ಅಪಹರಣದ ಕಥೆ ಹೆಣೆದು ಯಾಮಾರಿಸಿದ ವಿದ್ಯಾರ್ಥಿನಿ-ಪೊಲೀಸರು ಸತ್ಯಾಂಶ ಬಯಲು ಮಾಡಿದ್ದು ಹೇಗೆ…?

0

ಬೆಳ್ತಂಗಡಿ: ಕಾಶಿಬೆಟ್ಟುವಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ೧೭ ವರ್ಷದ ಅಪ್ರಾಪ್ತ ಬಾಲಕಿಯೋರ್ವಳು ಬೆಳ್ತಂಗಡಿ ಪಟ್ಟಣದ ಸುದೆಮೊಗರು ಎಂಬಲ್ಲಿರುವ ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಓಮಿನಿ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಆಕೆಯನ್ನು ಅಪಹರಿಸಲು ಯತ್ನಿಸಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂಬ ವಿಚಾರ ಕಟ್ಟುಕಥೆ ಎಂದು ಪೊಲೀಸ್ ಇಲಾಖೆಯ ತನಿಖೆಯಿಂದ ಬಯಲಾಗಿದೆ. ಬಳಿಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡು ಬಂದಿಲ್ಲ.

ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟು ಮಾಡಿಕೊಂಡ ಗಾಯ ಎಂದು ತಿಳಿಸಲಾಗಿದೆ. ನಂತರ ಬಾಲಕಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಲಾಗಿದ್ದು ಈ ಘಟನೆ ಕುರಿತು ತಾನು ಸುಳ್ಳು ಹೇಳಿಕೆ ನೀಡಿzನೆಂದು ತಿಳಿಸಿರುವುದಾಗಿದೆ. ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಸದ್ರಿ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು, ಅಪ್ರಾಪ್ತೆಗೆ ಚಲಾಯಿಸಲು ವಾಹನ ನೀಡಿರುವ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಘಟನೆಯ ವಿವರ: ಬೆಳ್ತಂಗಡಿ ಪಟ್ಟಣದ ಸುದೆಮೊಗರು ಎಂಬಲ್ಲಿ ವಾಸವಿರುವ ಲೋಕೋಪಯೋಗಿ ಇಲಾಖಾ ಕಚೇರಿಯ ಸಿಬ್ಬಂದಿಯೋರ್ವರ ೧೭ ವರ್ಷ ಹರೆಯದ ಪುತ್ರಿ ಕಾಶಿಬೆಟ್ಟುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿಯ ಪಿಸಿಎಂಬಿ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತನ್ನ ಮನೆಯಿಂದ ಫೆ.೯ರಂದು ಬೆಳಗ್ಗೆ ೮.೨೦ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಈ ವಿದ್ಯಾರ್ಥಿನಿ ತಾನು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ನಂಬರ್ ಪ್ಲೇಟ್ ಮುಚ್ಚಿದ್ದ ಓಮಿನಿ ಕಾರಿನಲ್ಲಿ ಬಂದ ಮೂವರು ಮುಸುಕುಧಾರಿ ವ್ಯಕ್ತಿಗಳು ತನಗೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದಾರೆ.
ಅಪಹರಣ ಮಾಡುವುದನ್ನು ತಾನು ತಡೆದಾಗ ನನ್ನ ಕೈಗೆ ಮೂರು ಬಾರಿ ಚೂರಿಯಿಂದ ಇರಿದು ಓಮಿನಿ ಕಾರಿನಲ್ಲಿ ಪರಾರಿಯಾಗಿದ್ದಾರೆ. ಅದೇ ದಾರಿಯಲ್ಲಿ ಬರುತ್ತಿದ್ದ ಅಬೂಸಾಲಿ ಎಂಬವರು ನನ್ನನ್ನು ರಕ್ಷಿಸಿದ್ದಾರೆ ಎಂದು ಹೇಳಿದ್ದಳು. ಸುದೆಮೊಗರು ನಿವಾಸಿಯಾಗಿರುವ ಅಬೂಸಾಲಿ ಅವರು ಕೂಡ ಮಾಧ್ಯಮಗಳಿಗೆ ಇದೇ ರೀತಿ ಹೇಳಿಕೆ ನೀಡಿದ್ದರು. ಕೈಗೆ ಇರಿತದ ಗಾಯವಾಗಿದ್ದ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಶಾಸಕ ಹರೀಶ್ ಪೂಂಜ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ವಿದ್ಯಾರ್ಥಿನಿ ಹೇಳಿದ್ದೇನು: ಕೆಲವೊಮ್ಮೆ ತಂದೆ ನನ್ನನ್ನು ಸಂತೆಕಟ್ಟೆ ಬಸ್‌ನಿಲ್ದಾಣಕ್ಕೆ ಬಿಡುತ್ತಾರೆ. ಅಲ್ಲಿಂದ ನಾನು ಕಾಲೇಜ್‌ಗೆ ಹೋಗುತ್ತೇನೆ. ಫೆ.೯ರಂದು ಬೆಳಿಗ್ಗೆ ನಾನು ಸ್ವಲ್ಪ ಬೇಗನೇ ತಂದೆಯ ಸ್ಕೂಟರ್ ತೆಗೆದುಕೊಂಡು ಕಾಲೇಜಿಗೆ ಹೊರಟಿದ್ದೆ. ನನ್ನ ಮನೆಯಿಂದ ಸ್ವಲ್ಪ ದೂರ ಸ್ಕೂಟರ್‌ನಲ್ಲಿ ಹೋಗಿದ್ದೆ. ಅಲ್ಲಿ ನಂಬರ್ ಪ್ಲೇಟ್ ಮುಚ್ಚಿದ್ದ ಓಮಿನಿ ಕಾರಿನ ಹಿಂಭಾಗ ಮಾತ್ರ ಕಾಣಿಸುವಂತೆ ನಿಲ್ಲಿಸಿದ್ದರು. ನಾನು ಯಾವುದೋ ಓಮಿನಿ ಎಂದುಕೊಂಡು ಮುಂದೆ ಹೋದಾಗ ಒಬ್ಬ ದಢೂತಿ ದೇಹದ ಮುಸುಕುಧಾರಿ ವ್ಯಕ್ತಿ ಕೈಯಲ್ಲಿ ಚಾಕು ಹಿಡಿದುಕೊಂಡು ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಗಾಡಿ ಹತ್ತು ಇಲ್ಲ ಸಾಯಿಸುತ್ತೇವಿ ಎಂದರು. ತಕ್ಷಣ ಆತ ಒಳಗಿದ್ದ ಇಬ್ಬರು ವ್ಯಕ್ತಿಗಳಿಗೆ ಸಿಗ್ನಲ್ ಕೊಟ್ಟ. ಆ ಇಬ್ಬರು ನನ್ನನ್ನು ಎಳೆಯುವ ಪ್ರಯತ್ನ ಮಾಡಿದರು. ನಾನು ಒಳಗೆ ಹೋಗದೆ ಇದ್ದಾಗ ಅವರ ಕೈಯಲ್ಲಿದ್ದ ಚಾಕುವಿನಿನಿಂದ ನನ್ನ ಕೈಗೆ ಇರಿದರು. ದಢೂತಿ ವ್ಯಕ್ತಿ ಡ್ರೈವಿಂಗ್ ಸೀಟಿನಲ್ಲಿ ಕೂತ. ಅಷ್ಟರಲ್ಲಿ ಅಬುಸಾಲಿಯವರ ಸ್ಕೂಟರ್‌ನ ಹಾರ್ನ್ ಕೇಳಿಸಿತು. ಆಗ ಅವರ ಗಮನ ಅಲ್ಲಿ ಹೋಯಿತು. ನಾನು ತಕ್ಷಣ ಅವರ ಕೈ ತಪ್ಪಿಸಿ ಸ್ಕೂಟರ್ ಹತ್ತಿ ಮುಂದೆ ಹೋದೆ. ಅವರು ಅಲ್ಲಿಂದ ಎಸ್ಕೇಪ್ ಆದರು. ಅವರನ್ನು ನಾನು ಈ ಹಿಂದೆ ಎಲ್ಲಿಯೂ ನೋಡಿರುವ ರೀತಿ ಕಾಣಿಸುವುದಿಲ್ಲ.

ಅವರು ಮಾತನಾಡುತ್ತಿದ್ದ ಭಾಷೆ ಶುದ್ಧ ಕನ್ನಡವಾಗಿರಲಿಲ್ಲ. ಕಳೆದ ಶನಿವಾರ ನಾನು ಕಾಲೇಜಿನಿಂದ ವಾಪಸ್ ಬರುವ ವೇಳೆ ಅದೇ ಓಮಿನಿ ವಾಹನ ಅದೇ ಜಾಗದಲ್ಲಿ ನಿಂತಿತ್ತು. ಆಗ ನಾನು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರಲ್ಲಿ ಯಾರೂ ಕಾಣಿಸಿರಲಿಲ್ಲ ಎಂದು ಸುದ್ದಿ ನ್ಯೂಸ್ ತಂಡದ ಜತೆ ಮಾತನಾಡುತ್ತಾ ವಿದ್ಯಾರ್ಥಿನಿ ತಿಳಿಸಿದ್ದರು.

ಅಬುಸಾಲಿ ಹೇಳಿದ್ದೇನು?: ನಾನು ಆಕೆ ಕಾಲೇಜಿಗೆ ಹೋಗುವ ಆ ಸಮಯದಲ್ಲಿ ಹೆಚ್ಚಾಗಿ ಆ ವಿದ್ಯಾರ್ಥಿನಿಯ ಹಿಂದೆಯೇ ಇರುತ್ತೇನೆ. ನಾನು ಅಲ್ಲಿ ಹೋದಾಗ ಓಮಿನಿ ಕಾರು ಇರಲಿಲ್ಲ. ಆಕೆಗೆ ಗಾಯಗಳಾಗಿತ್ತು. ತಕ್ಷಣ ಅವಳ ತಂದೆಗೆ ಮಾಹಿತಿ ಕೊಟ್ಟೆ ಎಂದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸುದೆಮೊಗರು ನಿವಾಸಿ ಅಬುಸಾಲಿ ಎಂಬವರು ತಿಳಿಸಿದ್ದರು. ಅವರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಘಟನೆ ನಡೆದೇ ಇಲ್ಲ-ಇದೊಂದು ಕಟ್ಟುಕಥೆ-ಪೊಲೀಸ್ ತನಿಖೆಯಲ್ಲಿ ಬಹಿರಂಗ: ತನ್ನ ಮನೆಯಿಂದ ಕಾಲೇಜ್‌ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ೧೭ ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಓಮಿನಿ ಕಾರಿನಲ್ಲಿ ಬಂದ ಮೂವರು ಅಪರಿಚಿತ ಯುವಕರು ಅಪಹರಿಸಲು ಯತ್ನಿಸಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.
ವಿದ್ಯಾರ್ಥಿನಿಗೆ ಚೂರಿ ಇರಿತ ಆಗಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದಾಗ ಭಾರೀ ಆತಂಕ ಸೃಷ್ಟಿಯಾಗಿತ್ತು. ಎಸ್.ಪಿ. ಡಾ. ಅರುಣ್ ಕೆ. ಮತ್ತು ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ಅವರು ತನಿಖೆ ತೀವ್ರಗೊಳಿಸಿದ್ದರು.

ಮಾಹಿತಿ ದೊರೆತ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರ ತಂಡ ಸತತ ತನಿಖೆ ನಡೆಸಿತ್ತು. ತನಿಖೆಯ ಆರಂಭದಲ್ಲಿಯೇ ಇದೊಂದು ಕಟ್ಟುಕಥೆ ಆಗಿರಬಹುದು ಎಂದು ಪೊಲೀಸ್ ಇಲಾಖೆ ಸಂಶಯಿಸಿತ್ತು. ವಿದ್ಯಾರ್ಥಿನಿ ಹೇಳಿದ ಸ್ಥಳದ ಆಸುಪಾಸಿನಲ್ಲಿ ಯಾವುದೇ ಓಮಿನಿ ಕಾರು ಸಂಚರಿಸುವ ಕುರಿತು ಯಾವುದೇ ಸಾಕ್ಷಿ ದೊರೆತಿರಲಿಲ್ಲ. ವಿದ್ಯಾರ್ಥಿನಿಯ ಹೇಳಿಕೆಯಲ್ಲಿಯೂ ವ್ಯತ್ಯಾಸ ಕಂಡು ಬರುತ್ತಿತ್ತು.

ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದ ಅಬುಸಾಲಿ ಎಂಬವರನ್ನು ಸಂಜೆ ವೇಳೆಗೆ ಪೊಲೀಸರು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಯಲಾಗಿದೆ. ತಾನು ಹೋದಾಗ ಅಲ್ಲಿ ಯಾವುದೇ ಓಮಿನಿ ಕಾರು ಇರಲಿಲ್ಲ. ಆಕೆಯ ಕೈಗಳಿಗೆ ಗಾಯಗಳಾಗಿತ್ತು. ಗಾಯ ಹೇಗೆ ಆಗಿತ್ತು ಎನ್ನುವುದು ಗೊತ್ತಿಲ್ಲ. ಆದರೆ ನನ್ನ ಬಳಿ ಕಿಡ್ನಾಪ್ ಪ್ರಯತ್ನ ಆಗಿದೆ ಎನ್ನುವಂತೆ ಹೇಳಿ ಎನ್ನುವಂತೆ ಅಂಗಲಾಚಿ ಬೇಡಿಕೊಂಡಳು. ಅದಕ್ಕಾಗಿ ನಾನು ಒಪ್ಪಿಕೊಂಡೆ ಎಂದು ಅಬುಸಾಲಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಿಮ್ಮ ಕಾಲೇಜ್‌ನ ಬ್ಯಾಗ್ ಎಲ್ಲಿ ಎಂದು ವಿದ್ಯಾರ್ಥಿನಿಯ ಬಳಿ ಪೊಲೀಸರು ಪ್ರಶ್ನಿಸಿದಾಗ ಅದನ್ನು ಕಿಡ್ನಾಪರ್ಸ್ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ಕೆಲವೊಂದು ನೋಟ್ಸ್ ಇತ್ತು ಎಂದು ಹೇಳಿದ್ದಾಳೆ. ಆದರೆ ಆ ವೇಳೆಗಾಗಲೇ ಪೊದೆಯಲ್ಲಿ ಸಿಕ್ಕಿದ್ದ ಆಕೆಯ ಬ್ಯಾಗ್ ಪೊಲೀಸರ ಕೈ ಸೇರಿತ್ತು.

ಅದರಲ್ಲಿ ಕೆಲವು ಪೇಪರ್ ಮತ್ತು ಪೆನ್ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಆ ವೇಳೆಗಾಗಲೇ ಇದು ಕಟ್ಟು ಕಥೆ ಎಂಬುದು ಬಯಲಾಗಿತ್ತು. ಪ್ರಥಮ ಪಿಯುಸಿಯ ಪಿಸಿಎಂಬಿ ವಿದ್ಯಾರ್ಥಿನಿಯಾಗಿರುವ ಆಕೆಗೆ ಬರುವ ಸೋಮವಾರದಿಂದ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿನಿಗೆ ಬೆಳ್ತಂಗಡಿಯ ಕಾಲೇಜಿಗೆ ಹೋಗಲು ಇಷ್ಟ ವಿರಲಿಲ್ಲ. ಮಂಗಳೂರಿನ ಕಾಲೇಜಿಗೆ ಸೇರಬೇಕೆಂಬ ಮನಸಿತ್ತು, ಹೀಗಾಗಿ ಈ ರೀತಿ ಡ್ರಾಮಾ ಮಾಡುವ ಮೂಲಕ ಅಬುಸಾಲಿಯವರ ಮನವೊಲಿಸಿ ಕಟ್ಟುಕಥೆ ಸೃಷ್ಟಿಸಿದ್ದಾಳೆ ಎಂಬುದು ಖಚಿತವಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಿಫಲ: ಶಾಸಕ ಹರೀಶ್ ಪೂಂಜ ಆಕ್ರೋಶ: ಶಾಸಕ ಹರೀಶ್ ಪೂಂಜ ಅವರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದ ಬಳಿಕ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿ ಚೂರಿಯಿಂದ ಇರಿದಿರುವ ಘಟನೆಯನ್ನು ಖಂಡಿಸುವುದಾಗಿ ಸಿಪಿಐಎಂ ಮತ್ತು ವಿಮೆನ್ ಇಂಡಿಯಾ ಮೂವ್ಮೆಂಟ್ ಹೇಳಿಕೆ ನೀಡಿತ್ತು. ಬೆಳ್ಳಂಬೆಳಗ್ಗೆ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿ ಚೂರಿಯಿಂದ ಇರಿದ ಘಟನೆ ನಡೆದಿದೆ ಎಂದು ಮಾಹಿತಿ ಹರಿದಾಡಿದಾಗ ಭಯದ ವಾತಾವರಣ ಉಂಟಾಗಿತ್ತು. ಇದನ್ನು ಕೆಲವೇ ಗಂಟೆಗಳ ಅಂತರದಲ್ಲಿ ಭೇದಿಸಿ ಪೊಲೀಸರು ಸತ್ಯಾಂಶ ಬಯಲಿಗೆಳೆದು ಜನರು ಆತಂಕ ದೂರ ಮಾಡಿದ್ದಾರೆ.
ವಿದ್ಯಾರ್ಥಿನಿ ಹೇಳಿದಂತೆ ಕೇಳಿ ಹೇಳಿಕೆ ನೀಡಿದ್ದ ಅಬುಸಾಲಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ಪೊಲೀಸ್ ಇಲಾಖೆಯಲ್ಲಿ ಚರ್ಚೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಜನ ನಿರ್ಭೀತಿಯಿಂದ ಓಡಾಡಬೇಕಾದ ಸಮಯದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ ಎಂದರೆ ರಾಜ್ಯದಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ ಎಂದು ಗೃಹ ಇಲಾಖೆಯನ್ನು ಕೇಳಬೇಕಾಗಿದೆ. ಈ ರೀತಿಯ ಘಟನೆಗಳು ನಡೆಯ ಬೇಕಾದರೆ ಪೊಲೀಸ್ ಇಲಾಖೆಯವರು ಸಮರ್ಪಕವಾದ ಕೆಲಸಗಳನ್ನು ಮಾಡುತ್ತಿದ್ದಾರಾ ಎಂದು ಆತ್ಮ ವಿಮರ್ಶೆ ಮಾಡಬೇಕಾಗಿದೆ. ಇಂತಹ ಘಟನೆಯ ಮೂಲವನ್ನು ಪತ್ತೆಹಚ್ಚುವ ಕೆಲಸವನ್ನು ಸರ್ಕಾರ ಮತ್ತು ಗೃಹ ಇಲಾಖೆ ಮಾಡಬೇಕಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದರು.

ಫೆ.೯ರಂದು ಸುದೆಮೊಗರು ಎಂಬಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಹಲ್ಲೆ ಹಾಗೂ ಅಪಹರಣ ಯತ್ನ ನಡೆದಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ ತಕ್ಷಣವೇ ವಿಚಾರ ತಿಳಿದ ಶಾಸಕ ಹರೀಶ್ ಪೂಂಜ ಅವರು ವಿದ್ಯಾರ್ಥಿನಿ ದಾಖಲಾಗಿದ್ದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿದ್ಯಾರ್ಥಿನಿ ಹಾಗೂ ಆಕೆಯ ತಂದೆಯ ಜೊತೆ ಮಾತನಾಡಿ ಘಟನೆಯ ವಿವರ ಪಡೆದುಕೊಂಡ ನಂತರ ಮಾಧ್ಯಮದ ಮುಂದೆ ಮಾತನಾಡಿದ್ದ ಶಾಸಕ ಹರೀಶ್ ಪೂಂಜ ಅವರು ಬೆಳ್ಳಂಬೆಳಗ್ಗೆ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಇಂತಹ ಕೃತ್ಯ ನಡೆದಿರುವುದನ್ನು ಖಂಡಿಸುತ್ತೇನೆ. ಈ ಕುರಿತಾಗಿ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿzನೆ. ತಕ್ಷಣ ಅಲ್ಲಿರುವ ಸಿಸಿ ಕ್ಯಾಮರಾ ಫೂಟೇಜ್ ತೆಗೆದು ಅಪರಾಧಿಗಳನ್ನು ಬಂಧಿಸುವಂತೆ ಸೂಚನೆಯನ್ನೂ ಕೊಟ್ಟಿzನೆ ಎಂದು ಹೇಳಿದ್ದರು.

ಇದು ಚಿಕ್ಕ ಘಟನೆ ಅಲ್ಲ. ಬೆಳಗ್ಗಿನ ಸಂದರ್ಭದಲ್ಲಿ ಈ ರೀತಿ ನಡೆಯಬೇಕಾದರೆ ಇನ್ನು ಮುಂದೆ ಜನ ಓಡಾಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಈ ಆತಂಕವನ್ನು ನಿವಾರಿಸುವ ಕೆಲಸ ಗೃಹ ಇಲಾಖೆ ಮಾಡಬೇಕು. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ. ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯನ್ನು ಸರಿಪಡಿಸುವ ಜವಬ್ದಾರಿಯನ್ನು ಗೃಹ ಇಲಾಖೆ ಹೊಂದಿದೆ. ಆದರೆ ವ್ಯವಸ್ಥೆಯನ್ನು ಸಡಿಲಬಿಟ್ಟ ಕಾರಣ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಶಾಸಕರು ಹೇಳಿದ್ದರು. ಇದೇ ವೇಳೆ ಸುಮಂತ್ ಕೊಲೆ ಪ್ರಕರಣದ ಕುರಿತಾಗಿಯೂ ಹೇಳಿಕೆ ಕೊಟ್ಟಿದ್ದ ಶಾಸಕರು ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿzನೆ. ಸದನದಲ್ಲಿಯೂ ಈ ವಿಚಾರ ಪ್ರಸ್ತಾಪ ಮಾಡಿzನೆ. ಆದರೆ ಇಷ್ಟು ದಿನಗಳಾದರೂ ತಾರ್ಕಿಕವಾದ ಉತ್ತರವನ್ನು ಪೊಲೀಸ್ ಇಲಾಖೆಯವರಾಗಲೀ ಗೃಹ ಇಲಾಖೆಯಾಗಲೀ ಕೊಟ್ಟಿಲ್ಲ. ಈ ಪ್ರಕರಣದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಆದಷ್ಟು ಬೇಗ ಉತ್ತರ ಸಿಗಬೇಕು ಎಂದು ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here