತ ತಮ್ಮ ಚಿತ್ತ ಹರಿಸಬಹುದು ಎಂಬ ಚರ್ಚೆಯೂ ಮುನ್ನಲೆಗೆ ಬರುತ್ತಿದೆ. ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಮೀಸಲಾತಿ ಬದಲಾಗದೆ ಬೆಳ್ತಂಗಡಿ ಕ್ಷೇತ್ರ ಯಥಾಸ್ಥಿತಿಯಲ್ಲಿ ಮುಂದುವರೆದರೆ ಯಾರ ಹೆಸರು ಪ್ರಮುಖವಾಗಿ ರೇಸ್ಗೆ ಬರಬಹುದು ಎಂದೂ ಲೆಕ್ಕಾಚಾರ ನಡೆಯುತ್ತಿದೆ.
ಸಾರ್ವಜನಿಕ ವಲಯದಲ್ಲಿ ಕುತೂಹಲ:ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹಿಳಾ ಮೀಸಲಾತಿ ಜಾರಿಯನ್ನು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯ ಸಂದರ್ಭದಲ್ಲಿ ಮಾಡುವುದು ಕೇಂದ್ರ ಸರ್ಕಾರದ ಉzಶವಾಗಿದೆ. ಇದು ದೇಶದ ಎಲ್ಲ ರಾಜ್ಯ ಹಾಗೂ ಜಿಲ್ಲೆಗಳಿಗೆ ಅನ್ವಯವಾಗಲಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯೂ ಭಾರೀ ರಾಜಕೀಯ ಬದಲಾವಣೆಗಳಿಗೆ ತೆರೆದುಕೊಳ್ಳಲಿದೆ. ಅಲ್ಲದೆ ರಾಜ್ಯದಲ್ಲಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ಬೆಳ್ತಂಗಡಿ ಮಹಿಳಾ ಮೀಸಲು ವ್ಯಾಪ್ತಿಗೆ ಬರುವುದೇ ಎಂಬ ಕುತೂಹಲ ಗರಿಗೆದರಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿರುವುದರಿಂದ ಈ ಚರ್ಚೆಗೆ ಮತ್ತಷ್ಟು ಪುಷ್ಠಿ ದೊರೆತಿದೆ. ಹಾಗಾದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧ ಪಕ್ಷಗಳಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಹಲವು ಆಕಾಂಕ್ಷಿಗಳು ಹಾಗೂ ಹಾಲಿ ಶಾಸಕ ಹರೀಶ್ ಪೂಂಜರ ಭವಿಷ್ಯ ಏನಾಗಬಹುದು, ಅವರುಗಳು ಯಾವ ಯಾವ ಬದಲಿ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು? ಆ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶ ನೀಡಲು ಅಲ್ಲಿನವರು ಒಪ್ಪಿಯಾರೇ? ಎಂಬ ಕುತೂಹಲದ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಮಹಿಳಾ ಕೇಂದ್ರಿತ ರಾಜಕೀಯ ದರ್ಬಾರು: ದಕ್ಷಿಣ ಕನ್ನಡ ಲೋಕಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ ೮ ವಿಧಾನಸಭಾ ಕ್ಷೇತ್ರಗಳಿದೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಈ ಸಂಖ್ಯೆ ೧೧ಕ್ಕೆ ಏರುವ ಸಾಧ್ಯತೆಯಿದೆ. ಪ್ರಸಕ್ತ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಲ್ಕಿ ಮೂಡುಬಿದಿರೆ ಕ್ಷೇತ್ರಗಳಿವೆ. ಪುನರ್ ವಿಂಗಡಣೆ ಬಳಿಕ ಶೇ.೩೩ ಮಹಿಳಾ ಮೀಸಲು ಅನ್ವಯಿಸಿದರೆ ೧೧ ಕ್ಷೇತ್ರಗಳಲ್ಲಿ ಮಹಿಳಾ ಮೀಸಲು ಕ್ಷೇತ್ರಗಳ ಸಂಖ್ಯೆ ೪ಕ್ಕೆ ಏರಬಹುದು ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲು ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ರಾಜಕೀಯ ಚಿತ್ರಣವನ್ನೇ ಬದಲಿಸಿದಂತೆ ಬೆಳ್ತಂಗಡಿಯಲ್ಲೂ ಐತಿಹಾಸಿಕ ಬದಲಾವಣೆಗೆ ಕಾರಣವಾಗಬಲ್ಲದು ಮತ್ತು ಇಲ್ಲಿ ಮಹಿಳಾ ಕೇಂದ್ರಿತ ರಾಜಕೀಯ ದರ್ಬಾರಿನ ಆರಂಭವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಗೌಡ ಸಮುದಾಯದ ಲೋಕೇಶ್ವರಿ ವಿನಯಚಂದ್ರ ಅವರು ಇಲ್ಲಿಂದ ಮೊದಲ ಮಹಿಳಾ ಶಾಸಕಿಯಾಗಲು ಕಾಂಗ್ರೆಸ್ನಿಂದ ಯತ್ನಿಸಿದ್ದರೂ ಫಲ ನೀಡಿರಲಿಲ್ಲ. ಬೆಳ್ತಂಗಡಿ ರಾಜಕಾರಣ ಕ್ಷೇತ್ರ ಪುರುಷ ಪ್ರಧಾನವಾಗಿಯೇ ಗುರುತಿಸಿಕೊಂಡಿದ್ದು ಚಿದಾನಂದ ಬಂಗೇರ, ವಸಂತ ಬಂಗೇರ, ಪ್ರಭಾಕರ ಬಂಗೇರ, ಗಂಗಾಧರ ಗೌಡ, ಹರೀಶ್ ಪೂಂಜ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಹರೀಶ್ ಕುಮಾರ್, ರಕ್ಷಿತ್ ಶಿವರಾಂ, ರಂಜನ್ ಗೌಡ ಮುಂತಾದವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ ಪ್ರಯೋಜನವಾಗಿಲ್ಲ.
ಅರ್ಹರ ದಂಡೇ ಇದೆ: ಹಾಲಿ ಶಾಸಕ ಹರೀಶ್ ಪೂಂಜ ಸಹಿತ ಅರ್ಹರ ದಂಡೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿದೆ. ಮಹಿಳಾ ಮೀಸಲಾತಿ ಅಥವಾ ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಾಗದೆ ಸಾಮಾನ್ಯ ಕ್ಷೇತ್ರವಾಗಿಯೇ ಬೆಳ್ತಂಗಡಿ ಮುಂದುವರಿದರೆ ಭಾರತೀಯ ಜನತಾ ಪಾರ್ಟಿಯಿಂ ದವಿವಿಧ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಹಾಲಿ ಶಾಸಕ ಹರೀಶ್ ಪೂಂಜ ಅವರೇ ಮತ್ತೆ ಅಭ್ಯರ್ಥಿಯಾಗುವುದರಲ್ಲಿ ಸಂಶಯವಿಲ್ಲ. ಹಲವು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶದ ಮೂಲಕ ಗುರುತಿಸಿಕೊಂಡಿರುವ ಕೊಡುಗೈ ದಾನಿಗಳೂ ಆಗಿರುವ ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಉತ್ತಮ ಸಂಘಟಕರಾಗಿ, ಉತ್ತಮ ಮಾತುಗಾರರಾಗಿ, ಕಲಾವಿದರಾಗಿ ಗುರುತಿಸಿಕೊಂಡಿರುವ ಮಂಗಳೂರು ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ನಲ್ಲಿ ಉಪನ್ಯಾಸಕರಾಗಿರುವ ಗೇರುಕಟ್ಟೆಯ ಡಾ. ಕೇಶವ ಬಂಗೇರ, ಧಾರ್ಮಿಕವಾಗಿ, ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಕಿರಣ್ಚಂದ್ರ ಪುಷ್ಪಗಿರಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಸಂಸ್ಕಾರ ಭಾರತಿ, ಜೆಸಿಐ ಮೂಲಕ ಚಿರಪರಿಚಿತರಾಗಿರುವ ಬಿಜೆಪಿ ಯುವಮೋರ್ಚಾದ ಮಾಜಿ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಆರ್ಎಸ್ಎಸ್ನಲ್ಲಿ ಜಿಲ್ಲಾ ಜವಾಬ್ದಾರಿ ಹೊಂದಿರುವ ಉತ್ತಮ ಸಂಘಟಕ ಸಂತೋಷ್ ಕುಮಾರ್ ಕಾಪಿನಡ್ಕ, ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷರಾಗಿ ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನ್ಯಾಯವಾದಿ ಅನಿಲ್ ಕುಮಾರ್ ಯು. ಮುಂತಾದವರ ಹೆಸರೂ ಟಿಕೆಟ್ ಘೋಷಣೆಯಾಗುವ ವೇಳೆ ಬಿಜೆಪಿ ಪಾಳಯದಲ್ಲಿ ಗಮನ ಸೆಳೆಯುವುದನ್ನು ಅಲ್ಲಗಳೆಯುವಂತಿಲ್ಲ.


ಈಗಾಗಲೇ ಆರ್ಎಸ್ಎಸ್ ನಾಯಕರ ಚಿಂತನ ಮಂಥನದಲ್ಲಿ ಇವರುಗಳ ಹೆಸರು ಉಲ್ಲೇಖವಾಗಿದೆ. ಕಾಂಗ್ರೆಸ್ನಲ್ಲಿ ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದರೂ ಪಕ್ಷದ ಪ್ರಭಾವಿ ಮುಖಂಡರ ಸಂಪರ್ಕದಲ್ಲಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಬೆಸ್ಟ್ ಫೌಂಡೇಶನ್ ಅಧ್ಯಕ್ಷರೂ ಆಗಿರುವ ರಕ್ಷಿತ್ ಶಿವರಾಂ, ಮೆಸ್ಕಾಂ ಅಧ್ಯಕ್ಷರೂ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ವಿಧಾನಪರಿಷತ್ ಮಾಜಿ ಸದಸ್ಯರೂ ಆಗಿರುವ ಕೆ. ಹರೀಶ್ ಕುಮಾರ್, ಈ ಹಿಂದೆ ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದು ಪ್ರಸ್ತುತ ಕಾಂಗ್ರೆಸ್ನಲ್ಲಿರುವ ಕಂಬಳ ಸಂಘಟಕ ರಂಜನ್ ಜಿ. ಗೌಡ ಮುಂತಾದವರು ಪ್ರಮುಖ ರೇಸ್ನಲ್ಲಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಬಂದರೂ ಬರಬಹುದು ಎಂಬ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಮುಖಂಡರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ ಕುಕ್ಕೇಡಿ ಅವರ ಹೆಸರನ್ನು ಮುಂಚೂಣಿಗೆ ತಂದಿದ್ದಾರೆ. ಮಹಿಳಾ ಕ್ಷೇತ್ರವಾದರೆ ಯಾರು?: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಯಥಾಸ್ಥಿತಿಯಲ್ಲಿ ಮುಂದುವರಿದರೆ ಅಷ್ಟೇನೂ ಕುತೂಹಲ ಉಳಿಸಿಕೊಳ್ಳುವ ಕ್ಷೇತ್ರವಾಗಿ ಉಳಿಯದು. ಆದರೆ ಮಹಿಳಾ ಮೀಸಲು ಕ್ಷೇತ್ರವಾದರೆ ಅಭ್ಯರ್ಥಿಗಳು ಯಾರಾಗಬಹುದು ಎಂಬುದು ಭಾರೀ ಕುತೂಹಲ ಕೆರಳಿಸುವ ವಿಚಾರವಾಗುತ್ತದೆ.
ಪುತ್ತೂರು ವಿಧಾನಸಭಾ ಕ್ಷೇತ್ರಸಾಮಾನ್ಯ ಕ್ಷೇತ್ರವಾಗಿದ್ದರೂ ಅಲ್ಲಿ ಶಕುಂತಳಾ ಟಿ. ಶೆಟ್ಟಿಯವರು ಒಮ್ಮೆ ಬಿಜೆಪಿಯಿಂದ ಮತ್ತೊಮ್ಮೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಮಲ್ಲಿಕಾ ಪ್ರಸಾದ್ ಅವರು ಒಂದು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಆ ಮೂಲಕ ಪುರುಷರ ಪಾರುಪತ್ಯ ಇರುವ ಪುತ್ತೂರಿನಲ್ಲಿ ಪ್ರಮುಖ ಪಕ್ಷಗಳಲ್ಲಿ ಮಹಿಳೆಯೂ ಟಿಕೆಟ್ ಪಡೆಯಬಹುದು, ಜಯ ಸಾಧಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಲೋಕೇಶ್ವರಿ ವಿನಯಚಂದ್ರ ಅವರನ್ನು ಹೊರತು ಪಡಿಸಿದರೆ ಇತರ ಮಹಿಳೆಯರಿಗೆ ಪ್ರಮುಖ ಪಕ್ಷಗಳು ಅವಕಾಶ ಕಲ್ಪಿಸಿಲ್ಲ. ಆದರೆ ಮಹಿಳಾ ಮೀಸಲು ಕ್ಷೇತ್ರವಾದರೆ ಅರ್ಹ ಮಹಿಳೆಯರನ್ನು ಗುರುತಿಸಲು ಪಕ್ಷದ ನಾಯಕರು ಮುಂದಾಗಲೇಬೇಕಾಗುತ್ತದೆ. ಈಗಾಗಲೇ ಮಹಿಳಾ ಮೀಸಲಾತಿಯ ವಿಚಾರ ಚರ್ಚೆಯಲ್ಲಿರುವುದರಿಂದ ಅರ್ಹ ಮಹಿಳೆಯರ ಹೆಸರು ಕಾಣಿಸಿಕೊಳ್ಳಲಾರಂಭಿಸಿದೆ. ಬಿಜೆಪಿಯಿಂದ ಸ್ಪರ್ಧಿಸಬಹುದಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯ ಮಾಜಿ ಮಂಡಲಾಧ್ಯಕ್ಷೆ ಶಾರದಾ ರೈ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಅವರ ಹೆಸರು ಮುಂಚೂಣಿಯಲ್ಲಿದೆ.
ಕಾಂಗ್ರೆಸ್ನಿಂದ ಮಾಜಿ ಶಾಸಕ ವಸಂತ ಬಂಗೇರ ಅವರ ಕಿರಿಯ ಪುತ್ರಿ, ಬಂಗೇರ ಬ್ರಿಗೇಡ್ನ ಅಧ್ಯಕ್ಷೆ ಬಿನುತಾ ಬಂಗೇರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಮಿತಾ ಪೂಜಾರಿ ತೋಟತ್ತಾಡಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಲೋಕೇಶ್ವರಿ ವಿನಯಚಂದ್ರ ಅವರ ಹೆಸರು ಹಿರಿತನದ ನೆಲೆಯಲ್ಲಿ ಕಾಣಿಸಿಕೊಳ್ಳಲೂ ಬಹುದಾಗಿದೆ. ಬಿನುತಾ ಬಂಗೇರ ಅವರ ಹೆಸರು ಮುಖ್ಯವಾಗಿ ಕಾಂಗ್ರೆಸ್ನಲ್ಲಿ ಕೇಳಿ ಬರುತ್ತಿರುವುದು ಹೌದಾದರೂ ಅವರನ್ನು ಬಿಜೆಪಿ ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಲಾರಂಭಿಸಿದೆ. ಈ ಮಧ್ಯೆ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾಪೋರೇಟರ್, ಪ್ರಭಾವಿ ರಾಜಕಾರಣಿಯೂ ಆಗಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರೂ ಬೆಳ್ತಂಗಡಿ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ. ಇಲ್ಲಿ ತಮ್ಮ ಬಿಲ್ಲವ ಸಮುದಾಯದವರು ಹೆಚ್ಚಿರುವುದು ಇದಕ್ಕೆ ಕಾರಣ ಎಂದು ಮಾಹಿತಿ ಲಭ್ಯವಾಗಿದೆ.
ಮೀಸಲಾತಿ ಬದಲಾದರೆ ಹರೀಶ್ ಪೂಂಜ, ರಕ್ಷಿತ್ ಶಿವರಾಂ ಎತ್ತ ?: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯದ ಲೆಕ್ಕಾಚಾರ ಪ್ರಕಾರ ಬಿಜೆಪಿಯಿಂದ ಹರೀಶ್ ಪೂಂಜ ಮತ್ತು ಕಾಂಗ್ರೆಸ್ನಿಂದ ರಕ್ಷಿತ್ ಶಿವರಾಂ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಆದರೆ ಮಹಿಳಾ ಮೀಸಲಾತಿ ಬಂದರೆ ಅವರು ಅನಿವಾರ್ಯವಾಗಿ ಕ್ಷೇತ್ರ ತ್ಯಾಗ ಮಾಡಬೇಕಾಗುತ್ತದೆ. ಹಾಗಾದಾಗ ಅವರು ಬೇರೆ ಯಾವ ಕ್ಷೇತ್ರಕ್ಕೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ಹರೀಶ್ ಪೂಂಜರಿಗೆ ಅವರ ತಾಯಿಯ ಊರಾದ ಪುತ್ತೂರಿನಲ್ಲಿ ಅವಕಾಶ ಇದೆ. ಪುತ್ತೂರು ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಉದ್ಯಮಿ ಉಜ್ವಲ್ ಪ್ರಭು ಅವರ ಹೆಸರು ಬಿಟ್ಟರೆ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಹೆಸರು ಮಾತ್ರ ಪ್ರಬಲವಾಗಿ ಕೇಳಿ ಬರುತ್ತಿದೆ. ಕಳೆದ ಬಾರಿ ಬಂಡಾಯವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಎರಡನೇ ಸ್ಥಾನ ಪಡೆದುಕೊಂಡು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದರೂ ಅವರನ್ನು ಬಿಜೆಪಿ ಇನ್ನೂ ತನ್ನತ್ತ ಸೆಳೆದುಕೊಂಡಿಲ್ಲ. ಹಾಗಾಗಿ ಮುಂದಿನ ಚುನಾವಣೆಯಲ್ಲಿಯೂ ಟಿಕೆಟ್ ಸಿಗುವ ಲಕ್ಷಣ ಗೋಚರಿಸದ ಕಾರಣ ಅರುಣ್ ಕುಮಾರ್ ಈಗಾಗಲೇ ಪುತ್ತಿಲ ಪರಿವಾರವನ್ನು ಪ್ರತೀ ಬೂತ್ ಬೂತ್ಗೆ ವಿಸ್ತರಿಸುತ್ತಿದ್ದಾರೆ. ಆ ಮೂಲಕ ಮತ್ತೆ ಅಖಾಡಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಆದ್ದರಿಂದ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಮತ್ತು ಅರುಣ್ ಕುಮಾರ್ ಪುತ್ತಿಲರಿಗೆ ಸರಿ ಸಮಾನವಾದ ಸವಾಲು ನೀಡಬೇಕಾದರೆ ಹರೀಶ್ ಪೂಂಜರೇ ಅತ್ಯುತ್ತಮ ಅಭ್ಯರ್ಥಿ ಎಂದು ಅವರನ್ನು ಬಿಜೆಪಿ ಕಾರ್ಯಕರ್ತರು ಪುತ್ತೂರಿಗೆ ಸ್ವಾಗತಿಸಿದರೂ ಅಚ್ಚರಿ ಇಲ್ಲ. ಆದರೆ ಸಕಾರಣವೇ ಇಲ್ಲದೆ ಕಳೆದ ಬಾರಿ ಟಿಕೆಟ್ ನಿರಾಕರಿಸಲ್ಪಟ್ಟಿರುವ ಸಂಜೀವ ಮಠಂದೂರು ಸುಮ್ಮನಿರುತ್ತಾರ ಎಂದು ಕಾದು ನೋಡಬೇಕಿದೆ. ಅತ್ತ ಬಂಟ್ವಾಳ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜೇಶ್ ನಾಕ್ ಮತ್ತೆ ಸ್ಪರ್ಧಿಸಲು ಉತ್ಸುಕರಾಗಿಲ್ಲ. ಹಾಗಾಗಿ ಹರೀಶ್ ಪೂಂಜ ಅವರನ್ನು ಬಂಟ್ವಾಳಕ್ಕೆ ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ. ಆದರೆ ಜನಸಾಮಾನ್ಯರು ಶಶಿಧರ ಶೆಟ್ಟಿ ಬರೋಡ ಬಂದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿದ್ದಾರೆ. ಪೂಂಜ ಅವರು ಬೆಳ್ತಂಗಡಿಯಲ್ಲಿ ರಾಜಕಾರಣಕ್ಕೆ ಇಳಿಯುವ ಮೊದಲು ಬೆಂಗಳೂರಿನಲ್ಲಿ ಇದ್ದುದರಿಂದ ಆ ಭಾಗದಲ್ಲಿ ಟಿಕೆಟ್ ಪಡೆದು ಮತ್ತೆ ವಿಧಾನಸಭೆ ಪ್ರವೇಶಿಸಲು ಪ್ರಯತ್ನಿಸುವುದು ನಿಚ್ಚಳವಾಗಿದೆ. ಪುತ್ತೂರಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ೨ನೇ ಅವಧಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆಗಿರುವುದರಿಂದ ರಕ್ಷಿತ್ ಶಿವರಾಂ ಅಲ್ಲಿ ಪ್ರಯತ್ನಿಸುವ ಸಾಧ್ಯತೆ ಕಡಿಮೆ. ಬಂಟ್ವಾಳದಲ್ಲಿ ಮತ್ತೆ ಮಾಜಿ ಸಚಿವ ಬಿ. ರಮಾನಾಥ ರೈ ಸ್ಪರ್ಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ ಬಂಟ್ವಾಳ ಕ್ಷೇತ್ರದತ್ತ ರಕ್ಷಿತ್ ಶಿವರಾಂ ಆಸಕ್ತಿ ಹೊಂದಿಲ್ಲ. ಆದ್ದರಿಂದ ರಕ್ಷಿತ್ ಶಿವರಾಂ ಕೂಡ ಬೆಂಗಳೂರಿನತ್ತ ತೆರಳಿದರೆ ಅಥವಾ ಕಡಬ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಅತ್ತಕಡೆ ವಾಲಿದರೂ ಅಚ್ಚರಿ ಇಲ್ಲ. ಈ ಮಧ್ಯೆ ಬೆಳ್ತಂಗಡಿಗೆ ಯಾವುದೇ ಮೀಸಲಾತಿ ಬರಬಾರದು ಎಂದು ಆಶಯ ವ್ಯಕ್ತಪಡಿಸುತ್ತಿರುವ ಉಭಯ ಪಕ್ಷದ ಹಲವು ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಹರೀಶ್ ಪೂಂಜ ಮತ್ತು ರಕ್ಷಿತ್ ಶಿವರಾಂ ಅವರೇ ಮತ್ತೆ ಕಣಕ್ಕಿಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರೊಂದಿಗೆ ವ್ಯಕ್ತಿ ಮುಖ್ಯ ಅಲ್ಲ. ಪಕ್ಷ ಮುಖ್ಯ ಎಂಬ ಧ್ಯೇಯ ಹೊಂದಿರುವ ಬಿಜೆಪಿಯ ಕೆಲವು ನಾಯಕರು ನಮಗೆ ಯಾರು ಅಭ್ಯರ್ಥಿ ಆದರೂ ತೊಂದರೆ ಇಲ್ಲ. ಬಿಜೆಪಿ ಮತ್ತೆ ಗೆಲ್ಲಬೇಕು ಎಂದು ಅನಿಸಿಕೆ ತಿಳಿಸಿದ್ದಾರೆ.








