







ಬೆಳ್ತಂಗಡಿ: ಮೂಲತಃ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಡ್ರೆಕಬೆಟ್ಟು ಬೀದಿಮಜಲು ನಿವಾಸಿಯಾಗಿದ್ದು ಬೆಳ್ತಂಗಡಿಯಲ್ಲಿ ಎಸ್.ಆರ್.ಎಸ್. ಹೆಸರಿನ ಎಲೆಕ್ಟ್ರಾನಿಕ್ಸ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದ ಬಿ. ಸುದೀಪ್ ಶೆಟ್ಟಿ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಅವರ ಪತ್ನಿ ಸೌಮ್ಯ ಶೆಟ್ಟಿಯವರನ್ನು ಎ. ೧೧ರಂದು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಡ್ರೆಕಬೆಟ್ಟು ನಿವಾಸಿ ಸುದೀಪ್ ರೈ ಮತ್ತು ಕಾರ್ಕಳ ತಾಲೂಕಿನ ಜೋಡುರಸ್ತೆಯ ಬಂಗ್ಲೆಗುಡ್ಡೆ ಸಮೀಪದ ಕಜೆ ನಿವಾಸಿ ಸೌಮ್ಯ ಶೆಟ್ಟಿ ಕಳೆದ ಫೆಬ್ರವರಿ ೧೭ರಂದು ಪುತ್ತೂರಿನ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿತ ವಿವಾಹವಾಗಿದ್ದರು. ಮಾರ್ಚ್ ೧೯ರಂದು ಅವರು ಕಾರ್ಕಳ ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ತಿಂಗಳೊಳಗೆ ಅಂದರೆ ಮಾ. ೨೨ರಂದು ಸುದೀಪ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಾ. ೨೯ರಂದು ಸಾವನ್ನಪ್ಪಿದ್ದರು.
ಈ ಘಟನೆ ಕರಾವಳಿ ಭಾಗದಲ್ಲಿ ಭಾರೀ ಚರ್ಚೆಗೆ ಒಳಗಾಗಿ ತೀವ್ರ ಸಂಚಲನ ಮೂಡಿಸಿತ್ತು. ಸುದೀಪ್ ಶೆಟ್ಟಿ ಅವರ ಮನೆಯವರು ಸೌಮ್ಯ ಶೆಟ್ಟಿ ಅವರ ವಿರುದ್ಧ ಆರೋಪ ಹೊರಿಸಿದ್ದರೆ ಸೌಮ್ಯ ಶೆಟ್ಟಿ ಅವರು ಸುದೀಪ್ ಅವರ ಮನೆಯವರ ವಿರುದ್ಧ ಆರೋಪ ಹೊರಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದ ಸುದೀಪ್ ಅವರ ತಂದೆ ದಾಮೋದರ್ ರೈ ಮತ್ತು ಸುದೀಪ್ ಅವರ ಪತ್ನಿ ಸೌಮ್ಯ ಶೆಟ್ಟಿ ಅವರು ಕಾರ್ಕಳ ಪೊಲೀಸ್ ಠಾಣೆಗೆ ದೂರು-ಪ್ರತಿದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ಸೌಮ್ಯ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ಮುಂದುವರಿಸಿದ ಪೊಲೀಸರು ಸೌಮ್ಯ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಸೌಮ್ಯ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸಮಗ್ರ ತನಿಖೆಗೆ ಒತ್ತಾಯಿಸಿದ್ದ ಸೌಮ್ಯ ಶೆಟ್ಟಿ ಅರೆಸ್ಟ್!: ತನ್ನ ಪತಿ ಸುದೀಪ್ ರೈ ಅವರ ಸಾವಿನ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು ಎಂದು ಆಗ್ರಹಿಸಿದ್ದ ಸೌಮ್ಯ ಶೆಟ್ಟಿಯವರನ್ನೇ ಇದೀಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾರ್ಯಕ್ರಮ ನಿರೂಪಣೆ ಮತ್ತು ನಾಟಕ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಸೌಮ್ಯ ಶೆಟ್ಟಿ ಅವರು ಪ್ರಕರಣದ ಕುರಿತಂತೆ ಸುದೀಪ್ ರೈ ಕುಟುಂಬ ತನ್ನ ಮೇಲೆ ಮಾಡುತ್ತಿರುವ ಆರೋಪಗಳು ನಿರಾಧಾರವಾಗಿದೆ. ಅವುಗಳಲ್ಲಿ ಸತ್ಯಾಂಶಗಳಿಲ್ಲ. ಅಲ್ಲದೆ ಸುದೀಪ್ ಅವರು ನೆಲ್ಯಾಡಿಯಲ್ಲಿರುವ ತನ್ನ ತಂದೆ ಮನೆಗೆ ಹೋದ ಸಂದರ್ಭದಲ್ಲಿಯೇ ಈ ದುರ್ಘಟನೆ ನಡೆದಿದೆ. ಗಂಡನ ಕಳೆದುಕೊಂಡ ದು:ಖದಲ್ಲಿರುವ ನನ್ನ ಮೇಲೆ ಅವರ ಕುಟುಂಬ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರಬಂದು ನನಗೆ ನ್ಯಾಯ ಸಿಗಬೇಕು. ಈ ಉದ್ದೇಶದಿಂದ ಈಗಾಗಲೇ ಕಾರ್ಕಳ ಪೊಲೀಸರಿಗೆ ದೂರು ನೀಡಿದ್ದೇನೆ. ಅಲ್ಲದೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದರು.


ಸುದೀಪ್ ರೈ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಅಲ್ಲಿ ಅವರು ವಿಷ ಸೇವಿಸಿದ ವಿಷಯ ಬೆಳಕಿಗೆ ಬಂದಿದೆ. ಅಂತೆಯೇ ಅವರು ಕಾರ್ಕಳ ಪೊಲೀಸರ ಮುಂದೆ ಈ ಬಗ್ಗೆ ಹೇಳಿಕೆಯನ್ನು ಕೂಡಾ ನೀಡಿದ್ದಾರೆ. ಈ ಸಂದರ್ಭದಲ್ಲಿ ನನಗೆ ತಿಳಿಸದೆ ಸುದೀಪ್ ಮನೆಯವರು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಅಲ್ಲಿಗೆ ಹೋದಾಗ ಗಂಡನನ್ನು ನೋಡಲು ಅವರು ಬಿಡಲಿಲ್ಲ. ಮಾ.೨೯ರಂದು ನನ್ನ ಗಂಡ ತೀರಿಕೊಂಡ ಬಳಿಕವೂ ಕೊನೆಯ ಬಾರಿ ಮುಖವನ್ನು ನೋಡಲೂ ಬಿಡಲಿಲ್ಲ ಎಂದು ಸೌಮ್ಯ ಶೆಟ್ಟಿ ಹೇಳಿದ್ದರು. ನನ್ನ ಮೇಲೆ ಹನಿಟ್ರ್ಯಾಪ್, ಹಣ ಪಡೆದ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ದಾಖಲೆ ಅವರಲ್ಲಿದ್ದರೆ ಅದನ್ನು ಬಹಿರಂಗ ಪಡಿಸಲಿ. ನನ್ನ ಗಂಡ ಸುದೀಪ್ ರೈ ಅವರಿಂದ ಯಾವುದೇ ಹಣ ಪಡೆದಿಲ್ಲ. ಬದಲಿಗೆ ನಾನೇ ಅವರಿಗೆ ಸಹಾಯ ಮಾಡಿದ್ದೇನೆ. ಅದಕ್ಕೆ ನನ್ನಲ್ಲಿ ದಾಖಲೆಯಿದೆ. ನಾವು ಒಟ್ಟಿಗೆ ಬಾಳುವ ಕನಸು ಕಂಡವರು. ಈ ದುರ್ಘಟನೆ ನನಗೆ ಅಘಾತ ತಂದಿದೆ. ನನ್ನ ಗಂಡನ ಸಾವಿನ ಬಗ್ಗೆ ನನಗೆ ನ್ಯಾಯ ಬೇಕು ಎಂದು ಸೌಮ್ಯ ಶೆಟ್ಟಿ ಹೇಳಿದ್ದರು.
ನಮ್ಮ ಮದುವೆಯನ್ನು ಸುದೀಪ್ ಮನೆಯವರು ಒಪ್ಪಿರಲಿಲ್ಲ. ಅಲ್ಲದೆ ಸುದೀಪ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲವಿತ್ತು. ಸಾಲಗಾರರು ಫೋನ್ ಮಾಡಿದಾಗ ಅವರ ತಂದೆಯೇ ನನ್ನ ನಂಬರ್ ನೀಡುತ್ತಿದ್ದರು. ಈ ಎಲ್ಲಾ ಮಾನಸಿಕ ಒತ್ತಡಗಳಿಂದ ಸುದೀಪ್ ಈ ನಿರ್ಧಾರ ಕೈಗೊಂಡಿರಬಹುದು. ತನಗೆ ಈ ಹಿಂದೆ ಒಂದು ಮದುವೆಯಾಗಿ ವಿಚ್ಛೇದನವಾಗಿದ್ದ ವಿಷಯ ಸುದೀಪ್ಗೆ ತಿಳಿದಿತ್ತು. ಸುದೀಪ್ ಸ್ವತಹ ಫೇಸ್ಬುಕ್ ಮೂಲಕ ನನ್ನನ್ನು ಅಪ್ರೋಚ್ ಆಗಿದ್ದರು. ಕಳೆದ ವರ್ಷ ಫೆಬ್ರವರಿಯಿಂದ ಮೆಸೇಜ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ನಾನು ಅವರಿಗೆ ವಾಪಸ್ ಮೆಸೇಜ್ ಮಾಡಿದ್ದೆ. ಬಳಿಕ ಅವರು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದ್ದರು.
ನನ್ನ ಮನೆಯವರಿಗೆ ಹೇಳಿ ಎಂದು ತಿಳಿಸಿದ್ದೆ. ಒಂದು ವರ್ಷದಿಂದ ನಿಮ್ಮ ಬಗ್ಗೆ ನೋಡಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಸುದೀಪ್ ಹೇಳಿದ್ದರು. ನಾನು ಸಹ ಮನೆಯವರು ಒಪ್ಪಿದರೆ ಮದುವೆಯಾಗುತ್ತೇನೆ ಎಂದು ಹೇಳಿದ್ದೆ. ಅವರು ಮನೆಯವರನ್ನು ಒಪ್ಪಿಸಿ ಮದುವೆಯ ತೀರ್ಮಾನಕ್ಕೆ ಬಂದರು. ನನ್ನ ತಮ್ಮನನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ಅವನ ಜೊತೆ ಮಾತನಾಡಿ ಮದುವೆ ತೀರ್ಮಾನಕ್ಕೆ ಬಂದರು. ನನ್ನ ಹಿಂದಿನ ಜೀವನದ ಬಗ್ಗೆ ಎಲ್ಲಾ ವಿಚಾರ ಅವರಿಗೆ ತಿಳಿಸಿದೆ. ಆ ಬಗ್ಗೆ ಏನು ತಲೆಕೆಡಿಸಿಕೊಂಡಿರಲಿಲ್ಲ. ಮದುವೆ ನೋಂದಣಿಯಾದ ನಂತರ ನನ್ನ ಮನೆಯಲ್ಲಿ ಎಲ್ಲರ ಜೊತೆ ಸಂತೋಷವಾಗಿದ್ದರು. ಈಗ ಆತ್ಮಹತ್ಯೆ ಯಾಕೆ ಮಾಡಿಕೊಂಡರು ಗೊತ್ತಿಲ್ಲ. ನಮ್ಮ ಮದುವೆಗೆ ಅವರ ಮನೆಯವರು ಒಪ್ಪದೇ ಇರುವ ಕಾರಣ ಇರಬಹುದು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿ ಎಂದು ಸೌಮ್ಯ ಶೆಟ್ಟಿ ಹೇಳಿದ್ದರು. ಸೌಮ್ಯ ಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಒತ್ತಾಯ ಮಾಡಿದ ಕೆಲವೇ ದಿನಗಳಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ವಾಸವಿದ್ದು ಎಸ್.ಆರ್.ಎಸ್. ಹೆಸರಿನ ಎಲೆಕ್ಟ್ರಾನಿಕ್ಸ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದ ಬಿ. ಸುದೀಪ್ ರೈ(೩೧) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಅವರ ತಂದೆ ದಾಮೋದರ್ ರೈ ಅವರು ದಾಖಲಿಸಿದ್ದ ಕೇಸ್ನಂತೆ ಪೊಲೀಸರು ಸೌಮ್ಯ ಶೆಟ್ಟಿಯವರನ್ನು ಬಂಧಿಸಿದ್ದಾರೆ. ಸುದೀಪ್ ರೈ ಅವರು ೨೦೨೬ರ ಫೆಬ್ರವರಿ ೧೭ರಂದು ಪುತ್ತೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಸುದೀಪ್ ಮತ್ತು ಸೌಮ್ಯ ಅವರು ಕಾರ್ಕಳ ತಾಲೂಕಿನ ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಾಗಿದ್ದರು. ಮಾ.೧೭ರಂದು ಸುದೀಪ್ ಅವರು ನೆಲ್ಯಾಡಿ ಗ್ರಾಮದ ಪಡ್ರೆಕಬೆಟ್ಟು ಬೀದಿಮಜಲು ಎಂಬಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಈ ಸಮಯದಲ್ಲಿ ಸುದೀಪ್ ಅವರ ತಾಯಿ ಕಾರಿನಲ್ಲಿ ಮಗ ಸುದೀಪ್ ಅವರೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಮನೆಯಿಂದ ಹೊರಟು ಕಡಬ ತಾಲೂಕಿನ ನೆಲ್ಯಾಡಿ ಪೇಟೆಯ ಸಮೀಪ ತಲುಪಿದ್ದರು. ಈ ವೇಳೆ ಸೌಮ್ಯ ಶೆಟ್ಟಿ ಅವರು ಅವರ ಸ್ಕೂಟಿ ಚಲಾಯಿಸಿಕೊಂಡು ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದರು. ನಂತರ ಸುದೀಪ್ ಅವರು ಸೌಮ್ಯ ಅವರೊಂದಿಗೆ ಕಾರ್ಕಳಕ್ಕೆ ಬಂದಿದ್ದರು. ಕಾರ್ಕಳದಲ್ಲಿರುವಾಗ ಮಾ. ೨೨ರಂದು ಸೌಮ್ಯ ಅವರ ಸಂಬಂಧಿಕರು ಸುದೀಪ್ ಅವರ ಸಂಬಂಧಿಕರಿಗೆ ಪೋನ್ ಮಾಡಿ ಸುದೀಪ್ ಅವರು ಯಾವುದೋ ವಿಷ ಪದಾರ್ಥ ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಅವರನ್ನು ಕಾರ್ಕಳದ ನಿಟ್ಟೆಯ ಗಾಬ್ರಿಯಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ತಿಳಿಸಿದ್ದಾರೆ. ನಂತರ ಸುದೀಪ್ ಅವರ ತಾಯಿ ಕಾರ್ಕಳಕ್ಕೆ ಬಂದು ಮಾ.೨೩ರಂದು ನಿಟ್ಟೆ ಗಾಜಿಯಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಸುದೀಪ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿಂದ ಮಾ.೨೪ರಂದು ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.೨೯ರಂದು ಬೆಳಗಿನ ಜಾವ ಸುಮಾರು ೦೩.೦೯ ಗಂಟೆಗೆ ಸುದೀಪ್ ಮೃತಪಟ್ಟಿದ್ದಾರೆ. ಸೌಮ್ಯ ಅವರು ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದರಿಂದ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದೀಪ್ ಅವರ ತಂದೆ ದಾಮೋದರ ರೈ ನೀಡಿದ ದೂರಿನಂತೆ ಸೌಮ್ಯ ಶೆಟ್ಟಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೪೭/೨೦೨೬ರಂತೆ ಪ್ರಕರಣ ದಾಖಲಾಗಿತ್ತು. ನಂತರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಾಮೋದರ್ ರೈ ಅವರು ನಮ್ಮ ಮಗನ ಸಾವಿಗೆ ಸೌಮ್ಯ ಶೆಟ್ಟಿ ಕಾರಣ ಎಂದು ನಾವು ನೀಡಿರುವ ದೂರಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. ಸುದೀಪ್ಗೆ ಸೌಮ್ಯ ಆಹಾರದಲ್ಲಿ ವಿಷ ನೀಡಿರುವ ಅನುಮಾನ ಇದೆ. ಸುದೀಪ್ನನ್ನು ಮಾ.೨೧ರಂದು ಕಾರ್ಕಳದ ಆಸ್ಪತ್ರೆಗೆ ಸೇರಿಸಿ ಈ ಬಗ್ಗೆ ನನ್ನ ಅಕ್ಕನ ಮಗನಿಗೆ ಮಾ.೨೨ರಂದು ಕರೆ ಮಾಡಿ ಮೊಹಿತಿ ನೀಡಿದ್ದಾರೆ. ಅದೇ ದಿನ ನಾವು ಆಸ್ಪತ್ರೆಗೆ ಹೋದಾಗ ಅಲ್ಲಿ ಸೌಮ್ಯ, ಆಕೆಯ ತಂದೆ, ತಾಯಿ, ತಮ್ಮ ಇದ್ದರು. ಸುದೀಪ್ ಜೊತೆ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ನಮ್ಮ ಮುಂದೆಯೇ ಸುದೀಪ್ನನ್ನು ಅಲ್ಲಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಅದೇ ದಿನ ರಾತ್ರಿ ಅಕ್ಕನ ಮಗನಿಗೆ ಮತ್ತೆ ಕರೆ ಮಾಡಿ ಸುದೀಪ್ನನ್ನು ಉಡುಪಿ ಅಥವಾ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿರುವುದಾಗಿ ಮಾಹಿತಿ ನೀಡಿದ್ದರು. ಮರು ದಿನ ಸುದೀಪ್ನ ಮೊಬೈಲ್ಗೆ ಕರೆ ಮಾಡಿದಾಗ ಬೇರೆ ಯಾರೋ ಸ್ವೀಕರಿಸಿದ್ದು ಸುದೀಪ್ನನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದಾರೆ. ನಾವು ಅಲ್ಲಿಗೆ ಹೋದಾಗ ಸುದೀಪ್ ಚಿಂತಾಜನಕ ಸ್ಥಿತಿಯಲ್ಲಿ ಇದ್ದ. ವೈದ್ಯರಿಗೆ ರಿಕ್ವೆಸ್ಟ್ ಮಾಡಿದ ಮೇಲೆ ನಮಗೆ ನೋಡಲು ಅವಕಾಶ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಪೊಲೀಸ್ನವರು ಬಂದು ಹೇಳಿಕೆ ಪಡೆದುಕೊಂಡಿದ್ದಾರೆ. ನಾವು ಹೋದಂತೆ ಸೌಮ್ಯ, ಅವಳ ತಂದೆ ಅಲ್ಲಿಂದ ಪರಾರಿಯಾದರು. ಸುದೀಪ್ನ ಲಿವರ್ಗೆ ಡ್ಯಾಮೇಜ್ ಆಗುತ್ತಿದೆ. ಮಂಗಳೂರಿಗೆ ಕರೊದೊಯ್ಯುವಂತೆ ಅಲ್ಲಿನ ವೈದ್ಯರ ಸೂಚನೆಯಂತೆ ನಾವು ಮಂಗಳೂರು ಯೆನೆಪೊಯ ಆಸ್ಪತ್ರೆಗೆ ಸೇರಿಸಿದ್ದೇವೆ. ಲಿವರ್ ಡ್ಯಾಮೇಜ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮಾ.೨೯ರಂದು ಸುದೀಪ್ ಮೃತಪಟ್ಟಿದ್ದಾನೆ ಎಂದು ದಾಮೋದರ ರೈ ಮಾಹಿತಿ ನೀಡಿದ್ದರು. ಸೌಮ್ಯ ಮೊದಲ ಪತಿಯಿಂದ ಡೈವೋರ್ಸ್ ಪಡೆದು ಇನ್ನೊಬ್ಬರ ಜೊತೆ ವಿವಾಹವಾಗಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಅವರಿಂದ ಡೈವೋರ್ಸ್ ಆಗಿಲ್ಲ. ಇದೇ ರೀತಿ ಸೌಮ್ಯಳಿಂದ ಹಲವರಿಗೆ ತೊಂದರೆಯಾಗಿದೆ. ಸೌಮ್ಯಳಿಂದ ಇನ್ನು ಯಾರಿಗೂ ಅನ್ಯಾಯ ಆಗಬಾರದು. ಹೋದ ಜೀವ ಮತ್ತೆ ಬರುವುದಿಲ್ಲ. ನಮ್ಮಂತೆ ಯಾರ ತಂದೆ, ತಾಯಿಗೂ ಅನ್ಯಾಯ ಆಗಬಾರದು. ಸೌಮ್ಯಳಿಂದ ಹಿಂಸೆ ಆಗುತ್ತಿರುವ ಬಗ್ಗೆ ಸುದೀಪ್ ನಮಗೆ ಮಾಹಿತಿ ನೀಡಿದ್ದ. ಮಗನ ಮೊಬೈಲ್ ಸೌಮ್ಯ ಶೆಟ್ಟಿಯ ಬಳಿಯೇ ಇದೆ. ಸುದೀಪ್ ಜೊತೆ ವಿವಾಹದ ವೇಳೆ ಮೊದಲೇ ತನಗೆ ಮದುವೆ ಆಗಿರುವ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಗೂ ಆಕೆ ಮಾಹಿತಿ ನೀಡಿಲ್ಲ. ಸುದೀಪ್ ಕೋಮಾ ಸ್ಥಿತಿಯಲ್ಲಿದ್ದ ವೇಳೆಯಲ್ಲಿ ಯಾರ್ಯಾರಿಗೋ ಏನೋನೋ ಮೇಸೆಜ್ ಮಾಡಿದ್ದಾಳೆ. ಆದ್ದರಿಂದ ಈ ಪ್ರಕರಣವನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸದೆ, ಸಂಪೂರ್ಣ ಸತ್ಯಾಂಶ ಬಹಿರಂಗವಾಗುವಂತೆ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಾಮೋದರ್ ರೈ ಒತ್ತಾಯಿಸಿದ್ದರು. ಈ ಮಧ್ಯೆ ತನಿಖೆ ಚುರುಕುಗೊಳಿಸಿದ ಪೊಲೀಸರು ಸುದೀಪ್ ರೈ ಅವರ ಸಾವಿಗೆ ಕಾರಣರಾದ ಆರೋಪದಡಿ ಸೌಮ್ಯ ಶೆಟ್ಟಿ ಅವರನ್ನು ಬಂಧಿಸಿ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹಕೆ ಕಳುಹಿಸಿದ್ದಾರೆ.








