ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದ ವಿವಾದ: ಪರವಾನಗಿ ರದ್ದು ಆದೇಶ ವಾಪಸ್ ಪಡೆದ ಪ. ಪಂ. ಮುಖ್ಯಾಧಿಕಾರಿ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ದೂರು: ಹರಿಪ್ರಸಾದ್ ಎಚ್ಚರಿಕೆ

0

ಬೆಳ್ತಂಗಡಿ: ಸರಕಾರದ ಜಮೀನಿನಲ್ಲಿ ಅಕ್ರಮವಾಗಿ ಸಭಾಭವನ ನಿರ್ಮಾಣ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಿದ ಬಳಿಕ ದಿಢೀರ್ ಆಗಿ ತಮ್ಮ ನಿರ್ಧಾರವನ್ನು ಬದಲಾಯಿಸಿ ಮೊದಲು ನೀಡಿದ್ದ ನೊಟೀಸ್ ರದ್ದು ಪಡಿಸಿದ ಘಟನೆಗೆ ಸಂಬಂಧಿಸಿ ದೂರುದಾರರಾಗಿರುವ ಕುವೆಟ್ಟು ಗ್ರಾಮದ ಮದ್ದಡ್ಕ ಸರಸ್ವತಿ ಕೃಪಾದ ನಿವಾಸಿ ಹರಿಪ್ರಸಾದ್ ಅವರು ಸ್ಪಷ್ಟನೆ ಬಯಸಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಈಗಾಗಲೇ ತಮ್ಮ ವಿರುದ್ಧ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಹಿತ ಅವ್ಯವಹಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಅಗತ್ಯವಾಗಿ ವ್ಯವಹರಿಸಬೇಕಾಗುತ್ತದೆ ಎಂದು ಹರಿಪ್ರಸಾದ್ ಅವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಮುಖ್ಯಾಧಿಕಾರಿಗೆ ಹರಿ ಪ್ರಸಾದ್ ಪತ್ರ: ದಿನಾಂಕ: ೨೯.೦೧.೨೦೨೬ರಂದು ತಾವು ಜಾರಿಗೊಳಿಸಿದ ಸಂಖ್ಯೆ: ಪ.ಪಂ.ಬೆ:೧ಸಿ.ಆರ್/ನೋಟೀಸು/೨೦೨೫-೨೬ರಂತೆ ಸ.ನಂಬ್ರ ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿನಲ್ಲಿ ಖಾಸಗಿ ಸಭಾಭವನ ನಿರ್ಮಿಸಿರುವ ಅನಧಿಕೃತ ಖಾಸಗಿ ವಾಣಿಜ್ಯ ಕಟ್ಟಡ ಮಾಲಕರಾದ ಕೆ. ಜಯವರ್ಮರಾಜ ಬಲ್ಲಾಳ್‌ರವರಿಗೆ ನೀಡಿದ ನೋಟೀಸು ಕಾನೂನು ಪ್ರಕಾರ ನ್ಯಾಯ ಸಮ್ಮತವಾಗಿರುತ್ತದೆ. ದಿನಾಂಕ: ೩೦.೦೧.೨೦೨೬ರಂದು ತಾವು ಅಧಿಕಾರ ದುರುಪಯೋಗಪಡಿಸಿ ಸೃಷ್ಟಿಸಿದ ಸಂಖ್ಯೆ: ಪ.ಪಂ.ಬೆ:ಸಿಆರ್/ಹಿಂಬರಹ/೨೦೨೫-೨೬ ಹಿಂಬರಹದಲ್ಲಿ ತಿಳಿಸಿದಂತೆ ಬೆಳ್ತಂಗಡಿ ಗ್ರಾಮದ ಸ.ನಂಬ್ರ ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿನಲ್ಲಿ ಕುತ್ಯಾರು ಶಾಂತೇಶ್ವರ ಬಸ್ತಿಗೆ ಯಾವುದೇ ಬಸದಿ ಪೊರಂಬೋಕು ಜಮೀನು ಮಂಜೂರಾಗಿರುವುದಿಲ್ಲ. ದಾಖಲೆಗಳ ಪ್ರಕಾರ ಕುತ್ಯಾರು ಶಾಂತೇಶ್ವರ ಬಸ್ತಿ ಸರಕಾರಕ್ಕೆ ಸೇರಿದ ಬಸದಿಯಾಗಿದ್ದು ಅಡಂಗಾಲ್‌ನಲ್ಲಿ ಮಂಕಿ ಗಣಪಯ್ಯ ಎಂಬವರು ಶಾಂತೇಶ್ವರ ದೇವಸ್ಥಾನದ ಪ್ರಕೃತ ಆಡಳಿತದಾರರು ಎಂದು ಸರಕಾರಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಹಾಗೂ ಕಾಲಂ ೧೩ರಲ್ಲಿ ಷರಾದಲ್ಲಿ ಬಸ್ತಿ ಎಂದು ನಮೂದಾಗಿರುತ್ತದೆ. ದಿನಾಂಕ: ೦೯.೦೨.೧೯೫೧ನೇ ಇಸವಿಯಲ್ಲಿ ಕುತ್ಯಾರು ಶಾಂತೇಶ್ವರ ಬಸ್ತಿಗೆ ಮತ್ತು ಸರ್ವೆ ನಂಬ್ರ: ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿಗೆ ಬೆಳ್ತಂಗಡಿ ತಾಲೂಕು ತಹಶೀಲ್ದಾರರೇ ಭೂಮಾಲಕರಾಗಿರುವುದರಿಂದ ಸರಕಾರಿ ಮೊರಂಬೋಕು ಜಮೀನಿನಲ್ಲಿ ಬೆಳ್ತಂಗಡಿ ತಾಲೂಕು ತಹಶೀಲ್ದಾರರ ಎನ್.ಒ.ಸಿ. ಇಲ್ಲದೆ ಖಾಸಗಿ ಸಭಾಭವನ ನಿರ್ಮಿಸಲು ಅಥವಾ ಖಾಸಗಿ ಇತರ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲು ಅಥವಾ ಅನಧಿಕೃತ ಕಟ್ಟಡಗಳಲ್ಲಿ ವ್ಯವಹರಿಸಲು, ಉದ್ದಿಮೆ ಪರವಾನಿಗೆ ನೀಡಿ ಸಹಕರಿಸಲು ತಮ್ಮ ಇಲಾಖೆ ಯಾವುದೇ ರೀತಿಯ ಅಧಿಕಾರವನ್ನು ಹೊಂದಿರುವುದಿಲ್ಲ.

ಬೆಳ್ತಂಗಡಿ ತಾಲೂಕು ಕಛೇರಿಯಿಂದ ಸ.ನಂಬ್ರ ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಬಿಟ್ಟ ಹೊರಂಬೋಕು ಜಮೀನನ್ನು ಮತ್ತು ಕುತ್ಯಾರು ಶಾಂತೇಶ್ವರ ಬಸ್ತಿಯನ್ನು ಕೆ. ಜಯವರ್ಮರಾಜ ಬಲ್ಲಾಳ್ ಅಥವಾ ಶ್ರೀಮತಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮನವರಿಗೂ ಸಹ ಹಸ್ತಾಂತರಿಸಿರುವುದಿಲ್ಲ ಅಥವಾ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನು ಸರಕಾರದಿಂದ ಸದ್ರಿಯವರಿಗೆ ಯಾವುದೇ ರೀತಿಯಲ್ಲಿಯೂ ಮಂಜೂರಾಗಿರುವುದಿಲ್ಲ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸ್ಪಷ್ಟನೆ ಬಯಸಿರುವ ಪತ್ರದಲ್ಲಿ ದೂರುದಾರ ಹರಿಪ್ರಸಾದ್ ಉಲ್ಲೇಖಿಸಿದ್ದಾರೆ.

ಸಾಮಾನ್ಯ ಜ್ಞಾನ ಇಲ್ಲದೆ ಅಧಿಕಾರ ದುರುಪಯೋಗ-ಕಾನೂನು ಉಲ್ಲಂಘನೆ: ದಿನಾಂಕ ೩೧/೦೧/೨೦೨೬ ರಂದು ಸಂಖ್ಯೆ: ಪ.ಪಂ.ಬೆ:೧ಸಿ.ಆರ್/ಹಿಂಬರಹ/೨೦೨೫-೨೬ರಂತೆ ಯಾವುದೇ ಹಿಂಬರಹವನ್ನು ನೀಡಲು ತಾವು ಅಧಿಕಾರವನ್ನು ಹೊಂದಿರುವುದಿಲ್ಲ. ಪ್ರತಿವಾದಿಯವರು ಕಾನೂನು ಪ್ರಕಾರ ಅಪೀಲು ಸಲ್ಲಿಸಬೇಕಾಗಿತ್ತು. ಪ್ರತಿವಾದಿ ಅಡಂಗಾಲ್‌ನಲ್ಲಿ ಬಸದಿ ಪೊರಂಬೋಕು ಎಂಬ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲದ ಮಂಕಿ ಗಣಪಯ್ಯ ಎಂಬವರು ಶಾಂತೇಶ್ವರ ದೇವಸ್ಥಾನದ ಪ್ರಕೃತ ಆಡಳೆದಾರರು ಎಂಬ ಉಲ್ಲೇಖವಿರುವ ಸರಕಾರಿ ದಾಖಲೆಯನ್ನು ಹಾಜರುಪಡಿಸಿದರೂ ಸಹ ಸರಕಾರಿ ಪೊರಂಬೋಕು ಜಮೀನಿನಲ್ಲಿ ಖಾಸಗಿ ಸಭಾಭವನ ನಿರ್ಮಿಸಲು ಅವಕಾಶವಿರುವುದಿಲ್ಲ ಎಂಬ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದೆ ಅಧಿಕಾರ ದುರುಪಯೋಗಪಡಿಸಿ ತಾವು ಹಿಂಬರಹವನ್ನು ನೀಡಿ ಕಾನೂನು ಉಲ್ಲಂಘನೆ ಮಾಡಿರುತ್ತೀರಿ. ಕೆ. ಜಯವರ್ಮರಾಜ ಬಲ್ಲಾಳರು ಹಾಜರುಪಡಿಸಿದ ಸ.ನಂಬ್ರ: ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿನ ದಾಖಲೆಗಳಲ್ಲಿ ಎಲ್ಲಿಯೂ ಜಮೀನನ್ನು ಬಸದಿ ಪೊರಂಬೋಕು ಎಂಬುವುದಾಗಿ ಮೀಸಲಿರಿಸಿದ ಯಾವುದೇ ದಾಖಲೆಗಳು ಬೆಳ್ತಂಗಡಿ ಕಂದಾಯ ಇಲಾಖೆಯ ಸರ್ವೆ ಮತ್ತು ಸೆಟ್ಲಮೆಂಟ್ ರಿಜಿಸ್ಟ್ರಿಯಲ್ಲಿ ದಾಖಲೆ ಇರುವುದಿಲ್ಲ.

ಅಲ್ಲದೆ ಸೆಟ್ಲಮೆಂಟ್ ರಿಜಿಸ್ಟ್ರಿಯಲ್ಲಿ ಪಟ್ಟಾದಾರನ ನಂಬ್ರ ಮತ್ತು ಹೆಸರಿನ ಕಾಲಂನಲ್ಲಿ (ಮಂಕಿ ಗಣಪಯ್ಯ ಎಂಬವರ ಹೆಸರನ್ನು ಹೊರತುಪಡಿಸಿ) ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದವರಿಗೆ ಯಾವುದೇ ಸರಕಾರಿ ಇಲಾಖೆ ಕುತ್ಯಾರು ಶಾಂತೇಶ್ವರ ಬಸ್ತಿಯ ಆಡಳೆದಾರರು ಎಂಬ ಬಗ್ಗೆ ಯಾವುದೇ ಸನ್ನದು ನೀಡಿರುವುದಿಲ್ಲ. ಕಾರಣವೇನೆಂದರೆ, ಸ.ನಂಬ್ರ ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿಗೆ ಸಂಪೂರ್ಣವಾಗಿ ಬೆಳ್ತಂಗಡಿ ತಾಲೂಕು ತಹಶೀಲ್ದಾರರೇ ಭೂ ಮಾಲಕರಾಗಿರುವುದರಿಂದ ಸೆಟ್ಲಮೆಂಟ್ ರಿಜಿಸ್ಟ್ರಿಯಲ್ಲಿ ಯಾರ ಹೆಸರನ್ನೂ ಸಹ ಉಲ್ಲೇಖಿಸಿರುವುದಿಲ್ಲ. ೧೯೬೭ರಿಂದ ಯಾವುದೇ ಒಂದು ಜಮೀನಿನ ಪಹಣಿ ಪತ್ರಿಕೆಯ ೯ನೇ ಕಾಲಂನಲ್ಲಿ ಜಮೀನಿನ ಭೂ ಮಾಲೀಕರ ಹೆಸರನ್ನು ಉಲ್ಲೇಖಿಸಲಾಗುತ್ತದೆ.

ಪಹಣಿ ಪತ್ರಿಕೆಯನ್ನು ಹೊರತುಪಡಿಸಿ ಅಡಂಗಾಲ್ ಪ್ರತಿಯನ್ನು ದೃಢೀಕರಿಸಲು ತಮಗೆ ಯಾವುದೇ ಅಧಿಕಾರವಿರುವುದಿಲ್ಲ. ಆದುದರಿಂದ ದಿನಾಂಕ:೨೯.೦೧.೨೦೨೬ರಂದು ತಾವು ಸಂಖ್ಯೆ: ಪ.ಪಂ. ಬೆ:೧ಸಿ.ಆರ್/ನೋಟೀಸು/೨೦೨೫-೨೬ ನೋಟೀಸಿನಲ್ಲಿ ತಿಳಿಸಿದಂತೆ ಕೆ. ಜಯವರ್ಮರಾಜ ಬಲ್ಲಾಳ್‌ರವರು ಕಾನೂನು ಪ್ರಕಾರ ಸ.ನಂಬ್ರ; ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿನ ಪಹಣಿ ಪತ್ರಿಕೆಯನ್ನೇ ಹಾಜರುಪಡಿಸಿರುತ್ತಾರೆ. ಬಸದಿ ಪೊರಂಬೋಕು ಜಮೀನು ಎಂಬ ಬಗ್ಗೆ ಬೆಳ್ತಂಗಡಿ ತಾಲೂಕು ಕಛೇರಿಯಿಂದ ಯಾವುದೇ ದೃಢೀಕರಣವನ್ನು ಪಡೆಯದೆ ದಿನಾಂಕ: ೨೯.೦೧.೨೦೨೬ರಂದು ಸಂಖ್ಯೆ: ಪ.ಪಂ.ಬೆ:ಟಸಿ.ಆರ್/ನೋಟೀಸು/೨೦೨೫-೨೬ ನೋಟೀಸನ್ನು ಹಿಂಪಡೆದು ದಿನಾಂಕ ೩೧.೦೧.೨೦೨೬ರಂದು ಸಂಖ್ಯೆ: ಪ.ಪಂ.ಬೆ:೧ಸಿ.ಆರ್/ ಹಿಂಬರಹ/೨೦೨೫-೨೬ ಹಿಂಬರಹವನ್ನು ನೀಡಲು ತಮಗೆ ಯಾವುದೇ ಅಧಿಕಾರವಿರುವುದಿಲ್ಲ. ಅದುದರಿಂದ ತಾವು ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರರ ಆರ್‌ಐಎಸಿಆರ್ ೪೬೪/೨೦೨೫ ಕುತ್ಯಾರು ಶಾಂತೇಶ್ವರ ಬಸ್ತಿಯ ಸರಕಾರಿ ದಾಖಲೆ, ಎನ್‌ಡಿಸ್:ಆರ್‌ಬಿಸಿಆರ್:೭೮/೨೦೨೫-೨೬/ಇಆ ಮಾಹಿತಿ, ಆರ್‌ಐಎಸಿಆರ್ ೨೬೧/೨೦೨೫, ಸ.ನಂಬ್ರ ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಮೊರಂಬೋಕು ಪಹಣಿ ಪತ್ರಿಕೆ, ಸಂಖ್ಯೆ: ಪಂ.ಪ.ದೆ:೧ಸಿ.ಆರ್./ಮಾ.ಹ.ಅ/೪೭/೨೦೨೫-೨೬ ಹಿಂಬರಹ, ಸಂಖ್ಯೆ: ಪ.ಪಂ.ಬೆ:೧ಸಿ.ಆರ್/ಮಾ.ಹ.ಅ/೬೬/೨೦೨೫-೨೬ ಹಿಂಬರಹದ ದಾಖಲೆಗಳನ್ನು ಪರಿಶೀಲಿಸಿ ದಾಖಲೆ ಸಹಿತ ಸ್ಪಷ್ಟಿಕರಣ ನೀಡಬೇಕಾಗಿರುತ್ತದೆ ಎಂದು ಹರಿಪ್ರಸಾದ್ ಅವರು ಮುಖ್ಯಾಧಿಕಾರಿಗೆ ಸ್ಪಷ್ಟನೆ ಬಯಸಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಯಾವುದೇ ಸಂಬಂಧ ಇಲ್ಲ: ಬೆಳ್ತಂಗಡಿ ಗ್ರಾಮದ ಸ.ನಂ.೬೮-೧೪ ವಿಸ್ತೀರ್ಣ ೪-೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿನಲ್ಲಿರುವ ಜೈನ್‌ಪೇಟೆ ಊರಿನವರ ಕುತ್ಯಾರು ಶಾಂತೇಶ್ವರ ಬಸ್ತಿಯ ಬಗ್ಗೆ ಯಾವತ್ತೂ ಯಾವುದೇ ತಕರಾರು ಆಕ್ಷೇಪವಿರುವುದಿಲ್ಲ. ಬಸ್ತಿಯ ಬಗ್ಗೆ ಅಪಾರವಾದ ಗೌರವವಿದೆ. ಕುತ್ಯಾರು ಶಾಂತೇಶ್ವರ ಬಸ್ತಿಗೂ, ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ಎಂಬ ಸರಕಾರಿ ಪೊರಂಬೋಕು ಜಮೀನಿನಲ್ಲಿರುವ ಖಾಸಗಿ ಟ್ರಸ್ಟ್‌ನ ಅನಧಿಕೃತ ಖಾಸಗಿ ವಾಣಿಜ್ಯ ಸಭಾಭವನಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಸ.ನಂಬ್ರ:೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನಿನ ಪಹಣಿ ಕಾಲಂ ೧೧ರಲ್ಲಿ ನಮೂದಿಸಿರುವ ೩ ಬಸ್ತಿ ಕಟ್ಟಡಗಳಿಗೆ ಕಂದಾಯ ಇಲಾಖೆಯಿಂದ ಯಾವುದೇ ಜಮೀನು ಮಂಜೂರಾಗಿರುವುದಿಲ್ಲ. ಸರಕಾರಿ ಪೊರಂಬೋಕು ಜಮೀನಿನ ಅಡಂಗಲ್‌ನ ೧೩ನೇ ಕಾಲಂನಲ್ಲಿ ಬಸ್ತಿ ಎಂದು ಷರಾ ಮಾತ್ರ ದಾಖಲಾಗಿದೆ ಎಂಬ ಬಗ್ಗೆ ದಿನಾಂಕ:೦೧.೦೧.೨೦೨೬ರಂದು ಆರ್.ಐ.ಎ.ಸಿ.ಆರ್.೪೬೪/೨೦೨೫ರಂತೆ ಬೆಳ್ತಂಗಡಿ ತಹಶೀಲ್ದಾರರು ಮಾಹಿತಿ ನೀಡಿರುತ್ತಾರೆ. ಸದ್ರಿ ಅಡಂಗಲ್‌ನಲ್ಲಿ ಬಸದಿ ಪೊರಂಬೋಕು ಬಗ್ಗೆ ಎಲ್ಲಿಯೂ ಯಾವುದೇ ದಾಖಲೆಗಳಿರುವುದಿಲ್ಲ.

ಬಸದಿಗೆ ಯಾವುದೇ ಜಮೀನು ಕಂದಾಯ ಇಲಾಖೆಯಿಂದ ಮಂಜೂರಾಗದಿರುವ ಸಂದರ್ಭದಲ್ಲಿ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನನ್ನು ಬಸದಿ ಪೊರಂಬೋಕು ಎಂದು ದಾಖಲೆ ರಹಿತವಾಗಿ ವಾದಿಸಿ ಕೆ.ಜಯವರ್ಮರಾಜ ಬಲ್ಲಾಳ್‌ರವರಿಗೆ ಸರಕಾರಿ ಪೊರಂಬೋಕು ಜಮೀನನ್ನು ಭೂ ಕಬಳಿಕೆಗೊಳಿಸಲು ಅಥವಾ ಯಾವುದೇ ಖಾಸಗಿ ಅನಧಿಕೃತ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಕಾನೂನಿನಡಿ ಯಾವುದೇ ಅವಕಾಶಗಳಿರುವುದಿಲ್ಲ. ಬೆಳ್ತಂಗಡಿ ಗ್ರಾಮದ ಸ.ನಂಬ್ರ: ೬೮/೧೪ ವಿಸ್ತೀರ್ಣ ೪.೩೧ ಎಕ್ರೆ ಸರಕಾರಿ ಪೊರಂಬೋಕು ಜಮೀನನ್ನು ಜೈನ್‌ಪೇಟೆ ಊರಿನ ಜೈನ ಮತಸ್ಥರು ಕಾನೂನು ಪ್ರಕಾರ ಬಸ್ತಿಯ ಸಾರ್ವಜನಿಕ ಟ್ರಸ್ಟ್ ರಚಿಸಿ ೪.೩೧ ಎಕ್ರೆ ಸರಕಾರಿ ಹೊರಂಬೋಕು ಜಮೀನನ್ನು ಟ್ರಸ್ಟ್‌ಗೆ ಮಂಜೂರುಗೊಳಿಸುವಂತೆ ಬೆಳ್ತಂಗಡಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಕಂದಾಯ ಇಲಾಖೆಯ ಶರ್ತದಂತೆ ಟ್ರಸ್ಟ್‌ಗೆ ಜಮೀನನ್ನು ಮಂಜೂರುಗೊಳಿಸಿಕೊಂಡು ನಂತರ ಟ್ರಸ್ಟ್‌ನ ಮುಖಾಂತರ ಬಸ್ತಿಯ ಅಭಿವೃದ್ಧಿಗೋಸ್ಕರ ಸಭಾಭವನ, ಯಾತ್ರಿ ನಿವಾಸ, ವೃದ್ಧಾಶ್ರಮ ಇತರ ಯಾವುದೇ ಕಟ್ಟಡಗಳನ್ನು ಟ್ರಸ್ಟ್‌ನ ಹೆಸರಿನಲ್ಲಿ ನಿರ್ಮಿಸಬಹುದಾಗಿದ್ದು, ಅಲ್ಲಿಯ ತನಕ ಸದ್ರಿ ಜಮೀನು ಸರಕಾರದ ಆಸ್ತಿಯಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ

ಲೋಕಾಯುಕ್ತ ನ್ಯಾಯಾಲ ಯದಲ್ಲಿ ವ್ಯವಹರಿಸುವ ಎಚ್ಚರಿಕೆ: ದಿನಾಂಕ:೩೧.೦೧.೨೦೨೬ರಂದು ಕೆ.ಜಯವರ್ಮರಾಜ ಬಲ್ಲಾಳ್‌ರವರಿಗೆ ತಾವು ವಿವೇಕ ರಹಿತವಾಗಿ ಹಾಗೂ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪರಿಶೀಲಿಸಿ ದೃಢೀಕರಣವನ್ನು ಪಡೆಯದೆ ಜಾರಿಗೊಳಿಸಿದ ಸಂಖ್ಯೆ:ಪ.ಪಂ.ದೆ:೧ಸಿ.ಆರ್/ಹಿಂಬರಹ/೨೦೨೫-೨೬ನ್ನು ತಕ್ಷಣ ರದ್ದುಗೊಳಿಸಿ ದಿನಾಂಕ ೨೯.೦೧.೨೦೨೬ರಂದು ತಾವು ಕಾನೂನು ಪ್ರಕಾರ ಹೊರಡಿಸಿದ ಸಂಖ್ಯೆ: ಪ.ಪಂ.ಬೆ:ಸಿ.ಆರ್./ನೋಟೀಸು/೨೦೨೫-೨೬ನ್ನು ಜರೂರಾಗಿ ಜಾರಿಗೊಳಿಸಬೇಕಾಗಿ ಮನವಿ. ತಪ್ಪಿದಲ್ಲಿ ಈಗಾಗಲೇ ತಮ್ಮ ವಿರುದ್ಧ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಹಿತ ಅವ್ಯವಹಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಅಗತ್ಯವಾಗಿ ವ್ಯವಹರಿಸಬೇಕಾಗುತ್ತದೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಯಪಡಿಸಿದೆ ಎಂದು ಹರಿಪ್ರಸಾದ್ ಅವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಯೂ ಟರ್ನ್ ಹೊಡೆದಿದ್ದ ಪ.ಪಂ. ಮುಖ್ಯಾಧಿಕಾರಿ ರಾಜೇಶ್: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಜೈನ್‌ಪೇಟೆಯಲ್ಲಿರುವ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜ್ ರಸ್ತೆಯಲ್ಲಿನ ಸರ್ವೆ ನಂಬರ್ ೬೪/೧೪ರ ೪.೩೧ ಎಕ್ರರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹರಿಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಈ ಕುರಿತು ಸೂಕ್ತ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ಸಭಾಭವನದ ಕೆ.ಜಯವರ್ಮ ರಾಜ ಬಲ್ಲಾಳ್ ಅವರಿಗೆ ಜ.೨೯ರಂದು ನೋಟಿಸ್ ಜಾರಿ ಮಾಡಿದ್ದರು. ಬಳಿಕ ಜಯವರ್ಮ ರಾಜ ಬಳ್ಳಾಲ್ ಅವರು ಸಭಾಭವನದ ಪಹಣಿ ಪತ್ರವನ್ನು ಪಟ್ಟಣ ಪಂಚಾಯತ್ ಕಚೇರಿಗೆ ನೀಡಿದ್ದರು. ಪಹಣಿ ಪತ್ರದಲ್ಲಿ ಸಭಾಭವನ ಇರುವ ಜಾಗ ಸರಕಾರದ್ದು ಎಂದು ನಮೂದಾಗಿರುವುದು ಈ ವೇಳೆ ಕಂಡು ಬಂದಿದೆ ಎಂಬ ಕಾರಣಕ್ಕಾಗಿ ಸಭಾಭವನಕ್ಕೆ ನೀಡಿದ ಉದ್ದಿಮೆ ಪರವಾನಿಗೆಯನ್ನು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ. ರಾಜೇಶ್ ಅವರು ರದ್ದು ಪಡಿಸಿ ಸಭಾಭವನದ ಜಯವರ್ಮ ರಾಜ ಬಳ್ಳಾಲ್‌ರಿಗೆ ನೋಟಿಸ್ ನೀಡಿದ್ದರು.

ನೊಟೀಸ್ ತಲುಪಿದ ದಿನದಿಂದ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನೊಟೀಸ್‌ನಲ್ಲಿ ಸೂಚನೆ ನೀಡಿದ್ದರು. ಜ.೨೯ರಂದು ಜಯವರ್ಮ ರಾಜ ಬಲ್ಲಾಳ್ ಅವರು ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ನೀಡಿದ ದಾಖಲೆಯನ್ನು ಪರಿಶೀಲಿಸಿದ ಮುಖ್ಯಾಧಿಕಾರಿ ಕೆ. ರಾಜೇಶ್ ಅವರು ಮೊದಲು ನೀಡಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ತಿಳಿಸಿ ಜ.೩೧ರಂದು ಮತ್ತೊಂದು ಆದೇಶ ಹೊರಡಿಸಿದ್ದು ಸಭಾಭವನದ ಪರವಾನಗಿ ರದ್ದು ನೋಟೀಸನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ.ನಂ. ೬೮/೧೪ರಲ್ಲಿ ೪.೩೧ ಎಕ್ರೆ ಜಾಗವನ್ನು ಬಸದಿ ಪರಂಬೋಕು ಎಂಬುದಾಗಿ ಮೀಸಲಿರಿಸಿದ ಬಗ್ಗೆ ಕಂದಾಯ ಇಲಾಖೆಯ ಸರ್ವೆ ಮತ್ತು ಸೆಟ್ಲ್ಮಂಟ್ ರಿಜಿಸ್ಟ್ರಿಯಲ್ಲಿ ಪಟ್ಟಾದಾರನ ನಂಬ್ರ ಮತ್ತು ಹೆಸರಿನ ಕಾಲಂನಲ್ಲಿ ಶಾಂತೇಶ್ವರ ದೇವಸ್ಥಾನದ ಪ್ರಕೃತ ಆಡಳ್ತೆದಾರರು ಎಂದು ದಾಖಲಾಗಿದ್ದು ಪಹಣಿಯ ಕಾಲಂ ನಂಬ್ರ ೧೧ರಲ್ಲಿ ನಮೂದಾಗಿರುವ ಬಗ್ಗೆ ಕಂದಾಯ ಇಲಾಖೆಯ ಸರ್ವೆ ಮತ್ತು ಸೆಟ್ಲ್ಮಂಟ್ ರಿಜಿಸ್ಟ್ರಿಯ ನಕಲು ಪ್ರತಿಯನ್ನು ಒದಗಿಸಿರುತ್ತೀರಿ. ಆದುದರಿಂದ ತಮಗೆ ಈ ಕಛೇರಿಯ ದಿನಾಂಕ ಜ.೨೯ರ ನೋಟೀಸು ಸಂಖ್ಯೆ: ಪ.ಪಂ.ಬೆ.೧ಸಿ.ಆರ್/ನೋಟೀಸು/೨೦೨೫-೨೬ರ ನೋಟೀಸನ್ನು ಹಿಂಪಡೆಯಲಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅವರು ಜಯವರ್ಮ ರಾಜ ಬಳ್ಳಾಲ್ ಅವರಿಗೆ ನೀಡಿದ ನೊಟೀಸ್‌ನಲ್ಲಿ ತಿಳಿಸಿದ್ದರು.

LEAVE A REPLY

Please enter your comment!
Please enter your name here